ಪ್ರಮುಖ ಸುದ್ದಿಮೈಸೂರು

ಇಂದಿನ ಯುವ ಪೀಳಿಗೆಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ: ಡಿ.ರಂದೀಪ್

rally-1ಕರ್ನಾಟಕ ಸರ್ಕಾರ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಮೈಸೂರು ವಿಭಾಗೀಯ ಕಚೇರಿ ವತಿಯಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ ಅಂಗವಾಗಿ ಇಂಧನ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬುಧವಾರ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.

ಮೈಸೂರು ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಜಾಥಾಕ್ಕೆ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ನಾವು ಚಿಕ್ಕವರಿದ್ದಾಗ ಇಂಧನಗಳ ಬಳಕೆ ಮತ್ತು ಅವುಗಳ ಮಹತ್ವದ ಅರಿವಿರಲಿಲ್ಲ. ಮತ್ತೆ ಇಷ್ಟೊಂದು ಪ್ರಮಾಣದಲ್ಲಿ ಸಿಗುತ್ತಿರಲಿಲ್ಲ. ಇಂದಿನ ಪೀಳಿಗೆಗೆ ಒಳ್ಳೆಯ ಯೋಜನೆ ಸಿಕ್ಕಿದೆ. ಸೋಲಾರ್, ನೀರು ಎಲ್ಲ ಶಕ್ತಿಗಳೂ ದೊರಕಿವೆ. ಅವುಗಳನ್ನು ಮಿತವಾಗಿ ಬಳಸಬೇಕು. ಮಿತವಾಗಿ ಬಳಸಿದಲ್ಲಿ ಮುಂದಿನ ಪೀಳಿಗೆಗೂ ಇಂಧನ ಮೂಲಗಳನ್ನು ಉಳಿಸಬಹುದು ಎಂದು ಹೇಳಿದರು.

ಸಮುದ್ರದ ಅಲೆಗಳಿಂದಲೂ ಇಂಧನವನ್ನು ರೂಪಿಸಲಾಗುತ್ತಿದೆ. ವಿದ್ಯಾರ್ಥಿಗಳು ಪೋಷಕರಲ್ಲಿ ಹಾಗೂ ಸ್ನೇಹಿತರಲ್ಲಿ ಇಂಧನದ ಸದ್ಬಳಕೆಯ ಕುರಿತು ಜಾಗೃತಿ ಮೂಡಿಸಬೇಕು. ದೇಶದ ಅಭಿವೃದ್ಧಿ ಇಂದಿನ ಯುವ ಪೀಳಿಗೆಯಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.

ರೋಟರಿ ವಲಯ ಅಧ್ಯಕ್ಷ ಹನುಮಂತರಾಯ ಮಾತನಾಡಿ ಇಂಧನವನ್ನು ಉಳಿಸಿಕೊಳ್ಳಬೇಕು. ಗಾಳಿ, ಸೋಲಾರ್ ಶಕ್ತಿಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಡಿ.ರಂದೀಪ್ ಅವರು ತಾವೇ ಸ್ವತಃ ಘೋಷಣಾ ಫಲಕಗಳನ್ನು ಹಿಡಿದು ವಿದ್ಯಾರ್ಥಿಗಳೊಂದಿಗೆ ಹೆಜ್ಜೆ ಹಾಕಿದರು. ಅರಮನೆ ಬಲರಾಮ ದ್ವಾರದಿಂದ ಹೊರಟ ಜಾಥಾವು ದೊಡ್ಡ ಗಡಿಯಾರ ವೃತ್ತ, ಗಾಂಧಿವೃತ್ತ, ಹಳೆ ಬ್ಯಾಂಕ್ ರಸ್ತೆ, ಸಯ್ಯಾಜಿರಾವ್ ರಸ್ತೆ ಇರ್ವಿನ್ ರಸ್ತೆ, ಅಶೋಕ ರಸ್ತೆ ಮೂಲಕ ಸಾಗಿ ಬಂತು.

ಜಾಥಾದಲ್ಲಿ ಒಟ್ಟು 12 ರೋಟರಿ ಕ್ಲಬ್ ಗಳು, ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ವಸಂತಮಹಲ್, ರೋಟರಿ ಮೈಸೂರು ಪಶ್ಚಿಮ ಶಾಲೆ, ಕನಕದಾಸನಗರ ಇವರು ಪಾಲ್ಗೊಂಡಿದ್ದರು. ಹಸಿರುಶಕ್ತಿ ಬಳಸಿ, ಹಣವು ದಿನವು ಉಳಿಸಿ, ಸೌರಶಕ್ತಿ ಬಳಕೆ, ಬಾಳಿನಲ್ಲಿ ಉಳಿಕೆ, ಹಸಿರುಶಕ್ತಿ ಬಳಸಿರಿ, ಶಕ್ತಿ ಕೊರತೆ ಅಳಿಸಿರಿ, ಬಿಸಿಲ ಹಿಡಿವ ತಂತ್ರ, ಸೌರಬಳಕೆ ಮಂತ್ರ, ಇಂಧನ ಉಳಿತಾಯ, ದೇಶದ ಆದಾಯ, ಸೌರಶಕ್ತಿ ಅರಿವು ಬೆಳೆಸುವ, ಭೂಮಾತೆಯ ಜೀವ ಉಳಿಸುವ, ಅವಶ್ಯವಿದ್ದರೆ ದೀಪ ಉರಿಸಿ, ಉಳಿತಾಯದ ಆನಂದವ ಹರಿಸಿ, “ನೀಡಿ ಇಂಧನ ಉಳಿತಾಯಕ್ಕೆ ಒತ್ತು, ಪರಿಸರಕ್ಕೆ ಬಾರದು ಎಂದಿಗೂ ಕುತ್ತು” ಎಂಬ ಘೋಷಣೆಗಳ ಫಲಕಗಳನ್ನು ಹಿಡಿದ 500ಕ್ಕೂ ಅಧಿಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಗಮನ ಸೆಳೆದರು.

Leave a Reply

comments

Related Articles

error: