ಪ್ರಮುಖ ಸುದ್ದಿ

ಸರ್ಕಾರಿ ಶಾಲಾ-ಕಾಲೇಜು ಮಕ್ಕಳಿಗೆ ಉಚಿತವಾಗಿ ಸಫಾರಿ ಕರೆದೊಯ್ಯುವ ಕಾರ್ಯಕ್ರಮ ಜಾರಿಗೆ ಚಿಂತನೆ : ಸಚಿವ ಆರ್.ಶಂಕರ್

ರಾಜ್ಯ(ಬೆಂಗಳೂರು), ಜೂ.29:- ಸರ್ಕಾರಿ ಶಾಲಾ-ಕಾಲೇಜು ಮಕ್ಕಳಿಗೆ ಉಚಿತವಾಗಿ ಸಫಾರಿ ಕರೆದೊಯ್ಯುವ ಕಾರ್ಯಕ್ರಮ ಜಾರಿಗೆ ಚಿಂತನೆ ನಡಸಲಾಗಿದೆ ಎಂದು ಅರಣ್ಯ ಸಚಿವ ಆರ್.ಶಂಕರ್ ಹೇಳಿದರು.

ನಗರದಲ್ಲಿ ಕಬ್ಬನ್ ಪಾರ್ಕ್ ನ ಎನ್ ಜಿಒ ಸಭಾಂಗಣದಲ್ಲಿ ಯುವ ಚೇತನ ಯುವಜನ ಕೇಂದ್ರ, ಕಾಡಿನ ಮಿತ್ರ ಪತ್ರಿಕಾ ಸಂಸ್ಥೆ ಆಯೋಜಿಸಿದ್ದ, ವಿಶ್ವ ಪರಿಸರ ದಿನಾಚರಣೆ ಅಂಗವಾಗಿ, ರಾಷ್ಟ್ರೀಯ, ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ  ಮಾತನಾಡಿದರು. ಅರಣ್ಯ ಇಲಾಖೆ ವತಿಯಿಂದ ಈಗಾಗಲೇ, ಮಗುಗೊಂದು ಸಸಿ-ಶಾಲೆಗೊಂದು ವನ ಕಾರ್ಯಕ್ರಮ ಚಾಲ್ತಿಯಲ್ಲಿದೆ. ಅದೇ ರೀತಿ, ಶಾಲಾ ಮಕ್ಕಳಿಗೆ ಅರಣ್ಯ ಬಗ್ಗೆ ಮಾಹಿತಿ, ಜಾಗೃತಿ ಮೂಡಿಸಲು ಉಚಿತವಾಗಿ ಸಫಾರಿ ಕರೆದೊಯ್ಯುವ ಕಾರ್ಯಕ್ರಮಕ್ಕೆ ಜಾರಿಗೆ ಮುಂದಾಗುವುದಾಗಿ ತಿಳಿಸಿದರು.

ಕಾಡು, ಪರಿಸರ ಉಳಿಸಲು ಸರ್ಕಾರ ಹಾಗೂ ಸಂಘ ಸಂಸ್ಥೆಗಳು, ಶಾಲಾ-ಕಾಲೇಜುಗಳು ಶ್ರಮವಹಿಸುತ್ತಿವೆ. ಅಲ್ಲದೆ, ಮಾಲಿನ್ಯ ಹೆಚ್ಚಾದರೆ,ನಮ್ಮ ಜೀವಕ್ಕೆ ಅಪಾಯಕಾರಿ. ಹೀಗಾಗಿ, ಪ್ರತಿಯೊಬ್ಬರು ಮಾಲಿನ್ಯ ವಾಗದಂತೆ ಜಾಗೃತಿವಹಿಸಬೇಕು ಎಂದರು. ಪ್ರಾಣಿಗಳು ನಾಡಿಗೆ ಬಂದಾಗ ಅನೇಕ ನಷ್ಟ ಉಂಟಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಸೂಕ್ತ ರೀತಿಯಲ್ಲಿ ಪರಿಹಾರದ ಜೊತೆಗೆ ಪ್ರಾಣಿಗಳ ಸಂರಕ್ಷಣೆಗೂ ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಚಿಕ್ಕಮಗಳೂರು ಭದ್ರ ಹುಲಿ ಪ್ರದೇಶದ ನಿರ್ದೇಶಕ ಹೆಚ್.ಸಿ.ಕಾಂತರಾಜು ಮಾತನಾಡಿ, ಜಗತ್ತಿನಲ್ಲಿಯೇ ಭಾರತದಲ್ಲಿ ಅಧಿಕ ಹುಲಿಗಳಿದ್ದು, ಕರ್ನಾಟಕದಲ್ಲಿ 600ಕ್ಕೂ ಅಧಿಕ ಹುಲಿಗಳಿವೆ. ಅಲ್ಲದೆ, ಹುಲಿ ಸಂರಕ್ಷಣೆ ಮಾಡಿದರೆ, ಸಸ್ಯಾಹಾರಿ ಜೀವಿಗಳನ್ನು ಸಮತೋಲನ ಮಾಡಬಹುದು ಎಂದು ತಿಳಿಸಿದರು.

ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ಚಿಣ್ಣರ ವನ ದರ್ಶನ ಎಂಬ ಕಾರ್ಯಕ್ರಮ ತಂದಿದೆ.ಇದರಿಂದ ಸಾವಿರಾರು ಮಕ್ಕಳು ಲಾಭ ಪಡೆಯುತ್ತಿದ್ದು, ಇಲಾಖೆಯಿಂದ ಅರಣ್ಯ, ವನ್ಯಜೀವಿ ಸಂರಕ್ಷಣಾ ಬಗ್ಗೆ ಮಾಹಿತಿ, ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಪರಿಸರವಾದಿ ನಂದಿದುರ್ಗ ಬಾಲುಗೌಡ ಮಾತನಾಡಿ, ಶಾಲಾ-ಕಾಲೇಜು ಮಕ್ಕಳಿಗೆ ಉಚಿತವಾಗಿ ಅರಣ್ಯ ಸುತ್ತುವ(ಸಫಾರಿ) ಅವಕಾಶ ನೀಡಬೇಕು. ಜೊತೆಗೆ, ಅರಣ್ಯದಲ್ಲಿ ಉಂಟಾಗುವ ಅಗ್ನಿ ಅವಘಡ ವೇಳೆ ಗಾಯಗೊಳ್ಳುವ, ಮೃತಪಡುವ ಅರಣ್ಯ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಶೀಘ್ರ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: