ಕರ್ನಾಟಕಪ್ರಮುಖ ಸುದ್ದಿ

ಅಬಕಾರಿ ಸಚಿವ ಎಚ್.ವೈ. ಮೇಟಿ ರಾಜೀನಾಮೆ

ರಾಜ್ಯದ ಅಬಕಾರಿ ಸಚಿವ ಎಚ್.ವೈ. ಮೇಟಿ ಅವರು ಭಾಗಿಯಾಗಿದ್ದಾರೆನ್ನಲಾದ ಲೈಂಗಿಕ ಹಗರಣದ ಸಿಡಿಯನ್ನು ಆರ್‍ಟಿಐ ಕಾರ್ಯಕರ್ತ ರಾಜಶೇಖರ್ ಮಲಾಲಿ ಅವರು ನವದೆಹಲಿಯಲ್ಲಿ ಬಿಡುಗಡೆಗೊಳಿಸಿದ ಬೆನ್ನಲ್ಲೇ ಮೇಟಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮೇಟಿ ರಾಜೀನಾಮೆಯನ್ನು ಸಿಎಂ ಸಿದ್ದರಾಮಯ್ಯ ಅಂಗೀಕರಿಸಿದ್ದಾರೆ.

ಸರಕಾರಿ ಕೆಲಸದಲ್ಲಿರುವ ಮಹಿಳೆಯೊಬ್ಬರಿಗೆ ಸ್ಥಳನಿಯುಕ್ತಿ (ಪೋಸ್ಟಿಂಗ್) ಕೊಡಿಸುವ ನೆಪದಲ್ಲಿ ಹಿರಿಯ ಸಚಿವ ಮೇಟಿ ಅವರು ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೆಲ ದಿನಗಳ ಹಿಂದೆ ಕೇಳಿಬಂದಿತ್ತು. ಈ ಕುರಿತಂತೆ ಆರ್‍ಟಿಐ ಕಾರ್ಯಕರ್ತ ರಾಜಶೇಖರ್ ಬಳಿ ವಿಡಿಯೋ ಸಿ.ಡಿ ಇದೆ ಎನ್ನಲಾಗಿತ್ತು. ಈ ನಡುವೆ, ಸಿ.ಡಿ ಬಹಿರಂಗಗೊಳಿಸದಂತೆ ಆರ್‍ಟಿಐ ಕಾರ್ಯಕರ್ತನಿಗೆ ಸಚಿವರ ಬೆಂಬಲಿಗರು ಜೀವ ಬೆದರಿಕೆ ಹಾಕಿದ ಆಡಿಯೋ ಬಹಿರಂಗಗೊಂಡು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ರಾಜಶೇಖರ್ ಮುಲಾಲಿ: ಅಣ್ಣಾ ಫೌಂಡೇಶನ್ ಅಧ್ಯಕ್ಷರಾಗಿರುವ ರಾಜಶೇಖರ್ ಮುಲಾಲಿ, ಮೂಲತ: ದಾವಣಗೆರೆ ಜಿಲ್ಲೆಯ ನೀಲಗುಂದಾ ಗ್ರಾಮದವರು. ವಿದ್ಯಾರ್ಥಿ ದೆಸೆಯಿಂದಲೇ ಹೋರಾಟ ಮನೋಭಾವ ಹೊಂದಿದ್ದ ರಾಜಶೇಖರ್, ಮದ್ಯಪಾನ ಮಾಡಿ ಬಂದ ಶಿಕ್ಷಕನನ್ನು ಸ್ನೇಹಿತರೊಂದಿಗೆ ತೆರಳಿ ಡಿಡಿಪಿಐ ಮುಂದೆ ನಿಲ್ಲಿಸಿ ಅಮಾನತು ಮಾಡಿಸಿದ್ದರು.

10ನೇ ತರಗತಿಯಲ್ಲಿದ್ದಾಗ ಟಿ.ಸಿ ಕೊಡಲು ಸತಾಯಿಸಿದ್ದಕ್ಕೆ ನೇರವಾಗಿ ಡಿ.ಸಿ.ಗೆ ದೂರು ನೀಡಿದ್ದರು. ಎರಡು ಬಾರಿ ಸರ್ಕಾರಿ ನೌಕರಿಗೆ ಆಯ್ಕೆಯಾಗಿದ್ದ ಇವರು ಲಂಚ ಬೇಡಿಕೆ ಇಟ್ಟಾಗ ಆದೇಶ ಪತ್ರ ಹರಿದು ಹಾಕಿದ್ದರು. ಉದ್ಯಮ ನೋಂದಣಿಗೆ ಲಕ್ಷಗಟ್ಟಲೆ ಲಂಚಕ್ಕೆ ಬೇಡಿಕೆ ಇಟ್ಟ ಅಧಿಕಾರಿಯೊಬ್ಬರನ್ನು ಲೋಕಾಯುಕ್ತ ಬಲೆಗೆ ಬೀಳಿಸಿದ್ದರು. ಲಂಚಕ್ಕೆ ಬೇಡಿಕೆಯಿಟ್ಟ ಚಿತ್ರದುರ್ಗದ ಪ್ರಭಾವಿ ಸಚಿವರ ಆಪ್ತರಾಗಿರುವ ಸಹಾಯಕ ಆಯುಕ್ತರೊಬ್ಬರ ವರ್ಗಾವಣೆಗೆ ರಾಜಶೇಖರ್ ಕಾರಣವಾಗಿದ್ದರು.

Leave a Reply

comments

Related Articles

error: