ಮೈಸೂರು

ಮೈಸೂರು ವಿಶ್ವವಿದ್ಯಾನಿಲಯದ ಬೋಧಕೇತರ ಸಿಬ್ಬಂದಿ ನೇಮಕ ಸಂಬಂಧ ರಾಜ್ಯ ಸರಕಾರದ ನಿರ್ದೇಶನ ಪಾಲನೆ ಅಸಾಧ್ಯ : ಸರಕಾರಕ್ಕೆ ಕುಲಸಚಿವರ ಪತ್ರ

ಮೈಸೂರು,ಜೂ.27:- ಮೈಸೂರು ವಿಶ್ವವಿದ್ಯಾನಿಲಯದ ಬೋಧಕೇತರ ಸಿಬ್ಬಂದಿ ನೇಮಕ ಸಂಬಂಧ ರಾಜ್ಯ ಸರಕಾರದ ನಿರ್ದೇಶನ  ಪಾಲನೆ  ಅಸಾಧ್ಯ ಎಂದು ಸರಕಾರಕ್ಕೆ ಪತ್ರ ಬರೆಯಲಾಗಿದೆ.

ಮೈಸೂರು ವಿವಿ ನಿಯಮ ಉಲ್ಲಂಘಿಸಿ ಬೋಧಕೇತರ ಸಿಬ್ಬಂದಿ ನೇಮಕ ಮಾಡಿದೆ. ಆದ್ದರಿಂದ ನೇಮಕ ಮಾಡಿರುವ 96 ಮಂದಿ ಸಿಬ್ಬಂದಿಯನ್ನು ಈ ಕೂಡಲೇ ಕೆಲಸದಿಂದ ತೆಗೆದು ಹಾಕಿ ಈ ಸಂಬಂಧದ ವರದಿ ನೀಡುವಂತೆ ರಾಜ್ಯ ಸರಕಾರದ ಉನ್ನತ ಇಲಾಖೆ ಕಾರ್ಯದರ್ಶಿಗಳು ಮೈಸೂರು ವಿಶ್ವವಿದ್ಯಾನಿಲಯಕ್ಕೆ  ಪತ್ರ ಬರೆದಿದ್ದರು. ಈ ಪತ್ರಕ್ಕೆ ಪ್ರತ್ತುತ್ತರ ನೀಡಿರುವ ಮೈಸೂರು ವಿಶ್ವವಿದ್ಯಾನಿಲಯದ  ಕುಲಸಚಿವ ಪ್ರೊ. ರಾಜಣ್ಣ, ಸರಕಾರದ ನಿರ್ದೇಶನವನ್ನು ಪಾಲಿಸಲು ಸಾಧ್ಯವಾಗದು ಎಂದು ಸ್ಪಷ್ಟನೆ ನೀಡಿ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2016 ನೇ ಇಸವಿಯಲ್ಲಿ 96 ಮಂದಿ ಬೋಧಕೇತರ ಸಿಬ್ಬಂದಿಯನ್ನು ನಿಯಮ ಬಾಹಿರವಾಗಿ ನೇಮಕ ಮಾಡಲಾಗಿದೆ ಎಂದು ಈ ಹಿಂದೆ ಆರೋಪಿಸಲಾಗಿತ್ತು. ಈ ಕುರಿತ ಆರೋಪ ಕೇಳಿ ಬಂದ ಕೂಡಲೇ  ಎಂ.ಆರ್. ನಿಂಬಾಳ್ಕರ್ ನೇತೃತ್ವದಲ್ಲಿ  ತನಿಖೆಗೆ ಸಮಿತಿ ರಚಿಸಲಾಗಿತ್ತು. ಈ ಸಮಿತಿ ತನಿಖೆ ನಡೆಸಿದ ಬಳಿಕ 15 ಪುಟಗಳ ಸುದೀರ್ಘ   ವರದಿಯನ್ನು ಈ ಹಿಂದೆಯೇ  ನೀಡಿತ್ತು.ಆದರೆ, ಈ ವರದಿಯನ್ನು ಆಧರಿಸಿ ರಾಜಭವನದ ಅಧಿಕಾರಿಗಳು ರಾಜ್ಯ ಸರಕಾರದ ಉನ್ನತ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ  2018 ರ ಜೂ. 18 ರಂದು , ಈಗ ಅಂದರೆ ಎರಡು ವರ್ಷಗಳ ಬಳಿಕ ಪತ್ರ ಬರೆದು ಸೂಕ್ತ ಕ್ರಮಕ್ಕೆ ಸೂಚಿಸಿದ್ದರು. ಈ ಪತ್ರದಲ್ಲಿ 2016 ರ ಡಿಸೆಂಬರ್ ತಿಂಗಳಿನಲ್ಲಿ ನೇಮಕಗೊಂಡಿರುವ 96 ಮಂದಿ ಬೋಧಕೇತರ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವಂತೆ ತಿಳಿಸಲಾಗಿತ್ತು.  ಈಗ ಸರಕಾರ, ರಾಜಭವನದ ಪತ್ರವನ್ನು ಆಧರಿಸಿ 2018 ರ ಜೂ.20 ರಂದು  ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪತ್ರ ಬರೆದು 96 ಮಂದಿ ಬೋಧಕೇತರ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕುವಂತೆ ನಿರ್ದೇಶನ ನೀಡಿದೆ.

ಅದಕ್ಕೆ ಕುಲಸಚಿವ ಪ್ರೊ.ರಾಜಣ್ಣ 2018 ರ ಜೂ. 26 ರಂದು  ಪ್ರತ್ಯುತ್ತರ ನೀಡಿದ್ದು,  ಸರಕಾರ ಪತ್ರದಲ್ಲಿ ತಿಳಿಸಿರುವಂತೆ 2016 ರ ಡಿಸೆಂಬರ್ ನಲ್ಲಿ ಯಾವೊಬ್ಬ ಬೋಧಕೇತರ ಸಿಬ್ಬಂದಿಯನ್ನು ಮೈಸೂರು ವಿಶ್ವವಿದ್ಯಾನಿಲಯ ನೇಮಕ ಮಾಡಿಲ್ಲ. ಇನ್ನು ನೇಮಕ ಮಾಡದ ಸಿಬ್ಬಂದಿಯನ್ನು ಸೇವೆಯಿಂದ ತೆಗೆಯುವುದಾದರೂ ಹೇಗೆ ..?ಎಂದು ಪ್ರಶ್ನಿಸಿ  ಪತ್ರದಲ್ಲಿ ಸೂಚಿಸಿರುವಂತೆ 96 ಮಂದಿ ಬೋಧಕೇತರ ಸಿಬ್ಬಂದಿ ವಜಾಗೊಳಿಸುವ ಆದೇಶ ಜಾರಿ ಅಸಾಧ್ಯ ಎಂದಿದ್ದಾರೆ.

ಜತೆಗೆ 2017 ರ ಜ 10 ರಂದು 96 ಮಂದಿ ಬೋಧಕೇತರ ಸಿಬ್ಬಂದಿಯನ್ನು 11 ತಿಂಗಳ ಅವಧಿಗೆ ತಾತ್ಕಾಲಿಕವಾಗಿ ನೇಮಕ ಮಾಡಲಾಗಿದೆ. ಅವರು ನಿಯಮಗಳ ಪ್ರಕಾರ 11 ತಿಂಗಳ ಬಳಿಕ ಕೆಲಸದಿಂದ ಮುಕ್ತರಾಗಿರುತ್ತಾರೆ. ಹಾಗಾಗಿ ಅವರನ್ನು ಈಗ ಕೆಲಸದಿಂದ ವಜಾಗೊಳಿಸುವುದಾದರು ಹೇಗೆ..? ಎಂದು ಅವರು ಪ್ರಶ್ನಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: