ಕ್ರೀಡೆ

ಫಿಫಾ ವಿಶ್ವಕಪ್: ನೈಜೀರಿಯಾ ವಿರುದ್ಧ ಅರ್ಜೆಂಟೀನಾಗೆ ಗೆಲುವು

ಮಾಸ್ಕೋ,ಜೂ.27-ಫಿಫಾ ವಿಶ್ವಕಪ್ 2018 ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾದ ಅರ್ಜೆಂಟೀನಾ ಡಿಗುಂಪಿನ ಅಂತಿಮ ಪಂದ್ಯದಲ್ಲಿ ನೈಜೀರಿಯಾ ವಿರುದ್ಧ 2-1 ಗೋಲುಗಳಲ್ಲಿ ಜಯಿಸಿದೆ.

3 ಪಂದ್ಯಗಳಲ್ಲಿ ತಲಾ ಒಂದು ಜಯ, ಸೋಲು, ಡ್ರಾದೊಂಡಿಗೆ 4 ಅಂಕಗಳಿಸಿದ ಅರ್ಜೆಂಟೀನಾ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡಿತು. ಅಗ್ರ ಸ್ಥಾನ ಪಡೆದ ಕ್ರೊವೇಷಿಯಾದೊಂದಿಗೆ ಅಂತಿಮ 16 ಸುತ್ತಿಗೆ ಪ್ರವೇಶ ಪಡೆದ ಅರ್ಜೆಂಟೀನಾ, ಕ್ವಾರ್ಟರ್ ಫೈನಲ್ನಲ್ಲಿ ಸ್ಥಾನಕ್ಕಾಗಿ ಬಲಿಷ್ಠ ಫ್ರಾನ್ಸ್ ವಿರುದ್ಧ ಸೆಣಸಲಿದೆ.

ಪಂದ್ಯದ 14ನೇ ನಿಮಿಷದಲ್ಲೇ ಅರ್ಜೆಂಟೀನಾ ಗೋಲಿನ ಖಾತೆ ತೆರೆಯಿತು. ಚೆಂಡನ್ನು ಅತ್ಯಮೋಘವಾಗಿ ನಿಯಂತ್ರಣಕ್ಕೆ ಪಡೆದ ಮೆಸ್ಸಿ ಗೋಲು ಬಾರಿಸಿದರು. ಮೊದಲಾರ್ಧದ ಅಂತ್ಯಕ್ಕೆ ಅರ್ಜೆಂಟೀನಾ 1-0 ಮುನ್ನಡೆ ಸಾಧಿಸಿತು. ಆದರೆ ದ್ವಿತೀಯಾರ್ಧದ ಆರಂಭದಲ್ಲೇ ಅರ್ಜೆಂಟೀನಾಗೆ ಆಘಾತ ಎದುರಾಯಿತು. ಸಿಕ್ಕ ಪೆನಾಲ್ಟಿ ಅವಕಾಶವನ್ನು ಉಪಯೋಗಿಸಿಕೊಂಡ ನೈಜೀರಿಯಾ ತಂಡ ಗೋಲುಗಳಿಸಿ ಸಮಬಲ ಸಾಧಿಸಿತು. 51ನೇ ನಿಮಿಷದಲ್ಲಿ ವಿಕ್ಟರ್ ಮೋಸೆಸ್ ಗೋಲು ಬಾರಿಸಿದರು. 86ನೇ ನಿಮಿಷದಲ್ಲಿ ಮಾರ್ಕೋಸ್ ರೊಜೊ ಬಾರಿಸಿದ ಗೋಲು, ಅರ್ಜೆಂಟೀನಾ ರೋಚಕ ಗೆಲುವು ಸಾಧಿಸಲು ಕಾರಣವಾಯಿತು. (ಎಂ.ಎನ್)

Leave a Reply

comments

Related Articles

error: