
ಮೈಸೂರು
ಹುತ್ತರಿ ಹಬ್ಬ : ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಕೊಡವರು
ಮೈಸೂರು ಜಿಲ್ಲಾ ಕೊಡವ ಸಮಾಜದ ವತಿಯಿಂದ ಕಾವೇರಿ ವಿದ್ಯಾಸಂಸ್ಥೆಯಲ್ಲಿ ಹುತ್ತರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಕೊಡವರು ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರು.
ಕೊಡವರು ಹುತ್ತರಿ ಹಬ್ಬವನ್ನು ಪಾರಂಪರಿಕ ಆಚರಣೆಗಳ ಮೂಲಕ ಆಚರಿಸಿ ಗಮನ ಸೆಳೆದರು. ಕೊಡವ ಉಡುಗೆ ತೊಟ್ಟ-ಮಹಿಳೆಯರು ಹಾಗೂ ಪುರುಷರು ತಮ್ಮದೇ ಭಾಷೆಯಲ್ಲಿ ಹಾಡು ಹೇಳುತ್ತಾ ಸಾಮೂಹಿಕವಾಗಿ ಹೆಜ್ಜೆ ಹಾಕಿದರು. ಮಹಿಳೆಯರು ಕೆಂಪು ಸೀರೆ ಧರಿಸಿ ತಾಯಿ ಕಾವೇರಿ ಕುರಿತ ಹಾಡಿಗೆ ಹೆಜ್ಜೆ ಹಾಕಿದರು. ಪುರುಷರು ತಾಲಿಪಾಟ್ ಶೈಲಿಯಲ್ಲಿ ಹೆಜ್ಜೆ ಹಾಕಿದರು. ಬಳಿಕ ಸಾಂಪ್ರದಾಯಿಕ ಆಚರಣೆಯಾದ ಕದಿರು ತೆಗೆಯುವ ಪದ್ಧತಿಯನ್ನು ನಡೆಸಿಕೊಟ್ಟರು. ಝಳಪಿಸುವ ಕತ್ತಿ ಹಿಡಿದು ಕತ್ತಿಯಾಟ, ಪರಿಯಕಳಿ, ನೆರೆಕಟ್ಟುವುದು, ನಡೆಕಾಕುವ, ಬಾಲೊಪಾಟ್ ಉಮ್ಮತ್ತಾಟ್ ಗಳನ್ನು ಆಚರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ತಂಬೂಟ್ ಸಾಂಪ್ರದಾಯಿಕ ತಿನಿಸನ್ನು ವಿತರಿಸಲಾಯಿತು. ಈ ಸಂದರ್ಭ ಜಿಲ್ಲಾ ಕೊಡವ ಸಮಾಜದ ಅಧ್ಯಕ್ಷ ಮೂವೇರ ಕೆ.ಕುಟ್ಟಪ್ಪ, ಉಪಾಧ್ಯಕ್ಷ ಬಲ್ಕಮಂಡ ಎಂ.ನಾಣಯ್ಯ, ಕಾರ್ಯದರ್ಶಿ ಮಂಡೀರ ಪಿ.ಕಾಳಯ್ಯ ಮತ್ತಿತರರು ಉಪಸ್ಥಿತರಿದ್ದರು.