ಕರ್ನಾಟಕ

ಅಕ್ರಮ-ಸಕ್ರಮಕ್ಕೆ ಹೈಕೋರ್ಟ್ ಅಸ್ತು

ಬೆಂಗಳೂರು: ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕಾನೂನು ಉಲ್ಲಂಘಿಸಿ ತಲೆ ಎತ್ತಿರುವ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸುವ ರಾಜ್ಯ ಸರಕಾರದ ಯೋಜನೆ ಜಾರಿಗೆ ಹೈಕೋರ್ಟ್ ಒಪ್ಪಿಗೆ ನೀಡಿದೆ.

ನ್ಯಾಯಾಲಯದ ಈ ತೀರ್ಪಿನಿಂದ ಲಕ್ಷಾಂತರ ಕುಟುಂಬಗಳು ನಿಟ್ಟುಸಿರು ಬಿಡವಂತಾಗಿದ್ದು, ಸರಕಾರ ನಿಗದಿಪಡಿಸಿದ ದಂಡ ಕಟ್ಟಿ ತಮ್ಮ ಮನೆ ಇಲ್ಲವೆ ನಿವೇಶನಗಳನ್ನು ಸಕ್ರಮ ಮಾಡಿಕೊಳ್ಳಬಹುದಾಗಿದೆ.

ಈ ಯೋಜನೆಯ ಸಿಂಧುತ್ವ ಪ್ರಶ್ನಿಸಿ ಮಂಗಳೂರಿನ ಸಿಟಿಜನ್ ಫೋರಂ, ಬೆಂಗಳೂರಿನ ಜೆ.ಪಿ.ನಗರ 7 ಮತ್ತು 8ನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ನಮ್ಮ ಬೆಂಗಳೂರು ಫೌಂಡೇಷನ್ ಸೇರಿದಂತೆ ಹಲವು ಸಂಘಟನೆಗಳು ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ ಮುಖ್ಯ ನ್ಯಾಯಮೂರ್ತಿ ಎಸ್‍.ಕೆ. ಮುಖರ್ಜಿ ಹಾಗೂ ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

2013ರ ಅಕ್ಟೋಬರ್ 19ಕ್ಕೂ ಮೊದಲು ನಿಯಮ ಉಲ್ಲಂಘಿಸಿ ಕಟ್ಟಿದ ಕಟ್ಟಡ ಮತ್ತು ಅಕ್ರಮ ಬಡಾವಣೆಗಳಲ್ಲಿನ ನಿವೇಶನಗಳ ಸಕ್ರಮಕ್ಕೆ ಸಮ್ಮತಿಸಿದೆ. ಸರಕಾರಿ ಜಮೀನಿನಲ್ಲಿ ನಿರ್ಮಿಸಿದ ಅಕ್ರಮ ಕಟ್ಟಡ, ಉದ್ಯಾನ, ಕ್ರೀಡಾಂಗಣಕ್ಕೆ ಕಾಯ್ದಿರಿಸಿದ ಜಾಗಗಳಲ್ಲಿನ ಕಟ್ಟಡ, ನೆಲ ಮಹಡಿಯಲ್ಲಿ ನಿರ್ಮಾಣ ಮಾಡಿದ ಕಟ್ಟಡ ಸಕ್ರಮಗೊಳ್ಳುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

Leave a Reply

comments

Related Articles

error: