
ಮೈಸೂರು
ಮುಂದುವರಿದ ಶಾಸಕ ಎಸ್.ಎ.ರಾಮದಾಸ್ ಪಾದಯಾತ್ರೆ : ಸಮಸ್ಯೆ ಆಲಿಕೆ
ಮೈಸೂರು,ಜೂ.26:- ಹಿಂದಿನ 2 ನೇ ವಾರ್ಡ್ ಹಾಗೂ ವಾರ್ಡ್ ಮರು ವಿಂಗಡಣೆ ಆದ ಬಲಿಕ್ ನೂತನ 50 ನೇ ವಾರ್ಡಿನಲ್ಲಿ ಇಂದು ಬೆಳಿಗ್ಗೆ 7 ಗಂಟೆಯಿಂದ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್ ಎ ರಾಮದಾಸ್ ಪಾದಯಾತ್ರೆ ಮೂಲಕ ವಾರ್ಡಿನಲ್ಲಿ ಆಗುತ್ತಿರುವ ತೊಂದರೆಗಳ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿದರು.
ಈ ವಿಷಯವಾಗಿ ಮಾತನಾಡಿದ ಎಸ್ ಎ ರಾಮದಾಸ್ ಮೈಸೂರಿನಲ್ಲಿ ಇರುವ ಹಳೆಯ ಬಡಾವಣೆಗಳಲ್ಲಿ ಒಂದಾದ ಸುಣ್ಣದಕೇರಿಯ ಬಡಾವಣೆ ಮಹಾರಾಜರ ಕಾಲದಿಂದಲೂ ಇದ್ದು, ಇಲ್ಲಿ ಬಹಳ ಚಿಕ್ಕ ರಸ್ತೆಗಳು, ಚಿಕ್ಕ ಚಿಕ್ಕ ಗಲ್ಲಿಗಳು ಇದ್ದು ಇಲ್ಲಿಗೆ ಮೂಲ ಭೂತ ಸೌಕರ್ಯ ಒದಗಿಸಬೇಕಾದ ಪರಿಸ್ಥಿತಿ ಇದೆ. ಈ ಭಾಗದಲ್ಲಿ ಹೆಚ್ಚಿನ ಜನ ಹೈನುಗಾರಿಕೆಯಲ್ಲಿ ತೊಡಗಿರುವುದರಿಂದ ಇಲ್ಲಿ ಪ್ರತ್ಯೇಕವಾಗಿ ಸಗಣಿ ಸಂಗ್ರಹ ಮಾಡುವ ಕಾರ್ಯ ರೂಪಿಸಿದ್ದು, ಕಳೆದ ಬಿಜೆಪಿ ಸರ್ಕಾರ ಇದ್ದಾಗ ಸಚಿವನಾಗಿ ನಾನು ಮಾಡಿದ್ದು ಇಂದಿಗೂ ಕಾರ್ಯರೂಪದಲ್ಲಿ ಇರುವುದನ್ನು ಕಂಡು ಸಂತೋಷವಾಯಿತು.
ಮುಖ್ಯವಾಗಿ ಎಲ್ಲರಿಗೂ ಮನೆ ಕಲ್ಪಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಕಲ್ಪನೆ ನೀಡಿದ ನರೇಂದ್ರ ಮೋದಿ ಯವರು ಹಳೆ ಮನೆಗಳು, ಗುಡಿಸಲು, ಶೀಟ್ ಮನೆಗಳನ್ನು ಹೊಸದಾಗಿ ನಿರ್ಮಿಸಲು ಸಾಲದ ರೂಪದಲ್ಲಿ ಸಹಾಯ ನೀಡುತ್ತಿದ್ದು, ಈ ವಾರ್ಡಿನಲ್ಲಿ ಸುಮಾರು 176 ಮನೆಗಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಆದರೆ ಇದರಲ್ಲಿ ಬಹಳಷ್ಟು ಮನೆಗಳು ಕೇವಲ ಪಿಲ್ಲರ್ ಮತ್ತು ಪಾಯದ ಕೆಲಸ ಮಾತ್ರ ಮುಗಿದಿದ್ದು, ಉಳಿದ ಕೆಲಸ ಆಗದೆ ಒಟ್ಟು ಕೃಷ್ಣರಾಜ ಕ್ಷೇತ್ರದಲ್ಲಿ ಸುಮಾರು 500 ಮನೆಗಳಿಗಿಂತ ಹೆಚ್ಚು ಮನೆಗಳ ಕೆಲಸ ಮುಗಿದಿಲ್ಲ. ಅತಂತ್ರ ಪರಿಸ್ಥಿತಿಯಲ್ಲಿ ಇದ್ದು ಇಲ್ಲಿಯ ನಿವಾಸಿಗಳು ಬಾಡಿಗೆಮನೆಗಳಲ್ಲಿ ವಾಸಿಸುತ್ತ ತೊಂದರೆಗೆ ಒಳಗಾಗಿದ್ದಾರೆ. 6 ತಿಂಗಳ ಒಳಗಾಗಿ ಮುಗಿಯಬೇಕಿರುವ ಈ ಕಾರ್ಯಕ್ಕೆ ವರ್ಷವಾದರೂ ಇನ್ನು ನೆನೆಗುದಿಗೆ ಬಿದ್ದಿರುವುದು ಸ್ಲಂ ಬೋರ್ಡ್ ನವರು ಅಶಕ್ತನಾದ ಒಬ್ಬ ಕಂಟ್ರಾಕ್ಟರ್ ಗೆ ಕೊಟ್ಟಿರುವುದೇ ಕಾರಣ ಎಂದು ಆರೋಪಿಸಿದರು. ಕಳಪೆ ಕಾಮಗಾರಿ ಆಗಿರುವಲ್ಲಿ ಅದನ್ನು ಒಡೆದು ಹಾಕುವುದಲ್ಲದೆ ಪುನರ್ನಿರ್ಮಾಣ ಮಾಡಬೇಕೆಂದು ಆದೇಶಿಸಲಾಯಿತು. ಇದನ್ನು ಗಮನಿಸಬೇಕಾದ ಅಧಿಕಾರಿಯ ಲೋಪದಿಂದ ಇವೆಲ್ಲ ಆಗಿರುವುದರಿಂದ ಆ ಅಧಿಕಾರಿಯನ್ನು ತಕ್ಷಣದಲ್ಲಿಯೇ ತೆಗೆದು ಹಾಕಬೇಕೆಂದು ತಿಳಿಸಲಾಯಿತು. ಈ ಕಾಮಗಾರಿ ಯಾವಕಾರಣಕ್ಕೆ ವಿಳಂಬವಾಗಿದೆ ಹಾಗೂ ಆಗಿರುವ ಕಳಪೆ ಕಾಮಗಾರಿಯ ಕುರಿತು ತನಿಖೆ ಆಗಬೇಕು ಮತ್ತು ನಿಂತಿರುವ ಕಾರ್ಯಗಳು ತ್ವರಿತದಲ್ಲೇ ಆರಂಭವಾಗಬೇಕೆಂದು ತಿಳಿಸಿದರು.
ಆರೋಗ್ಯದ ಸಮಸ್ಯೆಗಳಿಂದ ಅಂದರೆ ಕ್ಯಾನ್ಸರ್, ಹೃದಯದ ತೊಂದರೆ, ಹೀಗೆ ಹಲವಾರು ತೊಂದರೆ ಗಳಿಂದ ಬಹಳ ಕಷ್ಟದಲ್ಲಿರುವ ಕುಟುಂಬಗಳನ್ನು ಭೇಟಿ ಮಾಡಲಾಯಿತು ಅವರಿಗೆ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ಹಾಗೂ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಧನ ಸಹಾಯ ಮಾಡಿಸಿಕೊಡಲು ತಿಳಿಸಲಾಯಿತು.
2017 ರ ಜನವರಿ, ಫೆಬ್ರವರಿಯಲ್ಲಿ ಬಂದಿರುವ ಅರ್ಜಿಗಳು ಸಹ ವಿಲೇವಾರಿ ಆಗದೆ ಬಾಕಿ ಉಳಿದಿರುವ ವಿಷಯ ತಿಳಿದು ಬಂದಿದ್ದು, ಈ ದಿಢೀರ್ ಭೇಟಿಯ ವೇಳೆ ಅಲ್ಲಿ ಇದ್ದ ಜನ ಸಾಮಾನ್ಯರು ನೇರವಾಗಿ ಬಂದು ಶಾಸಕರಿಗೆ ದೂರು ನೀಡಲು ಆರಂಭಿಸಿದರು. ಅದರಲ್ಲಿ ಮುಖ್ಯವಾಗಿ ದುಡ್ಡಿಲ್ಲದೆ ಯಾವ ಕೆಲಸಗಳು ಆಗುವುದಿಲ್ಲ. ಖಾತೆ ಮಾಡಲು ಸುಮಾರು 5 ಸಾವಿರ ರೂಪಾಯಿಗಳಿಂದ 70 ಸಾವಿರ ರೂಪಾಯಿಗಳ ಲಂಚ ಕೇಳುತ್ತಾರೆ ಎಂದು ತಿಳಿಸಿದರು. ಇದರ ಸತ್ಯವನ್ನು ಅರಿಯಲು ಎಂಟ್ರಿ ಆಗಿರುವ ದಾಖಲೆ ಪುಸ್ತದಲ್ಲಿ ಯಾವುದು ಅರ್ಜಿಸ್ವೀಕರಿಸಿ ಕ್ಲಿಯರ್ ಆಗಿದೆ ಆಗಿಲ್ಲ ಎನ್ನುವ ವಿಷಯದ ಮಾಹಿತಿ ಪಡೆಯಲಾಯಿತು. ಆಗ ಸುಮಾರು ನೂರಾರು ಕಡತಗಳು ಕಾಣೆಯಾಗಿದ್ದು ಇದಕ್ಕೆ ಕಾರಣ ಶಿವಕುಮಾರ್ ಎನ್ನುವ ರೆವೆನ್ಯೂ ಇನ್ಸ್ಪೆಕ್ಟರ್ ಎಂದು ತಿಳಿದಿದ್ದು, ಅದಲ್ಲದೆ ಅಕ್ರಮವಾಗಿ ಖಾತೆಗಳನ್ನು ಮಾಡಿರುವ ವಿಷಯವೂ ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಆಯುಕ್ತರಿಗೆ ಒಂದು ಪತ್ರವನ್ನು ಬರೆದು ಶಿವಕುಮಾರ್ ಅವರ ಮೇಲೆ ಕ್ರಿಮಿನಲ್ ಕೇಸನ್ನು ದಾಖಲಿಸಿ ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೇಂಟ್ ಕೊಡಬೇಕು ಹಾಗೂ ಯಾವ ಯಾವ ಕಡತಗಳು ಕಾಣೆಯಾಗಿದೆ ಅದನ್ನು ಮರು ಪಡೆಯಲಾಗುವುದು ಎಂದು ತಿಳಿಸಿದ್ದಾರೆ.
ಬರುವ ಅರ್ಜಿಗಳನ್ನು ಪೂರ್ಣ ಪ್ರಮಾಣದ ಅರ್ಜಿಗಳಲ್ಲಿ ಸ್ವೀಕರಿಸಬೇಕು. ಯಾವುದೇ ಅವಶ್ಯ ದಾಖಲೆ ಗಳು ಇಲ್ಲದೆ ಹೋದಲ್ಲಿ ಸ್ವೀಕರಿಸಬಾರದು. ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿ ತಿಂಗಳಿನಲ್ಲಿ ಯಾವುದಾದರೂ ಒಂದು ದಿನ ಅದಾಲತ್ ಮಾಡುವ ಮೂಲಕ ಅಲ್ಲೇ ಬಗೆಹರಿಸಿ ಈ ತರಹದ ಲಂಚಾವತಾರಗಳನ್ನು ತಪ್ಪಿಸಬಹುದು ಎಂಬ ನಿರ್ಣಯ ಸಭೆಯಲ್ಲಿ ಕೈಗೊಳ್ಳಲಾಯಿತು. (ಎಸ್.ಎಚ್)