ಕರ್ನಾಟಕಪ್ರಮುಖ ಸುದ್ದಿ

ಸಾರಿಗೆ ವ್ಯವಸ್ಥೆ ಸುಧಾರಣೆಗೆ ಅಗತ್ಯ ಕ್ರಮ: ಸಚಿವ ಡಿ.ಸಿ. ತಮ್ಮಣ್ಣ

ಹಾಸನ (ಜೂನ್ 27): ಚನ್ನರಾಯಪಟ್ಟಣ ಹಾಗೂ ಹೊಳೆನರಸೀಪುರಗಳಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಹಾಗೂ ಡಿಪೋಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವರಾದ ಡಿ.ಸಿ. ತಮ್ಮಣ್ಣ ಅವರು ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳಲ್ಲೂ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿಗಳನ್ನು ರಾಜ್ಯ ಸರ್ಕಾರಿ ನೌಕರನಾಗಿ ಪರಿಗಣನೆ ಮಾಡುವ ವಿಚಾರವು ಸದ್ಯದ ಮಟ್ಟಿಗೆ ಯಾವುದೇ ಪ್ರಸ್ತಾಪ ಇಲ್ಲ, ಸಾರಿಗೆ ಸಂಸ್ಥೆ ನಷ್ಟದಲ್ಲಿದ್ದು ಮುಂದಿನ ದಿನಗಳಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು. ರೈಲ್ವೇ ನಿಲ್ದಾಣದ ಮಾದರಿಯಲ್ಲಿಯೆ ಪ್ರತಿ ಬಸ್ ನಿಲ್ದಾಣದಲ್ಲೂ ಕೂಡ ಉಪಹಾರ ಮಂದಿರವನ್ನು ತೆರೆಯುವ ಚಿಂತನೆಯನ್ನು ನಡೆಸಲಾಗಿದೆ ಈ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಆನಂತರ ಅಂತಿಮ ನಿರ್ಧಾರವನ್ನು ಕೈಗೊಳ್ಳುವುದಾಗಿ ಸಾರಿಗೆ ಸಚಿವರು ತಿಳಿಸಿದರು.

ಸಾರಿಗೆ ಸಂಸ್ಥೆಯ ಆರ್ಥಿಕ ಮಟ್ಟವನ್ನು ಹೆಚ್ಚಿಸಲು ಹೊಸ ಯೋಜನೆಗಳನ್ನು ರೂಪಿಸಲು ಚಿಂತನೆ ನಡೆಸಿದ್ದು ಅವಶ್ಯಕ ವಿದ್ಯುತ್ ಶಕ್ತಿ ಉತ್ಪಾದಸಿ ಹೆಚ್ಚುವರಿಯಾಗಿ ಉಳಿಯುವ ವಿದ್ಯುತ್ ಅನ್ನು ಮಾರಾಟ ಮಾಡಲು ಚಿಂತಿಸಿದ್ದು ಪ್ರತಿ ಸಾರಿಗೆ ಬಸ್ ನಿಲ್ದಾಣದಲ್ಲಿಯೂ ಸೋಲಾರ್ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಅವರು ಹೇಳಿದರು. ಕೆ.ಎಸ್.ಆರ್.ಟಿ.ಸಿ. ನಷ್ಟ ಭರಿಸಲು ಬಸ್ ನಿಲ್ದಾಣಗಳಲ್ಲಿ ಪ್ರಚಾರ ಫಲಕಗಳು ಹಾಗೂ ಬಸ್‍ಗಳಲ್ಲಿನ ಜಾಹಿರಾತನ್ನು ಟೆಂಡರ್ ಮೂಲಕ ನೀಡಲು ನಿರ್ಧಸಿದೆ ಎಂದು ಸಾರಿಗೆ ಸಚಿವರು ಹೇಳಿದರು.

ಪ್ರತಿ ಬಸ್ ಡಿಪೋಗಳಲ್ಲಿಯೂ ಕಾರ್ಯ ನಿರ್ವಹಿಸುತ್ತಿರುವ ಹೆಣ್ಣು ಮಕ್ಕಳಿಗೆ ಬಿಸಿ ನೀರಿನ ಸೌಲಭ್ಯ ಒದಗಿಸಲಾಗುವುದು ಹಾಗೂ ಪ್ರತಿ ಬಸ್ ನಿಲ್ದಾಣದಲ್ಲಿಯೂ ಕೂಡ ಗರ್ಭಿಣಿ ಸ್ತ್ರೀಯರು ಮಗುವಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿ ನಿರ್ಮಾಣವನ್ನು ಮಾಡಲು ಸೂಚಿಸಿದರು. ಶ್ರವಣಬೆಳಗೊಳದಿಂದ ಮಹಾರಾಷ್ಟ್ರಕ್ಕೆ ತೆರಳುವ ಪ್ರಯಾಣಿಕರಿಗೆ ಮತ್ತೆರಡು ಬಸ್ ಕಲ್ಪಿಸುವ ಚಿಂತನೆ ನಡೆಸಲಾಗಿದ್ದು ಆದಷ್ಟು ಬೇಗ ಜಾರಿಗೊಳಿಸುವುದಾಗಿ ಭರವಸೆ ನೀಡಿದರು. ಸಾಲ ಮನ್ನದ ಬಗ್ಗೆ ಅನುಮಾನ ಬೇಡ ರೈತರ ಸಂಪೂರ್ಣ ಸಾಲ ಮನ್ನವಾಗಲಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಹಾಸನದ ಬಸ್ ಬಾಡಿ ಬಿಲ್ಡಿಂಗ್ ಘಟಕವನ್ನು ಮೇಲ್ದರ್ಜೆಗೆ ಏರಿಸಲು ಚಿಂತಿಸಲಾಗಿದೆ ಇಂಧನ ದರ ಏರಿಕೆ ಹಾಗೂ ಇತರ ಕಾರ್ಯಗಳಿಂದಾಗಿ ಕೆ.ಎಸ್.ಆರ್.ಟಿ.ಸಿ ಗೆ ಆಗುತ್ತಿರುವ ನಷ್ಟ ಸರಿದೂಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಹೇಳಿದರು.

ಶಾಲಾ ಕಾಲೇಜು ಮಕ್ಕಳಿಗೆ ಅನುಕೂಲವಾಗುವಂತೆ ಹೆಚ್ಚುವರಿ ಬಸ್ ಸಂಚಾರವನ್ನು ಒದಗಿಸುವುದು ಹಾಗೂ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಬಗ್ಗೆ ಲೋಕೋಪಯೋಗಿ ಸಚಿವರು ತಮ್ಮ ಗಮನಕ್ಕೆ ತಂದಿದ್ದು ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೆಲವು ಜಿಲ್ಲೆಗಳಲ್ಲಿ ಸಾರಿಗೆ ಮಾರ್ಗಗಳು ಸಂಪೂರ್ಣ ರಾಷ್ಟ್ರೀಕರಣವಾಗಿಲ್ಲ ಮುಂದಿನ ದಿನಗಳಲ್ಲಿ ಕೆ.ಎಸ್.ಆರ್.ಟಿ.ಸಿ ಏಕಸ್ವಾಮ್ಯ ಮಾರ್ಗಗಳ ವಿಸ್ತರಣೆಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ಸಾರಿಗೆ ಸಚಿವರು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರಾದ ಹೆಚ್.ಡಿ. ರೇವಣ್ಣ, ಶಾಸಕರಾದ ಸಿ.ಎನ್. ಬಾಲಕೃಷ್ಣ, ಹಾಗೂ ವಿವಿಧ ಅಧಿಕಾರಿಗಳು ಹಾಜರಿದ್ದರು. (ಎನ್.ಬಿ)

Leave a Reply

comments

Related Articles

error: