
ಕರ್ನಾಟಕ
ಕಾರಹುಣ್ಣಿಮೆ ವೇಳೆ ಚಿಂಚೋಳಿ ಶಾಸಕರಿಗೆ ಗಾಯ; ಸ್ವಲ್ಪದರಲ್ಲೇ ಅಪಾಯದಿಂದ ಪಾರು!
ಕಲಬುರಗಿ (ಜೂನ್ 29): ಕಾರಹುಣ್ಣಿಮೆ ಸಂಭ್ರಮಾಚರಣೆ ವೇಳೆ ವೇಗವಾಗಿ ಬಂದ ಬಂಡಿ ಶಾಸಕ ಡಾ.ಉಮೇಶ್ ಜಾಧವ್ ಕಾಲು ಮೇಲೆ ಹಾಯ್ದ ಪರಿಣಾಮ ಶಾಸಕರು ಗಾಯಗೊಂಡಿರುವ ಘಟನೆ ಕಲಬುರ್ಗಿ ಜಿಲ್ಲೆ ಚಿಂಚೋಳಿ ಪಟ್ಟಣದಲ್ಲಿ ನಡೆದಿದೆ.
ಕಾಂಗ್ರೆಸ್ ಪಕ್ಷದಿಂದ ಚಿಂಚೋಳಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಉಮೇಶ್ ಜಾಧವ್ ಅವರು, ಚಿಂಚೋಳಿ ಪಟ್ಟಣದಲ್ಲಿ ನಡೆದ ಕಾರ ಹುಣ್ಣಿಮೆ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಮೊದಲು ಪೂಜೆ ಸಲ್ಲಿಸಿ ಚಕ್ಕಡಿ ಓಡಿಸಿ ಸಂಭ್ರಮಿಸಿದ ಜಾಧವ್, ನಂತರ ಮೊಬೈಲ್ನಲ್ಲಿ ಮಾತನಾಡುತ್ತಾ ನಿಂತಿದ್ದರು. ಈ ವೇಳೆ ವೇಗವಾಗಿ ಒಡಿ ಬಂದ ಎತ್ತಿನ ಬಂಡಿ ನಿಂತಿದ್ದ ಗುಂಪಿನ ಮೇಲೆ ನುಗ್ಗಿದೆ. ಉಮೇಶ್ ಜಾಧವ್ ಅವರ ಮೇಲೆ ಬಂಡಿ ಹಾಯ್ದಿದ್ದು, ಬಲಗಾಲು ಮತ್ತು ಭುಜಕ್ಕೆ ಗಾಯಗಳಾಗಿವೆ.
ಸ್ವಲ್ಪದರಲ್ಲಿಯೇ ಜಾಧವ್ ಅವರು, ಭಾರಿ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಇನ್ನೂ ಇಬ್ಬರಿಗೆ ಗಾಯಗಳಾಗಿವೆ. ಇದೇ ವೇಳೆ ಎತ್ತಿನ ಬಂಡಿ ಮೇಲಿಂದ ಬಿದ್ದು 35 ವರ್ಷದ ರಾಜು ಚೌಹಾನ್ ಎಂಬಾತ ಮೃತ ಪಟ್ಟಿದ್ದಾನೆ ಎಂದೂ ತಿಳಿದುಬಂದಿದೆ. (ಎನ್.ಬಿ)