ಮೈಸೂರು

ಹುಣಸೂರಿನಲ್ಲಿ ಸುಗಮ ವಾಹನ ಸಂಚಾರಕ್ಕಾಗಿ ದಿಟ್ಟ ನಿರ್ಧಾರ ಕೈಗೊಳ್ತಾರಾ ಶಾಸಕರು?

ಮೈಸೂರು, ಜೂ.30:- ಹುಣಸೂರು ನಗರ ಯಾರೂ ನಿರೀಕ್ಷಿಸದಷ್ಟು ಯದ್ವಾತದ್ವಾ ಬೆಳೆದು ನಿಂತಿರುವುದರ ಜೊತೆಗೆ ಭಾರಿ ಸಂಖ್ಯೆಯಲ್ಲಿ ಹೆಚ್ಚಾಗಿರುವ ವಾಹನ ದಟ್ಟಣೆಯಿಂದ ಸವಾರರು ಹಾಗೂ ಪಾದಚಾರಿಗಳು ತಮ್ಮ ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ದಶಕಗಳಿಂದ ಹುಟ್ಟುಹಬ್ಬಕ್ಕೆ ಹೊಸ ಬಟ್ಟೆ ಬದಲಿಸಿದಂತೆ ಪ್ರತಿ ವರ್ಷ ಡಾಂಬರು ಕಂಡುಕೊಂಡ ರಸ್ತೆಗಳು ಅಗಲ ಆಗದಿರುವುದು ದುರಂತ. ಮಾಜಿ ಶಾಸಕ ವಿ.ಪಾಪಣ್ಣ ಶಾಸಕರಾದ ಸಂದರ್ಭದಲ್ಲಿ ರಸ್ತೆ ತೆರವು ಕಾರ್ಯಚರಣೆ ಮಾಡಿ ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು ಬಿಟ್ಟರೆ, ನಂತರ ದಿನಗಳಲ್ಲಿ ಯಾವೊಬ್ಬ ಜನಪ್ರತಿನಿಧಿಯಾಗಲಿ, ಅಧಿಕಾರಿಗಳಾಗಲಿ ರಸ್ತೆಗಳ ಅಕ್ರಮ ಒತ್ತುವರಿ ತೆರವುಗೊಳಿಸಿ, ಅಗಲಿಕರಣಗೊಳಿಸುವ ಧೈರ್ಯ ಮಾಡದಿರುವುದು ಇಂದಿನ ಸಂಚಾರ ಅಸ್ತವ್ಯಸ್ತಕ್ಕೆ ಪ್ರಮುಖ ಕಾರಣವಾಗಿದೆ.

ನಗರಾದ್ಯಂತ ಅಪ್ರಾಪ್ತ ವಯಸ್ಸಿನವರು ಬೈಕ್ ಚಾಲನೆ ಮಾಡುವವರ ಸಂಖ್ಯೆ ಅಧಿಕವಾಗಿದ್ದು ವೇಗದ ವಿಚಾರದಲ್ಲಿ ಹೆಣ್ಣು ಮಕ್ಕಳು ಗಂಡು ಮಕ್ಕಳಿಗೆ ಪೈಪೋಟಿ ನೀಡುತ್ತಿರುವುದು ಪೋಷಕರಲ್ಲಿ ಭಯ ಮೂಡಿಸುತ್ತಿದ್ದರೆ, ಪಾದಚಾರಿಗಳಲ್ಲಿ ಹಾಗೂ ಪೋಲಿಸರಿಗೆ ತಲೆ ನೋವಾಗಿ ಪರಿಣಮಿಸಿದೆ. ಆಗಾಗ ಪೋಲಿಸರು ಅಡಗಟ್ಟಿ ಬುದ್ಧಿ ಹೇಳುವ ಜೊತೆಗೆ ದಂಡ ಹಾಕುತ್ತಿದರೂ ಅಪ್ರಾಪ್ತ ವಯಸ್ಸಿನವರು ಬೈಕ್ ಚಾಲನೆ ಹಾಗೂ ಅತಿ ವೇಗ ಚಾಲನೆ ತಡೆಗಟ್ಟುವಲ್ಲಿ ಸಂಪೂರ್ಣ ಯಶಸ್ವಿಯಾಗಿಲ್ಲ.

ಅಪ್ರಾಪ್ತ ಮಕ್ಕಳ ಬೈಕ್ ಚಾಲನೆ ಅನಾಹುತ ಹಾಗೂ ಅದರ ದುಷ್ಪರಿಣಾಮ ಪೋಷಕರ ಮೇಲಾಗುವುದರ ಬಗ್ಗೆ ಶಾಲೆಗಳಲ್ಲಾಗಲಿ, ಸಾರಿಗೆ ಇಲಾಖೆ ಹಾಗೂ ಪೋಲಿಸರಿಂದಾಗಲಿ ಜಾಗೃತಿ ಮೂಡಿಸದಿರುವುದು ಅನಾಹುತಕ್ಕೆ ಪರೋಕ್ಷವಾಗಿ ಪ್ರೋತ್ಸಾಹಿಸಿದಂತಾಗಿದೆ.

ವಾಹನ ದಟ್ಟಣೆ ಅಧಿಕವಾಗಿರುವ ಬಸ್ ನಿಲ್ದಾಣ ಎದುರು ರಸ್ತೆ, ಬಜಾರ್ ರಸ್ತೆ, ಜೆ.ಎಲ್.ಬಿ ರಸ್ತೆ, ಎಸ್.ಜೆ.ರಸ್ತೆ, ಗೋಕುಲ ರಸ್ತೆ ಸೇರಿದಂತೆ ಇನ್ನೂ ಅನೇಕ ರಸ್ತೆಗಳ ಪುಟ್ಪಾತ್‍ಗಳು ವಾಹನಗಳ ನಿಲುಗಡೆ ಹಾಗೂ ರಸ್ತೆ ಬದಿ ವ್ಯಾಪಾರಿಗಳ ಕೇಂದ್ರ ಸ್ಥಾನವಾಗಿವೆ. ಪಾದಚಾರಿಗಳು ವಾಹನಗಳ ಜೊತೆ ರಸ್ತೆ ಮಧ್ಯದಲ್ಲೇ ಮಕ್ಕಳು ಮರಿಗಳೊಂದಿಗೆ ಸಂಚರಿಸುವ ದುಸ್ಥಿತಿ ನಿರ್ಮಾಣವಾಗಿದ್ದು, ಮದುವೆ ದಿನಗಳಲ್ಲಂತೂ ಬಿ.ಎಂ ರಸ್ತೆ, ಕೋಟೆ ಸರ್ಕಲ್, ಹಳೆ ರತ್ನಪುರಿ ರಸ್ತೆಗಳಲ್ಲಿ ಸಂಚರಿಸುವುದೇ ದೊಡ್ಡ ಸವಾಲಾಗಿದೆ.

ನಗರದ ಎಲ್ಲಾ ಮೂಲೆಗಳಲ್ಲೂ ಶಾಲಾ ಕಾಲೇಜುಗಳಿರುವುದರಿಂದ ಎಲ್ಲಾ ಪ್ರಮುಖ ಜನನಿಬೀಡ ರಸ್ತೆಗಳಲ್ಲೂ ಶಾಲಾ ಮಕ್ಕಳು ಸಂಚರಿಸುವುದರಿಂದ ರಸ್ತೆ ಡುಬ್ಬ ಗಳ ಅನಿವಾರ್ಯವಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾನೂನು ಸಬೂಬು ಹೇಳುತ್ತ ಬಂದ ಪರಿಣಾಮ ಎರಡ್ಮೂರು ಜೀವಗಳು ಈಗಾಗಲೇ ಬಲಿಯಾಗಿವೆ.

ಕಾನೂನು ನೆಪ್ಪವೊಡ್ಡಿ ರಸ್ತೆ ಡುಬ್ಬಗಳನ್ನು ತೆರವು ಮಾಡಿದ ಅಧಿಕಾರಿಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಅನಿವಾರ್ಯವಿರುವ ದಾವಣಿ ಬೀದಿಯ ರಾಮ ಮಂದಿರ, ಮಾರುತಿ ಪೆಟ್ರೋಲ್ ಬಂಕ್ ಬಳಿ, ಅರಸು ಪುತ್ಥಳಿ ಬಳಿ, ಬಸ್ ಡಿಪೋ ಬಳಿ ಸೇರಿದಂತೆ ಅವಶ್ಯ ಪ್ರದೇಶಗಳಲ್ಲಿ ವೈಜಾನಿಕ ರೀತಿಯಲ್ಲಿ ರಸ್ತೆ ಡುಬ್ಬಗಳ ನಿರ್ಮಾಣ ಮಾಡಿ ಪಾದಾಚಾರಿಗಳಿಗೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬಸ್ ನಿಲ್ದಾಣದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಫ್ಲಾಟ್ ಫಾರಂಗಳನ್ನು ನಿರ್ಮಿಸಿದರೂ ಅಲ್ಲಿ ನಿಲ್ಲದ ಮೈಸೂರು ಕಡೆ ತೆರಳುವ ಬಸ್‍ಗಳು ಬಸ್ ನಿಲ್ದಾಣದ ಮುಂಭಾಗದ ಪ್ರಮುಖ ರಸ್ತೆಯಲ್ಲಿ ಸಾಲುಗಟ್ಟಿ ನಿಲ್ಲುವುದರಿಂದ ರಸ್ತೆ ಸಂಚಾರಕ್ಕೆ ಬಹಳ ತೊಂದರೆಯಾಗಿದ್ದರೂ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಾಗಲಿ, ಪೊಲೀಸರಾಗಲಿ ಯಾವುದೇ ಕ್ರಮಕೈಗೊಂಡಿಲ್ಲ.

ನೂತನ ಶಾಸಕರಾಗಿ ಆಯ್ಕೆಯಾದ ಸಂದರ್ಭ ಶಾಸಕ ಎಚ್.ವಿಶ್ವನಾಥ್ ಅವರು ಹುಣಸೂರಿನ ಅಡಾದಿಡ್ಡ ಬೆಳವಣಿಗೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ರಸ್ತೆ ಸಂಚಾರ ತಾಲೂಕಿನ ಪ್ರಮುಖ ಸಮಸ್ಯೆಯಾಗಿರುವುದರಿಂದ, ಇದರ ಸುಗಮ ಸಂಚಾರಕ್ಕಾಗಿ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಾರಾ  ಎಂಬ ನಿರೀಕ್ಷೆ ಜನತೆಯದ್ದಾಗಿದೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: