ಮೈಸೂರು

ಫಸಲು ಭೂಮಿಯಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಮುಂದಾದ ಅರಣ್ಯ ಇಲಾಖೆ: ಆತ್ಮಹತ್ಯೆಗೆ ಯತ್ನಿಸಿದ ರೈತ

ಮೈಸೂರು: ಜೂ.28:- ಅತಿವೃಷ್ಟಿ ಮತ್ತು ಅನಾವೃಷ್ಟಿ ನಡುವೆ ರೈತ ಕಂಗಾಲಾಗಿದ್ದಾನೆ. ಇದರ ನಡುವೆಯೂ ಹೇಗೋ ಸಾಹಸದಿಂದ ಬೆಳೆ ಬೆಳೆದಿರುವ ರೈತನಿಗೆ ಅರಣ್ಯ ಇಲಾಖೆ ಅಧಿಕಾರಿಗಳೇ ಆಪತ್ತು ತಂದೊಡ್ಡಿದ್ದಾರೆ.

ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಎಂ.ಸಿ. ತಳಲು ಗ್ರಾಮದ ನೀಲಮ್ಮ ಮಗ ಪರಮೇಶ್ ತನ್ನ ಜಮೀನಿನಲ್ಲಿ ಚೆಂಡು ಹೂ ಬೆಳೆದಿದ್ದರು. ಹೂ ಕಿತ್ತು ಮಾರುಕಟ್ಟೆಗೆ ಹಾಕಲಾಗುತ್ತಿತ್ತು. ಇಂತಹ ವೇಳೆ ಜಮೀನ ಮಧ್ಯೆ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ.

ಕಾಡಿನಿಂದ ಆನೆಗಳು ನಾಡಿಗೆ ಬಾರದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಆದರೆ ಇಲಾಖೆ ಬ್ಯಾರಿಕೇಡ್ ಹಾಕುವುದಕ್ಕೆ ಫಸಲು ತುಂಬಿದ ಜಮೀನನ್ನೇ ಆಯ್ಕೆ ಮಾಡಿದೆ. ಜಮೀನಿನಲ್ಲಿ ಬೆಳೆದಿರುವ ಬೆಳೆಯನ್ನು ನಾಶ ಮಾಡಿ ಅರಣ್ಯ ಇಲಾಖೆ ಬ್ಯಾರಿಕೇಡ್ ನಿರ್ಮಾಣ ಮಾಡುತ್ತಿದೆ. ಇದನ್ನು ಪ್ರಶ್ನಿಸಿದರೆ ತನ್ನ ಮೇಲೆಯೇ ಅಧಿಕಾರಿಗಳು ದರ್ಪ ಪ್ರದರ್ಶಿಸುತ್ತಿದ್ದಾರೆ ಎಂದು ರೈತ ಪರಮೇಶ್ ಆರೋಪಿಸುತ್ತಾರೆ.

ಹೆಡಿಯಾಲ ಅರಣ್ಯ ಉಪ ವಿಭಾಗದ ಅಧಿಕಾರಿಗಳು ಗುತ್ತಿಗೆದಾರನ ಜೊತೆ ಶಾಮೀಲಾಗಿ ಹಣ ಉಳಿಸುವುದಕ್ಕೆ ರೈತರ ಜಮೀನನ ಮೇಲೆ ಕಾಮಗಾರಿ ಮಾಡುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ. ಅರಣ್ಯ ಇಲಾಖೆಯಿಂದ ರೈಲ್ವೆ ಕಂಬಿ ಅಳವಡಿಸಲೂ ಮುಂದಾದಾಗ ಬಡ ರೈತ ಪರಮೇಶ್ ಹೊಲದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಕೂಡ ಯತ್ನಿಸಿದ್ದಾರೆ.

ಪರಮೇಶ್ ಹೊಲದಲ್ಲಿಯೇ ವಿಷ ಕುಡಿದಿದ್ದಾರೆ. ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಮಾತ್ರ ರೈತ ವಿಷ ಸೇವಿಸುವಾಗ ಮೂಕ ಪ್ರೇಕ್ಷಕರಾಗಿ ನೋಡುತ್ತಾ ನಿಂತಿದ್ದರು ಎನ್ನಲಾಗಿದೆ. ಬಳಿಕ ಅಕ್ಕಪಕ್ಕದವರು ಪರಮೇಶ್ ನನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಪರಮೇಶ್ ವಿಷ ಸೇವಿಸುವ ಮೊದಲು ಡೆತ್ ನೋಟ್ ಬರೆದಿಟ್ಡಿದ್ದು, ಅದರಲ್ಲಿ ನನ್ನ ಸಾವಿಗೆ ಹೆಡಿಯಾಲ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರಣ ಎಂದು ಬರೆದಿದ್ದಾರೆ ಎನ್ನಲಾಗಿದೆ.ಪರಮೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: