
ಪ್ರಮುಖ ಸುದ್ದಿಮೈಸೂರು
ಶಿಕ್ಷಣದಲ್ಲಿ ಮುಂದಿರುವ ದೇಶ ಅಭಿವೃದ್ಧಿಯಲ್ಲೂ ಮುಂಚೂಣಿಯಲ್ಲಿರಲಿದೆ : ದಲೈಲಾಮಾ ಅಭಿಮತ
ಮೈಸೂರು ವಿಶ್ವವಿದ್ಯಾಲಯದ 97ನೇ ಘಟಿಕೋತ್ಸವದ ಅಂಗವಾಗಿ ಟಿಬೆಟಿಯನ್ ಧರ್ಮಗುರು ದಲೈಲಾಮಾ ಹಾಗೂ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.
ಮಂಗಳವಾರ ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಹಾಲ್ನಲ್ಲಿ ನಡೆದ ಘಟಿಕೋತ್ಸವದಲ್ಲಿ ರಾಜ್ಯಪಾಲ ವಜುಭಾಯ್ ರೂಡಾಭಾಯ್ ವಾಲಾ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ದಲೈಲಾಮ ಶಿಕ್ಷಣ ದೇಶದ ಅಭಿವೃದ್ಧಿಗೆ ಅತಿ ಮುಖ್ಯ. ಯಾವ ದೇಶ ಶಿಕ್ಷಣದಲ್ಲಿ ಮುಂದಿರುತ್ತದೋ ಅದು ಅಭಿವೃದ್ಧಿಯಲ್ಲಿಯೂ ಸಹ ಮುಂಚೂಣಿಯಲ್ಲಿರುತ್ತದೆ. ಮೈಸೂರು ವಿಶ್ವವಿದ್ಯಾಲಯ ದೇಶದ ಪ್ರಮುಖ ವಿಶ್ವವಿದ್ಯಾಲಯವಾಗಿದ್ದು ದೇಶದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದೆ. ಇಂತಹ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಸ್ವೀಕರಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಇಂದು ಸಮಾಜದಲ್ಲಿ ನೈತಿಕ ಮೌಲ್ಯ ಕುಸಿಯುತ್ತಿದೆ. ಎಲ್ಲರಲ್ಲೂ ನಕಾರಾತ್ಮಕ ಚಿಂತನೆ ಬೇರೂರಿದೆ. ಅಲ್ಲದೆ ನೈತಿಕ ಮೌಲ್ಯದ ಕೊರತೆ ಎದ್ದು ಕಾಣುತ್ತಿದೆ. ವಿಶ್ವವಿದ್ಯಾಲಯಗಳು ಕೇವಲ ಶಿಕ್ಷಣ ನೀಡಿದರೆ ಸಾಲದು ಗುಣಾತ್ಮಕ ಶಿಕ್ಷಣದೊಂದಿಗೆ ಮೌಲ್ಯಯುತ ಶಿಕ್ಷಣವನ್ನು ಪ್ರಾಥಮಿಕ ಹಂತದಿಂದಲೂ ನೀಡಬೇಕು. ಅಲ್ಲದೆ ನಮ್ಮಲ್ಲಿರುವ ಬುದ್ದಿವಂತಿಕೆಯನ್ನು ಹೆಚ್ಚು ಬಳಸಿಕೊಳ್ಳಬೇಕು ಎಂದರು. ಭಾವನಾತ್ಮಕವಾಗಿ, ಮಾನಸಿಕವಾಗಿ, ದೈಹಿಕವಾಗಿ ಎಲ್ಲರೂ ಒಂದೇ ಆದರೂ ರಾಷ್ಟ್ರೀಯತೆ, ಬಣ್ಣ ಎಂದು ವಿಭಜನೆ ಮಾಡುತ್ತಿದ್ದೇವೆ. ಸಮಸ್ಯೆಗಳು ನಮ್ಮಿಂದಲೇ ಉದ್ಬವವಾಗುತ್ತಿದ್ದು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುನ್ನಡೆಯಬೇಕು. ಕೇವಲ ಬುದ್ಧನಲ್ಲಿ, ದೇವರಲ್ಲಿ ಮೋಕ್ಷ ಪಡೆಯುವುದು ನಮ್ಮ ಉದ್ದೇಶವಾಗಿರಬಾರದು. ವಿಶ್ವದ 7 ಬಿಲಿಯನ್ ಜನರು ಶಾಂತಿಯಿಂದ, ನೆಮ್ಮದಿಯಿಂದ, ಸಹಬಾಳ್ವೆ ನಡೆಸುವಂತಾಗಬೇಕು ಎಂದು ಹೇಳಿದರು.
ಭಾರತ ನನ್ನ ತವರೂರು: ಬಾಲ್ಯದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದೆ. 16 ವರ್ಷವಿದ್ದಾಗ ಸ್ವಾತಂತ್ರ್ಯ ಕಳೆದುಕೊಂಡು ದೇಶದಿಂದ ಹೊರದೂಡಲ್ಪಟ್ಟೆ. ಟಿಬೆಟಿಯನ್ನರೆಲ್ಲರೂ ನನ್ನನ್ನೇ ನಂಬಿದ್ದರು. ಈ ವೇಳೆ ಕೈಹಿಡಿದು ಆಶ್ರಯ ನೀಡಿದ್ದು ಭಾರತ. ಪ್ರಧಾನಿ ಜವಾಹರಲಾಲ್ ನೆಹರು ಹಾಗೂ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪ ಅವರು ಆಶ್ರಯ ನೀಡಿ ನಮ್ಮ ರಕ್ಷಣೆಗೆ ಮುಂದಾದರು ಎಂದು ಸ್ಮರಿಸಿಕೊಂಡ ಅವರು, ನಾನು ಭಾರತದ ಸುದೀರ್ಘವಾದ ಅತಿಥಿ ಎಂದು ನಗೆ ಚಟಾಕಿ ಹಾರಿಸಿದರು.
ಪ್ರತಿ ವರ್ಷದಂತೆ ಈ ಬಾರಿಯೂ ಮಹಿಳಾ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದು, ಪಿಎಚ್ಡಿ ಸೇರಿದಂತೆ ವಿವಿಧ ಪದವೀಧರರ ಪೈಕಿ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿದ್ದು ಒಟ್ಟು 24,363 ವಿದ್ಯಾರ್ಥಿಗಳಲ್ಲಿ ಶೇ.61 ಅಂದರೆ 14,825 ಮಂದಿ ಮಹಿಳೆಯರು, 9538(ಶೇ.39) ಪುರುಷರಿಗೆ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಪಿಎಚ್.ಡಿ ಪದವೀಧರರಲ್ಲಿ ಒಟ್ಟು 300 ಅಭ್ಯರ್ಥಿಗಳ ಪೈಕಿ ಶೇ.54 ಅಂದರೆ 162 ಮತ್ತು 138(ಶೇ.46) ಪುರುಷರು ಪದವಿ ಪಡೆದಿದ್ದು 312 ಪದಕಗಳು ಮತ್ತು 180 ಬಹುಮಾನಗಳನ್ನು ಪಡೆದುಕೊಂಡರು.
ಅಂಧ ವಿದ್ಯಾರ್ಥಿಯ ಪಿಹೆಚ್ಡಿ ಸಾಧನೆ: ಸಾಧನೆಗೆ ಅಂಗವೈಕಲ್ಯತೆ ಅಡ್ಡಿಯಾಗುವುದಿಲ್ಲ ಎಂದು ಅಂಧ ವಿದ್ಯಾರ್ಥಿ ಮಂಜುನಾಥ್.ಸಿ ಸಾಧಿಸಿ ತೋರಿಸಿದ್ದಾರೆ. ರಾಜ್ಯಶಾಸ್ತ್ರ ವಿಭಾಗದಲ್ಲಿ ಪಿಹೆಚ್ಡಿ ಪಡೆದು ಎಲ್ಲರಿಂದಲೂ ಚಪ್ಪಾಳೆ ಗಿಟ್ಟಿಸಿದ್ದಾರೆ. ಗುರುಬಸವಲಿಂಗ ಸಂಸ್ಕೃತದಲ್ಲಿ ಅತಿ ಹೆಚ್ಚು ಪದಕ ಪಡೆದರೆ, ರಸಾಯನಶಾಸ್ತ್ರ ವಿಭಾಗದಲ್ಲಿ ನೇಹಾ ಶರಣ್ 16 ಚಿನ್ನದ ಪದಕ ಹಾಗೂ 4 ಬಹುಮಾನಗಳೊಂದಿಗೆ ಒಟ್ಟು 20 ಬಹುಮಾನಗಳನ್ನು ಪಡೆದು ವಿಶ್ವವಿದ್ಯಾಲಯಕ್ಕೆ ಟಾಪರ್ ಆಗಿ ಹೊರಹೊಮ್ಮಿದರು.
ಇದೇ ವೇಳೆ ಯದುವೀರ್ ಕೃಷ್ಣದತ್ತ ಚಾಮರಾಜೇಂದ್ರ ಒಡೆಯರ್ ಹಾಗೂ ತ್ರಿಷಿಕಾ ಸಿಂಗ್ ಹಾಜರಿದ್ದು ತಮ್ಮ ತಾಯಿಗೆ ಡಾಕ್ಟರೇಟ್ ನೀಡಿ ಗೌರವಿಸುವುದನ್ನು ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜೂಭಾಯಿ ರೂಢಾಬಾಯ್ ವಾಲಾ, ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್, ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಕುಲಸಚಿವ ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.