ಪ್ರಮುಖ ಸುದ್ದಿ

ಅಪ್ಪಟ ಗ್ರಾಮೀಣ ಪ್ರತಿಭೆಗೆ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ : ಎಂ.ಎಸ್.ಮರೀಸ್ವಾಮಿಗೌಡ

ರಾಜ್ಯ(ಮಂಡ್ಯ)ಜೂ.30:-  ಸಿಜಿಕೆ ಒಬ್ಬ ಅದ್ಭುತ ರಂಗಕಲಾವಿದರು, ಇವರನ್ನು ರಂಗಜಂಗಮರೆಂದು ಕರೆಯಬಹುದು, ರಂಗಭೂಮಿಯ ಮೂಲಕ ಚಳವಳಿಗಳಿಗೆ ಆಶ್ರಯವನ್ನು ನೀಡಿ ಚಳವಳಿ ಬೆಳೆಯಲು ಕಾರಣರಾದವರು ಎಂದು ಭೂದಾಖಲೆಗಳ ಇಲಾಖೆಯ ಜಂಟಿ ನಿರ್ದೇಶಕ ಎಂ.ಎಸ್.ಮರೀಸ್ವಾಮಿಗೌಡ ಹೇಳಿದರು.

ಪಾಂಡವಪುರ ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಕರ್ನಾಟಕ ಬೀದಿನಾಟಕ ಅಕಾಡೆಮಿ, ಮಂಡ್ಯದ ಗಾಮನಹಳ್ಳಿಯ ಸಪ್ತಸ್ವರ ಕಲ್ಚರಲ್ ಟ್ರಸ್ಟ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ `ಸಿಜಿಕೆ ರಂಗ ಪ್ರಶಸ್ತಿ ಪ್ರಧಾನ ಮತ್ತು ನಾಡಪ್ರಭು ಕೆಂಪೇಗೌಡರ ಜಯಂತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಿಜಿಕೆ ಅವರ ಮಾರ್ಗದಲ್ಲಿ ನೂರಾರು ಕಲಾವಿದರು ಬೆಳೆದಿದ್ದಾರೆ. ಇಂತಹ ಕಲಾವಿದರ ಹೆಸರಿನಲ್ಲಿ ನೀಡುವ ಸಿಜಿಕೆ ರಂಗ ಪ್ರಶಸ್ತಿಯನ್ನು ಪಡೆಯುವ ಮೂಲಕ ನಾಗಲೀಂಗೇಗೌಡರು ತಾವು ಕೂಡ ಒಬ್ಬ ಉತ್ತಮ ಪ್ರತಿಭೆ ಎಂಬುದನ್ನು ತೋರ್ಪಡಿಸಿದ್ದಾರೆ ಎಂದರು. ದೃಶ್ಯಮಾಧ್ಯಮಗಳ ಹಾವಳಿಯಿಂದ ಗ್ರಾಮೀಣ ಭಾಷೆ, ಜನಪದ ಹಾಡುಗಳು ನಾಶವಾಗುತ್ತಿರುವ ದಿನಮಾನಗಳಲ್ಲಿ ನಾಗಲಿಂಗೇಗೌಡರು ಜಾನಪದ ಹಾಡುಗಾರಿಕೆಯ ಮೂಲಕ ಗ್ರಾಮೀಣ ಜನಪದ ಸೊಗಡನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಅಪ್ಪಟ ಗ್ರಾಮೀಣ ಪ್ರತಿಭೆಗೆ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.

ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ರಾಮಕೃಷ್ಣೇಗೌಡ ಮಾತನಾಡಿ, ಯಾವುದೇ ಗುರುಗಳ ಮಾರ್ಗದರ್ಶನವನ್ನು ಪಡೆಯದ ನಾಗಲಿಂಗೇಗೌಡರು ತನ್ನ ಸ್ವಂತಃ ಪರಿಶ್ರಮದ ಮೂಲಕ ಸಂಗೀತ ಕ್ಷೇತ್ರದಲ್ಲಿ ಸಾಧನೆಯ ಮೆಟ್ಟಿಲುಗಳನ್ನೇರಿ ಬಹಳ ಎತ್ತರಕ್ಕೆ ಬೆಳೆಯುವ ಮೂಲಕ ನಮ್ಮ ತಾಲೂಕಿಗೆ ಕೀರ್ತಿತಂದಿದ್ದಾರೆ. ಇಂತಹ ವ್ಯಕ್ತಿಗೆ ರಂಗಕ್ಷೇತ್ರದ ಧೀಮಂತ ನಾಯಕ ಸಿಜಿಕೆ ಹೆಸರಿನ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಇದೇವೇಳೆ ಗ್ರಾಮರಂಗ ವೇದಿಕೆಯ ಅಧ್ಯಕ್ಷ ಬೇವಿನಕುಪ್ಪೆ ನಾಗಲಿಂಗೇಗೌಡರಿಗೆ ಸಿಜಿಕೆ ಪ್ರಶಸ್ತಿ ಪ್ರದಾನ ಮಾಡಿದರು.

ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ.ಬಿ.ನಾರಾಯಣಗೌಡ. ಕಸಾಪ ಜಿಲ್ಲಾಧ್ಯಕ್ಷ ಸಿ.ಕೆ.ರವಿಕುಮಾರ್‍ಚಾಮಲಾಪುರ, ಸಪ್ತಸ್ವರ ಕಲ್ಚರಲ್ ಟ್ರಸ್ಟ್ ಅಧ್ಯಕ್ಷ ಗಾಮನಹಳ್ಳಿ ಸ್ವಾಮಿ, ಕಸಾಪ ತಾಲೂಕು ಅಧ್ಯಕ್ಷ ಎಂ.ರಮೇಶ್, ಪ್ರಕಾಶ್, ನಂಜುಂಡಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: