ದೇಶವಿದೇಶ

ಕಸದ ಸಮಸ್ಯೆಗೆ ಪರಿಹಾರ ನೀಡಬಲ್ಲವೇ ಪ್ಲಾಸ್ಟಿಕ್ ತಿನ್ನುವ ಹುಳುಗಳು!?

ಕಾಂಟಾಬ್ರಿಯಾ (ಸ್ಪೇನ್) ಜೂನ್ 29 : ಕರೆಂಟ್ ಬಯೋಲಜಿ ಎಂಬ ಜೀವವಿಜ್ಞಾನ ನಿಯತಕಾಲಿಕವೊಂದರಲ್ಲಿ ಈಗಷ್ಟೇ ಮಂಡಿಸಲಾದ ಪ್ರಯೋಗ ಪ್ರಬಂಧವೊಂದು ಕಂಬಳಿ ಹುಳುಗಳು ಪ್ಲಾಸಿಕ್ ತಿಂದು ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ ಎಂಬುದನ್ನು ಸಾಬೀತು ಮಾಡಿದೆ.

ಬಹುತೇಕ ವೈಜ್ಞಾನಿಕ ಸಂಶೋಧನೆಗಳು ಒಂದು ಪ್ರಯೋಗದ ಫಲಿತಾಂಶವನ್ನು ಆಧರಿಸಿ ನಡೆಯುವ ಮತ್ತೊಂದು ಅಧ್ಯಯನವಾಗಿರುತ್ತದೆ. ಇವುಗಳ ನಡುವೆ ಆಕಸ್ಮಿಕ ಸಂಶೋಧನೆಗಳೂ ಸಹ ಬೆರಗು ಮೂಡಿಸುತ್ತವೆ.  ವಿನಾಶಕಾರಿ ಪ್ಲಾಸ್ಟಿಕ್ ನಿಯಂತ್ರಣ ಹಾಗೂ ಪರಿಸರ ಸಂರಕ್ಷಣೆಗಾಗಿ ವಿಶ್ವಾದ್ಯಂತ ನಡೆಯುತ್ತಿರುವ ಮಹತ್ವದ ಅಧ್ಯಯನಗಳು ಮತ್ತು ಸಂಶೋಧನೆಗಳಲ್ಲಿ ಈ ಪ್ರಯೋಗ ಅತ್ಯಂತ ಮಹತ್ವದೆನಿಸಿದೆ.

ಈ ಸಂಶೋಧನೆ ರೂವಾರಿ ಸ್ಪೇನ್‍ನ ಕಾಂಟಾಬ್ರಿಯಾ ವಿಶ್ವವಿದ್ಯಾಲಯದ ಜೀವ ವಿಜ್ಞಾನಿ ಹಾಗೂ ಹವ್ಯಾಸಿ ಜೇನು ಕೃಷಿ ಮಾಡುವ ಡಾ.ಫೆಡೆರಿಕಾ ಬರ್ಟೊಚಿನಿ ಎಂಬ ಉತ್ಸಾಹಿ ಮಹಿಳೆ. ತಮ್ಮ ಜೇನುಗೂಡಿನ ಮೇಣದಂಥ ಪದಾರ್ಥವನ್ನು ಕಂಬಳಿಹುಳುಗಳು ತಿಂದು ರಂಧ್ರ ಮಾಡಿದ್ದನ್ನು ಇವರು ಗಮನಿಸಿದ್ದರು. ಇಂಥ ಕೆಲವು ಕಂಬಳಿಹುಳುಗಳನ್ನು ಪ್ಲಾಸ್ಟಿಕ್ ಶಾಪಿಂಗ್ ಬ್ಯಾಗ್‍ನಲ್ಲಿಟ್ಟು ಗಂಟು ಹಾಕಿ ತಮ್ಮ ಮನೆಗೆ ಕೊಂಡೊಯ್ಡರು. ಆದರೆ ಕೆಲವು ಗಂಟೆಗಳ ನಂತರ, ಕಂಬಳಿಹುಳುಗಳನ್ನು ನೋಡಲಾಗಿ ಬ್ಯಾಗ್‍ನಲ್ಲಿ ರಂಧ್ರಗಳಾಗಿದ್ದು, ಚೀಲದಿಂದ ತಪ್ಪಿಸಿಕೊಂಡ ಇವುಗಳು ಮನೆಯಲ್ಲಿ ಹರಿದಾಡುತ್ತಿದ್ದವು.

ಜೀವಿಗಳನ್ನು ಬಳಸಿ ಪ್ಲಾಸ್ಟಿಕ್ ನಿರ್ಮೂಲನೆ ಮಾಡಲು ಈ ಹಿಂದೆ ನಡೆಸಲಾದ ಪ್ರಯೋಗಗಳು ನಿರೀಕ್ಷಿತ ಫಲಿತಾಂಶ ನೀಡಿಲ್ಲ. ನಾಕಾರ್ಡಿಯಾ ಆಸ್ಟೆರೋಯಿಡ್ಸ್ ಎಂಬ ಬ್ಯಾಕ್ಟೀರಿಯಾದಂಥ ಪ್ರಬೇಧದಿಂದ ನಡೆಸಿದ ಅಧ್ಯಯನ ಮತ್ತು ಸಂಶೋಧನೆ ನಿರಾಸೆಗೊಳಿಸಿದ್ದವು. ಈ ಜೀವಿಗಳು ಕೇವಲ ಅರ್ಧ ಮಿಲಿಮೀಟರ್ ದಪ್ಪದ ಪ್ಲಾಸ್ಟಿಕ್ ಫಿಲ್ಮ್ ತಿನ್ನಲು ಆರು ತಿಂಗಳುಗಳಿಗಿಂತ ಹೆಚ್ಚಿನ ಸಮಯ ತೆಗೆದುಕೊಂಡಿದ್ದವು. ಆದರೆ ಕೆಲವೇ ನಿಮಿಷಗಳಲ್ಲಿ ದೊಡ್ಡ ಪ್ಲಾಸ್ಟಿಕ್ ಚೀಲಗಳನ್ನು ರಂಧ್ರ ಮಾಡಿ ತಪ್ಪಿಸಿಕೊಂಡಿದ್ದ ಈ ವಿಶೇಷ ಪ್ರಬೇಧದ ಕಂಬಳಿ ಹುಳುಗಳು ಇತರ ಜೀವಿಗಳಿಗಿಂತಲೂ ಪ್ಲಾಸ್ಟಿಕ್ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ಸಾಬೀತುಪಡಿಸಿರುವುದಾಗಿ ವಿಜ್ಞಾನಿಗಳು ಹೇಳುತ್ತಿದ್ದಾರೆ.

ಇಂತಹ ಸಂಶೋಧನೆಗಳು ನಿರುಪಯುಕ್ತ ಪ್ಲಾಸ್ಟಿಕ್ ಕಸದ ವಿಲೇವಾರಿಗೆ ಮಹತ್ವದ ತಿರುವು ಕೊಡಬಹುದು ಎಂಬುದು ವಿಜ್ಞಾನಿಗಳ ಅಂಬೋಣ. ಭಾರತಕ್ಕೂ ಈ ವಿಷಯ ಮಹತ್ವದ್ದಾಗಿದ್ದು, ಗಾರ್ಬೇಜ್ ಸಿಟಿ ಎಂಬ ಅಪಹಾಸ್ಯಕ್ಕೊಳಗಾಗಿರುವ ಬೆಂಗಳೂರಿನ ಕಸದ ಸಮಸ್ಯೆಗೂ ಇಂತಹ ಸಂಶೋಧನೆಗಳು ಪರಿಹಾರ ಒದಗಿಸಬಹುದೇ? ಕಾದು ನೋಡಬೇಕಿದೆ. (ಎನ್.ಬಿ)

Leave a Reply

comments

Related Articles

error: