ದೇಶಪ್ರಮುಖ ಸುದ್ದಿ

ಮುಂದಿನ ಮೂರು ದಿನ ಪ್ರಧಾನಿ ಸಂಸತ್‍ನಲ್ಲಿ ಹಾಜರಿರುತ್ತಾರೆ: ಕೇಂದ್ರ ಸಚಿವ ವೆಂಕಯ್ಯ ನಾಯ್ಡು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಂಸತ್‍ ಅಧಿವೇಶನದಲ್ಲಿ ಮುಂದಿನ ಮೂರು ದಿನ ಹಾಜರಿರಲಿದ್ದಾರೆ ಎಂದು ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು ಅವರು ತಿಳಿಸಿದ್ದಾರೆ.

ಹಳೆ ನೋಟು ಚಲಾವಣೆ ರದ್ದತಿ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ಮೋದಿ ಅವರು ಸಂಸತ್ ಕಲಾಪದಲ್ಲಿ ಮಾತನಾಡುವ ಬದಲಾಗಿ ಸದನದ ಹೊರಗೆ ಈ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ ಎಂದು ಪ್ರತಿಪಕ್ಷಗಳು  ಪ್ರಧಾನಿ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದವು.

“ಪ್ರಧಾನಿ ಮೋದಿಯವರು ಎಲ್ಲರಿಗಿಂತ ಮೊದಲು ಸಂಸತ್ತಿಗೆ ಬರುತ್ತಾರೆ ಮತ್ತು ಕಡೆಯವರಾಗಿ ಹೊರಡುತ್ತಾರೆ. ಸಂಸತ್ತಿಗೆ ಆಗಮಿಸಿದ ನಂತರ ಅವರು ಸಂಸತ್ತಿನ ಕಲಾಪಗಳ ಪ್ರತಿಯೊಂದು ಬೆಳವಣಿಗೆಗಳನ್ನೂ ತಮ್ಮ ಕೊಠಡಿಯಲ್ಲಿ ಕುಳಿತು ತಪ್ಪದೇ ಗಮನಿಸುತ್ತಿರುತ್ತಾರೆ. ಸದನದ ಕರೆ ಬಂದಾಕ್ಷಣ ಸದನಕ್ಕೆ ಧಾವಿಸಿ ತಮ್ಮ ಜವಾಬ್ದಾರಿ ಪೂರೈಸುತ್ತಿದ್ದಾರೆ. ಹಾಗಾಗಿ ಸಂಸತ್ತಿನ ಕಲಾಪಗಳಲ್ಲಿ ಅವರ ಭಾಗವಹಿಸುತ್ತಿಲ್ಲ ಎನ್ನುವ ಆರೋಪಗಳಲ್ಲಿ ಹುರುಳಿಲ್ಲ” ಎಂದು ಪ್ರಧಾನಿ ಮೋದಿಯವರನ್ನು ನಾಯ್ಡು ಸಮರ್ಥಿಸಿಕೊಂಡಿದ್ದಾರೆ.

ನವೆಂಬರ್ 16ರಂದು ಆರಂಭವಾದ ಸದನವು ಯಾವುದೇ ಫಲಪ್ರದ ಚರ್ಚೆ ನಡೆಯದೆ ನೋಟು ರದ್ದತಿ ಗದ್ದಲಲ್ಲೇ ಸದನದ ಸಮಯ ಕಳೆದುಹೋಗಿ ಮುಂದೂಡಲ್ಪಟ್ಟಿತ್ತು. ಸದನ ಮತ್ತೆ ಸಮಾವೇಶಗೊಳ್ಳುತ್ತಿದ್ದು ಡಿಸೆಂಬರ್ 16ರಂದು ಈ ಚಳಿಗಾಲದ ಅಧಿವೇಶನಕ್ಕೆ ತೆರೆ ಬೀಳಲಿದೆ.

ಈ ಕುರಿತು ಸುದ್ದಿಗಾರರು ಸಚಿವ ನಾಯ್ಡು ಅವರ ಗಮನ ಸೆಳೆದಾಗ, ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿಯವರ ಉಪಸ್ಥಿತಿಗಾಗಿ ಪದೇ ಪದೇ ಒತ್ತಾಯಿಸುತ್ತಿವೆ. ಈ ರೀತಿ ಒತ್ತಾಯ ಮಾಡುವ ಮೂಲಕ ಸರ್ವಾಧಿಕಾರಿ ಧೋರಣೆ ಪ್ರದರ್ಶನ ಮಾಡುತ್ತಿವೆ. ಪ್ರತಿಪಕ್ಷಗಳ ಈ ವರ್ತನೆ ನೋಡಿದರೆ ಸರ್ಕಾರದ ವಿರುದ್ಧ ದೂರಲು ಅವರ ಬಳಿ ಯಾವುದೇ ಗಮನಾರ್ಹ ವಿಷಯವಿಲ್ಲ. ಕೇವಲ ಪ್ರಚಾರಕ್ಕಷ್ಟೇ ಅವು ಗದ್ದಲ ಎಬ್ಬಿಸುತ್ತಿವೆ ಎಂದು ತಿರುಗೇಟು ನೀಡಿದ್ದಾರೆ.

ನಾವೆಲ್ಲಾ ಸದನದ ನಿಯಮಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಲೋಕಸಭಾ ಸ್ಪೀಕರ್ ಅವರು ನಿಮಯ 193 ರ ಅಡಿಯಲ್ಲಿ ಈಗಾಗಲೇ ಚರ್ಚೆಗೆ ಒಪ್ಪಿದ್ದಾರೆ. ಆದರೆ ಪ್ರತಿಪಕ್ಷಗಳಿಗೆ ಇದು ಬೇಕಾಗಿಲ್ಲ. ಪ್ರತಿಪಕ್ಷಗಳೂ ಹೊಣೆಗಾರಿಕೆಯಿಂದ ವರ್ತಿಸಬೇಕಿದೆ ಎಂದು ನಾಯ್ಡು ಪ್ರತಿಪಕ್ಷಗಳಿಗೆ ಕಿವಿಮಾತು ಹೇಳಿದರು.

Leave a Reply

comments

Related Articles

error: