ಮೈಸೂರು

ವಿಜೃಂಭಣೆಯಿಂದ ನೆರೆವೇರಿದ ನಂಜನಗೂಡು ಚಿಕ್ಕ ಜಾತ್ರೋತ್ಸವ

ದಕ್ಷಿಣ ಕಾಶಿ ಎಂದೆ ಪ್ರಸಿದ್ಧವಾಗಿರುವ ಶ್ರೀಕ್ಷೇತ್ರ ನಂಜನಗೂಡಿನಲ್ಲಿ ಮಂಗಳವಾರದಂದು ಚಿಕ್ಕ ಜಾತ್ರಾ ಮಹೋತ್ಸವವೂ ವಿಜೃಂಭಣೆಯಿಂದ ನೆರವೇರಿತು. ಸಾವಿರಾರು ಭಕ್ತರು ಭಾಗವಹಿಸಿ ತೇರಿಗೆ ಹಣ್ಣು-ದವನ ಎಸೆಯುವ ಮೂಲಕ ಭಕ್ತಿಭಾವ ಮೆರೆದರು.

ಗಣಪತಿ, ಶ್ರೀಕಂಠೇಶ್ವವರ ಸ್ವಾಮಿ, ಪಾರ್ವತಿ ದೇವಿಯವರ ಉತ್ಸವ ಮೂರ್ತಿಗಳು ಮಕರ ಲಗ್ನದಲ್ಲಿ ರಥಾರೋಹಣವಾದ ನಂತರ ದೇವಸ್ಥಾನದ ಪ್ರಧಾನ ಅರ್ಚಕರಾದ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ರಥಕ್ಕೆ ವಿಶೇಷ ಪೂಜೆ ಪುನಸ್ಕಾರಗಳನ್ನು ನೆರವೇರಿಸಿದರು. ಇದಕ್ಕೂ ಮುನ್ನ ಶ್ರೀಕಂಠೇಶ್ವರ ಸ್ವಾಮಿಯವರ ಉತ್ಸವ ಮೂರ್ತಿಯನ್ನು ದೇವಾಲಯದ ಸುತ್ತ ಮೆರವಣಿಗೆ ಮಾಡಿ ವಸಂತ ಮಂಟಪದಲ್ಲಿ ಇಟ್ಟು ಶ್ರೀಕಂಠಮುಡಿಯನ್ನು ಧರಿಸಲಾಯಿತು.

ನಂತರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಯಪ್ರಕಾಶ್‍ರವವರು ರಥಾರೂಢನಾದ ಶ್ರೀಕಂಠೇಶ್ವರ ಸ್ವಾಮಿಯವರು ರಥಕ್ಕೆ ಪೂಜೆ ಸಲ್ಲಿಸಿ ರಥದ ಚಕ್ರಗಳಿಗೆ ಈಡುಗಾಯಿ ಓಡೆಯುವ ಮೂಲಕ ಬೆಳಗ್ಗೆ 10 ಗಂಟೆಗೆ ಮಕರ ಲಗ್ನದಲ್ಲಿ ಚಿಕ್ಕ ಜಾತ್ರೆ ಮಹೋತ್ಸವಕ್ಕೆ ಚಾಲನೆ ನೀಡಿದರು. ತುಂತುರು ಮಳೆಯಲ್ಲೇ ಆರಂಭಗೊಂಡ ರಥೋತ್ಸವದಲ್ಲಿ ರಾಜ್ಯದ ನಾನಾ ಭಾಗಗಳಿಂದ ಬಂದ ಸಾವಿರಾರು ಜನ ಭಕ್ತರು ಪಾಲ್ಗೊಂಡು ಭಕ್ತಿ ಪರವಶರಾಗಿ ಶ್ರೀಕಂಠೇಶ್ವರ ಸ್ವಾಮಿ, ಪಾರ್ವತಿ ದೇವಿಗೆ ಜಯಘೋಷ ಕೂಗುತ್ತಾ ಹಣ್ಣು ಧವನ ಎಸೆದು ರಥವನ್ನು ಎಳೆದು ಸಂಭ್ರಮಿಸಿದರು. ನಗರದ ರಥದ ಬೀದಿಯಲ್ಲಿ ವಿಜೃಂಭಣೆಯಿಂದ ಜರುಗಿದ ರಥೋತ್ಸವುವೂ 11.30 ರ ಸುಮಾರಿಗೆ ಎಲ್ಲ ರಥಗಳು ಸುಲಲಿತವಾಗಿ ಸ್ವಸ್ಥಾನ ತಲುಪಿದವು. ಇದೇ ಸಂದರ್ಭ ಪೊಲೀಸ್ ಇಲಾಖೆ ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಮುಂಜಾಗ್ರತೆ ಕ್ರಮವಾಗಿ ರಥದ ಚಕ್ರದ ಬಳಿ ಯಾರು ಬರದಂತೆ ಸೂಕ್ತ ಬಂದೋಬಸ್ತ್ ಮಾಡಿದ್ದರು.

ಹುಣ್ಣಿಮೆ ಹಾಗೂ ಚಿಕ್ಕ ಜಾತ್ರೆ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಜನ ಬರುವ ನಿರೀಕ್ಷೆ ಇದ್ದರಿಂದ ದೇವಾಲಯದ ಆಡಳಿತ ಮಂಡಳಿಯು ಸಾವಿರಾರು ಜನಕ್ಕೆ ದಾಸೋಹದಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಲ್ಲದೆ, ನಗರದ ಕೆಲ ಸಂಘ ಸಂಸ್ಥೆಗಳು ದೇವಾಲಯದ ಸುತ್ತ ಮುತ್ತ  ಬಾತು, ಮೊಸರನ್ನವನ್ನು ಪ್ರಸಾದವಾಗಿ ಭಕ್ತರಿಗೆ ವಿತರಿಸಿದರು.

Leave a Reply

comments

Related Articles

error: