ಮೈಸೂರು

ಸಮುದಾಯ ರೇಡಿಯೋ ಒಂದು ಪ್ರಬಲ ಮಾಧ್ಯಮ: ಜನಧ್ವನಿ ಬಾನೂಲಿ ಕೇಂದ್ರದ ವ್ಯವಸ್ಥಾಪಕ ಶಿವಕುಮಾರ್

ಪಿರಿಯಾಪಟ್ಟಣ: ಸಮುದಾಯ ಆಧರಿತ ಅಭಿವೃದ್ಧಿ ಪರಿಕಲ್ಪನೆ ಅನುಷ್ಠಾನಗೊಳಿಸಲು ಸಮುದಾಯ ರೇಡಿಯೋ ಒಂದು ಪ್ರಬಲ ಮಾಧ್ಯಮವಾಗಿದೆ ಎಂದು ಸರಗೂರು ಜನಧ್ವನಿ ಬಾನೂಲಿ ಕೇಂದ್ರದ ವ್ಯವಸ್ಥಾಪಕ ಶಿವಕುಮಾರ್ ತಿಳಿಸಿದರು.

ಪಿರಿಯಾಪಟ್ಟಣದ ಹರ್ಡ್ಸ್ ಸ್ವಯಂ ಸೇವಾ ಸಂಸ್ಥೆ ವತಿಯಿಂದ ತಾಲೂಕಿನ ಬೆಟ್ಟದಪುರದ ಎಸ್‌ಎಂಎಸ್ ಫ್ರೌಢ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮುದಾಯ ಬಾನೂಲಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ ಅವರು ಮಾಹಿತಿ ನೀಡಿದರು.

ಸರ್ಕಾರದ ಒಡೆತನದಲ್ಲಿರುವ ಬಾನೂಲಿ ಕೇಂದ್ರಗಳ ಕಾಲ ಮುಗಿದುಹೋಗಿದ್ದು, ಜನ ಸಾಮಾನ್ಯರೇ ಬಾನೂಲಿ ಕೇಂದ್ರಗಳನ್ನು ಸ್ಥಾಪನೆ ಮಾಡಿಕೊಂಡು ತಮ್ಮ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳುವ ಅಥವಾ ಸರ್ಕಾರದ ಮುಂದಿಡುವ ಕಾಲ ಬಂದಿದೆ. ಸಮುದಾಯ ಬಾನೂಲಿ ಎಂದರೆ ಒಂದು ನಿರ್ದಿಷ್ಟ ಸಮುದಾಯವು ತನ್ನ ಸಮಾಜದ ಒಳಿತಿಗಾಗಿ ಬಾನೂಲಿ ಕೇಂದ್ರಗಳನ್ನು ಸ್ಥಾಪಿಸಿಕೊಂಡು ತಮ್ಮ ಆಶೋತ್ತರಗಳ ಬಗ್ಗೆ ಬೆಳಕು ಚೆಲ್ಲುವಂಥ ಮಾಧ್ಯಮವಾಗಿದೆ.

ಇದರಲ್ಲಿ ಸಮುದಾಯದ ಜನರು ಕೇವಲ ಕೇಳುಗರಾಗಿರದೆ ಸ್ವತಃ ತಾವೂ ಇದರಲ್ಲಿ ತಮ್ಮ ಸಮಸ್ಯೆಗಳನ್ನು ನೇರವಾಗಿ ಹೇಳಿಕೊಳ್ಳಬಹುದಾಗಿದ್ದು, ತನ್ನ ಸುತ್ತಮುತ್ತ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಧ್ವನಿಯೆತ್ತುವಂತಹ ಗುರುತರವಾದ ಕೆಲಸಗಳನ್ನು ಸಮುದಾಯ ಬಾನೂಲಿ ಕೇಂದ್ರ ಮಾಡುವುದರ ಜೊತೆಗೆ ಕಾನೂನು, ಹಣಕಾಸು ಮತ್ತು ಆಡಳಿತ ವಿಷಯದಲ್ಲೂ ಸಹಕಾರಿಯಾಗಿದೆ.

ಸಮುದಾಯ ಬಾನೂಲಿಯು ಜನರ ಸಂಸ್ಕೃತಿಯ ರಕ್ಷಕನಾಗಿ ಕೂಡ ಕೆಲಸ ನಿರ್ವಹಿಸಬಹುದಾಗಿದೆ. ಸಮುದಾಯದ ಜನರ ಆಶೋತ್ತರಗಳನ್ನು ಈಡೇರಿಸುವ ಸಲುವಾಗಿ ನಗರ ಪ್ರದೇಶಗಳನ್ನು ಒಳಗೊಂಡಂತೆ ಗ್ರಾಮಾಂತರ ಪ್ರದೇಶಗಳಲ್ಲಿಯೂ ಗ್ರಾಮೀಣ ಜನರ ಅನುಕೂಲಕ್ಕಾಗಿ ಬಾನೂಲಿ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಇದನ್ನು ಜನ ಸಾಮಾನ್ಯರೆ ಸ್ಥಾಪಿಸಿ ಅವರೇ ಇದನ್ನು ಮುನ್ನಡೆಸುವ, ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಕೆಲಸವನ್ನು ಮಾಡುವುದರ ಜೊತೆಗೆ ಸ್ಥಳೀಯ ಮಟ್ಟದ ಕಲೆ ಮತ್ತು ಸಾಂಸ್ಕೃತಿಕ ಚಟವಟಿಕೆಗಳಿಗೆ ಉತ್ತೇಜನ ನೀಡುವುದು ಸಮುದಾಯ ರೇಡಿಯೋದ ಪ್ರಮುಖ ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹರ್ಡ್ಸ್ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಪಿ.ಟಿ. ಲಕ್ಷ್ಮೀನಾರಾಯಣ, ಖಜಾಂಚಿ ಬಿ.ಆರ್. ಗಣೇಶ್, ನಿರ್ದೇಶಕರಾದ ಇಮ್ರಾನ್ ಖಾನ್, ಕಸಾಪ ಅಧ್ಯಕ್ಷ ಬಿ.ಎಎಂ. ಶಿವಸ್ವಾಮಿ, ರೋಟರಿ ಮಾಜಿ ಅಧ್ಯಕ್ಷ ಡಾ. ಪ್ರಕಾಶ್ ಬಾಬುರಾವ್, ಮುನಾವರ್ ಪಾಷ, ಎಸ್.ಎಂ.ಎಸ್. ಶಿಕ್ಷಕ ಅಂದಾನಯ್ಯ, ಸೋಮಣ್ಣ, ಆರ್‌ಟಿಐ ಕಾರ್ಯಕರ್ತ ನಾಗರಾಜು ಸೇರಿದಂತೆ ಹಲವರು ಹಾಜರಿದ್ದರು.

ವರದಿ: ರಾಜೇಶ್

Leave a Reply

comments

Related Articles

error: