ಕರ್ನಾಟಕಪ್ರಮುಖ ಸುದ್ದಿ

ಮಲೇರಿಯಾ, ಡೆಂಗ್ಯೂ ನಿಯಂತ್ರಣಕ್ಕೆ ಅರಿವು ಮೂಡಿಸಲು ಸೂಚನೆ

ಹಾಸನ (ಜೂನ್ 30): ಸೊಳ್ಳೆಗಳಿಂದ ಹರಡುವ ಮಲೇರಿಯಾ ಮತ್ತು ಡೆಂಗ್ಯೂ ನಿಯಂತ್ರಣಕ್ಕೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಲೇರಿಯಾ ಮತ್ತು ಡೆಂಗ್ಯೂ ವಿರೋದ ಮಾಸಾಚರಣೆಗಳ ಹಿನ್ನೆಲೆಯಲ್ಲಿ ಜೂನ್ 29ರಂದು ನಡೆದ ಜಿಲ್ಲಾ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಈ ರೋಗಗಳು ಸೊಳ್ಳೆಗಳಿಂದ ಹರಡುವುದರಿಂದ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮವಹಿಸಲು ಜನರಿಗೆ ತಿಳುವಳಿಕೆ ನೀಡಬೇಕು ಎಂದ ಅವರು ಜಿಲ್ಲೆಯಲ್ಲಿ 2023 ರ ವೇಳೆಗೆ ಮಲೇರಿಯಾ ನಿರ್ಮೂಲನೆ ಗುರಿ ಹೊಂದಿದ್ದು, ಈ ಸಂಬಂಧ ಎಲ್ಲಾ ಇಲಾಖೆಗಳು ಸಹಕರಿಸಬೇಕೆಂದು ಸೂಚಿಸಿದರು.

ಸಾರ್ವಜನಿಕರು ಮನೆ ಸುತ್ತಮುತ್ತ ಸ್ವಚ್ಚವಾಗಿಡುವುದು ಜೊತೆಗೆ ನೀರು ನಿಲ್ಲದಂತೆ ನಿಗಾವಹಿಸಲು ಹಾಗೂ ಮನೆಗಳಲ್ಲಿ ನೀರು ಶೇಖರಣೆ ಮಾಡುವ ಬ್ಯಾರಲ್ ಮತ್ತು ತೊಟ್ಟಿಗಳನ್ನು ಸ್ವಚ್ಚವಾಗಿಡಲು ಮುತುವರ್ಜಿವಹಿಸಲು ಅರಿವು ಮೂಡಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರಸ್ತೆ ಬದಿ ಗಾಡಿಗಳಲ್ಲಿ ಆಹಾರ ತಯಾರಿಸಿ ಮಾರಾಟ ಮಾಡುವವರು ಸ್ವಚ್ಚತೆ ಕಾಪಾಡಬೇಕು ಜೊತೆಗೆ ಶುದ್ದ ಆಹಾರ ಸಾಮಗ್ರಿಗಳನ್ನು ಬಳಸುವಂತೆ ಸೂಚನೆ ನೀಡುವಂತೆ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಬಾಬ್ ಸೆಂಟರ್, ಗೋಬಿ ಮಂಚೂರಿ ಗಾಡಿಗಳಲ್ಲಿ ಮತ್ತು ಕೆಲವು ಹೋಟೆಲ್‍ಗಳಲ್ಲಿ ವಾರಗಟ್ಟಲೆ ಬಳಸಿದ ಎಣ್ಣೆಯನ್ನು ಪುನಃ ಕರೆಯಲು ಬಳಸುತ್ತಾರೆ ಎಂದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರು ಮಂಡಿಗಳಲ್ಲಿ ಬಾಳೆ ಗೊನೆಯನ್ನು ಹಣ್ಣು ಮಾಡಲು ರಾಸಾಯನಿಕ ಪದಾರ್ಥ ಬಳಸುತ್ತಾರೆ ಕೆಲವು ಹಣ್ಣುಗಳನ್ನು ತಾಜಾವಾಗಿ ಇಡಲು ಸಹ ರಾಸಾಯನಿಕ ಪದಾರ್ಥ ಬಳಸುತ್ತಾರೆ. ಬಿಗ್‍ಬಜಾರ್‍ನಲ್ಲಿ ಅವಧಿ ಮುಗಿದ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದಾರೆ ಇವುಗಳನ್ನು ಸೇವಿಸುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಈ ನಿಟ್ಟಿನಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ನಿಗಾವಹಿಸಬೇಕು ಎಂದರು.

ಗ್ರಾಮೀಣ ಪ್ರದೇಶದಲ್ಲಿಯೂ ಸಹ ಸ್ವಚ್ಚತೆಗೆ ಆದ್ಯತೆ ನೀಡಿ ಸೊಳ್ಳೆಗಳ ಉತ್ಪತ್ತಿ ತಾಣಗಳಾದ ಗುಂಡಿಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸುವ ಮೂಲಕ ಸೊಳ್ಳೆಗಳ ನಿಯಂತ್ರಣಕ್ಕೆ ಗ್ರಾಮ ಪಂಚಾಯತಿ ಮಟ್ಟದಲ್ಲಿಯೂ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ತಿಳಿಸಿದರು.

ಪರಿಸರ ಹಾನಿಯಾಗುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇದಿಸಿದ್ದರೂ ಸಹ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಕಂಡು ಬರುತ್ತಿದ್ದು, ಕಾರ್ಯಕ್ರಮ ಅನುಷ್ಟಾನ ವಿಫಲವಾಗಿದ್ದು ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ನಿಗಾ ವಹಿಸುವಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ ಕಾರ್ಖಾನೆಗಳಿಂದ ಕಲುಷಿತ ನೀರು ಕೆರೆಗಳಿಗೆ ಹೊಗದಂತೆ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಹೊಸದಾಗಿ ನೀರು ಸಂಗ್ರಹವಾದ ಕೆರೆಗಳಿಗೆ ಲಾರ್ವಹಾರಿ ಮೀನು ಬಿಡಲು ಮೀನುಗಾರಿಕೆ ಇಲಾಖೆ ಹಾಗೂ ನೀರಾವರಿ ಇಲಾಖೆಗಳು ಅಲ್ಲಿನ ಸ್ಥಳೀಯ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಲಾರ್ವಹಾರಿ ಮೀನು ಬಿಡುವ ಕ್ರಮ ವಹಿಸಲು ಸೂಚಿಸಿದರು.

ಜಿಲ್ಲೆಯಲ್ಲಿ ಒಟ್ಟು 106 ಖಚಿತ ಡೆಂಗ್ಯೂ ಜ್ವರ ಪ್ರಕರಣಗಳು ವರದಿಯಾಗಿದ್ದು, ಆ ಪೈಕಿ 63 ಪ್ರಕರಣಗಳು ಹಾಸನ ತಾಲ್ಲೂಕಿನದ್ದಾಗಿವೆ. ಅದರಲ್ಲಿ 44 ಪ್ರಕರಣಗಳು ಹಾಸನ ನಗರಕ್ಕೆ ಒಳಪಟ್ಟಿವೆ. ಈ ಹಿನ್ನೆಲೆಯಲ್ಲಿ ಕೂಡಲೇ ನಗರಸಭೆ ಸಹಯೋಗದೊಂದಿಗೆ ಈಡೀಸ್ ಸೊಳ್ಳೆಗಳ ಉತ್ಪತ್ತಿ ತಾಣಗಳ ನಾಶಕ್ಕೆ ಕ್ರಮವಹಿಸಲು (ಮಾಸ್ ಸೋರ್ಸ್ ರಿಡಕ್ಷನ್ ) ತಿಳಿಸಿದರು.

ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ|| ಸತೀಶ ಅವರು ಮಾತನಾಡಿ ಕೂಡಲೇ ನಗರ ವ್ಯಾಪ್ತಿಯಲ್ಲಿಯೂ ಮಾಸ್ ಸೋರ್ಸ್ ರಿಡಕ್ಷನ್ ಕಾರ್ಯ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಹಾಸನ ಜಿಲ್ಲೆಯಲ್ಲಿ 2018 ನೇ ಸಾಲಿನಲ್ಲಿ ಒಂದೇ ಒಂದು ಮಲೇರಿಯಾ ಪ್ರಕರಣ ವರದಿಯಾಗಿದ್ದು, ಅವರು ಗುಣಮುಖರಾಗಿರುತ್ತಾರೆ. ಮಂಗಳೂರು ಅಥವಾ ಇತರೆ ಮಲೇರಿಯಾ ಪೀಡಿತ ಪ್ರದೇಶ/ ರಾಜ್ಯಗಳಿಂದ ಜಿಲ್ಲೆಗೆ ಅನ್ಯ ಕಾರ್ಯ ನಿಮಿತ್ತ ಬರುವ ಕಾರ್ಮಿಕರ ಬಗ್ಗೆ ನಿಗಾ ವಹಿಸಲಾಗಿದ್ದು, ಅವರಿಗೆ ಕೂಡಲೇ ರಕ್ತ ಪರೀಕ್ಷೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಇರುವ ಎಲ್ಲಾ ಕೆರೆ ಕಟ್ಟೆ ನದಿ ಇತ್ಯಾದಿಗಳಲ್ಲಿ ಸೊಳ್ಳೆ ಮರಿಗಳನ್ನು ತಿನ್ನುವ ಲಾರ್ವಾಹಾರಿ ಮೀನುಗಳಾದ ಗಪ್ಪಿ ಮತ್ತು ಗಾಂಬೂಷಿಯಾ ಬಿಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಆರೋಗ್ಯ ಇಲಾಖೆಯಿಂದ ಈಗಾಗಲೇ ಹಾಸನ ನಗರದಲ್ಲಿ ಪ್ರತಿ ತಿಂಗಳ ಮೊದಲ ಹಾಗೂ 3 ನೇ ಶುಕ್ರವಾರ ಇಲಾಖಾ ಸಿಬ್ಬಂದಿಯೊಂದಿಗೆ ಸೊಳ್ಳೆ ಉತ್ಪತ್ತಿ ತಾಣಗಳ ನಾಶ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಅದರ ಜೊತೆಗೆ ಜೂನ್ 7 ರಿಂದ 15 ನೇ ತಾರೀಖಿನ ವರೆಗೆ ನಗರದ ವಿವಿಧ ಸಾರ್ವಜನಿಕ ಪ್ರದೇಶಗಳಾದ ಕಚೇರಿಗಳು, ಆಸ್ಪತ್ರೆಗಳು, ಶಾಲಾ ಕಾಲೇಜುಗಳು ಇತ್ಯಾದಿಗಳಲ್ಲಿ ವಿಶೇಷ ಸರ್ವೇ ಕೈಗೊಳ್ಳಲಾಗಿದೆ ಎಂದು ಸಭೆಯಲ್ಲಿ ಡಾ|| ರಾಜ್ ಗೋಪಾಲ್ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳು ತಿಳಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ|| ಶಂಕರ್, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ|| ಹಿರಣ್ಣಯ್ಯ, ಹಾಸನ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ||ಸಂತೋಷ್, ಕೀಟಶಾಸ್ತ್ರಜ್ಞರಾದ ರಾಜೇಶ್ ಕುಲಕರ್ಣಿ, ಜಿಲ್ಲಾ ಮೀನುಗಾರಿಕೆ ಇಲಾಖೆ ಅಧಿಕಾರಿಗಳು, ಜಿಲ್ಲಾ ಆಯುಷ್ ಅಧಿಕಾರಿಗಳು, ಹಾಸನ ನಗರ ಸಭೆಯ ಅಧಿಕಾರಿಗಳು, ಜಿಲ್ಲಾ ಕೈಗಾರಿಕಾ ಇಲಾಖೆಯ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮಾಲಿನ್ಯ ನಿಯಂತ್ರಣ ಇಲಾಖೆಯ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಸಭೆಯಲ್ಲಿ ಭಾಗವಹಿಸಿದ್ದರು. (ಎನ್.ಬಿ)

Leave a Reply

comments

Related Articles

error: