ಕರ್ನಾಟಕಪ್ರಮುಖ ಸುದ್ದಿ

ಕಾವೇರಿ ವಿವಾದ ಸಬಂಧ ಸರ್ವಪಕ್ಷ ಸಭೆ: ಒಗ್ಗಟಿನಿಂದ ಹೋರಾಡಲು ನಿರ್ಧಾರ

ಬೆಂಗಳೂರು (ಜೂನ್ 30): ಲೋಕಸಭೆಯಲ್ಲಿ ಚರ್ಚಿಸದೆ ಕಾವೇರಿ ನೀರು ನಿಯಂತ್ರಣ ಸಮಿತಿ ರಚಿಸಿದ ಕೇಂದ್ರ ಸರಕಾರದ ಕ್ರಮ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸರ್ವಪಕ್ಷಗಳೂ ಬೆಂಬಲ ಸೂಚಿಸಿವೆ.

ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಸಮಿತಿ ರಚನೆ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಕೋರ್ಟ್‌ನಲ್ಲಿ ದಾವೆ ಹೂಡಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದ.

ಸಭೆಯಲ್ಲಿ ಮಾತನಾಡಿದ ಸಿಎಂ, “ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಗೆ ರಾಜ್ಯದ ಪ್ರತಿನಿಧಿಗಳನ್ನು ಕಳುಹಿಸುತ್ತೇವೆ. ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಕೇಂದ್ರದ ಮುಂದೆ ಪ್ರತಿಭಟಿಸುತ್ತೇವೆ. ಪ್ರಾಧಿಕಾರ ರಚನೆಯಿಂದ ರಾಜ್ಯದ ನೀರಿನ ಹಕ್ಕಿಗೆ ಧಕ್ಕೆಯಾಗಲಿದೆ. ಅಂತಾರಾಜ್ಯ ಜಲ ವಿವಾದ ಕಾಯ್ದೆಯಡಿಯಲ್ಲಿ ರಚಿತವಾದ ನ್ಯಾಯಾಧೀಕರಣವು ತನಗೆ ಹಂಚಿಕೆ ಮಾಡಿದ ನೀರನ್ನು ಬಳಕೆ ಮಾಡಲು ರಾಜ್ಯಕ್ಕೆ ಸ್ವಾತಂತ್ರ್ಯ ಇರಬೇಕು. ಇದೀಗ ಪ್ರಾಧಿಕಾರಕ್ಕೆ ಪೂರ್ಣ ಅಧಿಕಾರ ನೀಡಿರುವುದು ರಾಜ್ಯಕ್ಕೆ ನೀಡಿರುವ ಸಂವಿಧಾನಾತ್ಮಕ ಹಕ್ಕಿನ ಉಲ್ಲಂಘನೆ. ಹೀಗಾಗಿ, ಈ ವಿಷಯ ಸಂಬಂಧ ಸಂಸದರ ಮೂಲಕ ಕೇಂದ್ರ ಮತ್ತು ಪ್ರಧಾನಿ ಮೇಲೆ ಒತ್ತಡ ಹೇರಲು ನಿರ್ಧರಿಸಲಾಗಿದೆ” ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಸರ್ವಪಕ್ಷಗಳ ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ರಾಜ್ಯದ ರೈತರ ಹಿತದೃಷ್ಟಿಯಿಂದ ಕಾವೇರಿ ನದಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಒಳಗೆ ಮತ್ತು ಹೊರಗೆ ಪಕ್ಷಾತೀತ ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಜುಲೈ 2ರಂದು ನಡೆಯಲಿರುವ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಗೆ ಕರ್ನಾಟಕ ರಾಜ್ಯದ ಪ್ರತಿನಿಧಿಗಳಾಗಿ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಕಾವೇರಿ ನೀರಾವರಿ ನಿಗಮದ ಆಡಳಿತ ವ್ಯವಸ್ಥಾಪಕರನ್ನು ಕಳುಹಿಸಲಾಗುವುದು ಎಂದ ಅವರು, ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಕೇಂದ್ರದ ಮುಂದೆ ಪ್ರತಿಭಟಿಸಲು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ರಾಜ್ಯದ ಮುಂದಿನ ನಡೆಯ ಬಗ್ಗೆ ರಾಜ್ಯದ ಅಡ್ವೊಕೇಟ್ ಜನರಲ್ ಸಲಹೆ ನೀಡಲಿದ್ದು, ಎಲ್ಲ ಸಂಸದರು ಲೋಕಸಭೆ ಒಳ- ಹೊರಗೆ ಹೋರಾಟ ಮಾಡಲು ನಿರ್ಧರಿಸಿದ್ದು, ಅವರೆಲ್ಲರಿಗೂ ರಾಜ್ಯ ಸರಕಾರ ಪರವಾಗಿ ಅಭಿನಂದನೆ ಸಲ್ಲಿಸುವೆ ಎಂದ ಅವರು, ಕೇಂದ್ರ ಸರಕಾರ ತರಾತುರಿಯಲ್ಲಿ ಪ್ರಾಧಿಕಾರ ರಚಿಸಿದೆ ಎಂದು ಆಕ್ಷೇಪಿಸಿದರು.

ಲೋಕಸಭೆ ಅಧಿವೇಶನದಲ್ಲಿ ಕರ್ನಾಟಕ ವಾದ ಮಂಡಿಸಬೇಕು. ಸಂಸತ್ತಿನಲ್ಲಿ ನಮ್ಮ ಕೂಗು ಮುಟ್ಟಬೇಕಿದೆ. ಆ ನಿಟ್ಟಿನಲ್ಲಿ ರಾಜ್ಯದ ಎಲ್ಲ ಸಂಸದರು ಮುಂದಾಗಿದ್ದು, ಅವರಿಗೆ ಅಗತ್ಯ ದಾಖಲೆಗಳನ್ನು ರಾಜ್ಯ ಸರಕಾರ ಒದಗಿಸಲಿದೆ. ಅಲ್ಲದೆ, ಸುಪ್ರೀಂ ಕೋರ್ಟ್‌ನಲ್ಲಿ ದಾವೆಯನ್ನು ಹೂಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ಪುನರುಚ್ಚರಿಸಿದರು.

ಮಾಜಿ ಮುಖ್ಯಮಂತ್ರಿ ಹಾಗೂ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯನವರು ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಬೆಳವಣಿಗೆಗಳ ಕುರಿತಂತೆ ಸಿಎಂ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಿಂದ ದೂರ ಉಳಿದಿದ್ದರು.

ಕೇಂದ್ರ ಸಚಿವ ಸದಾನಂದಗೌಡ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ಸಂಸದರಾದ ಕೆ.ಎಚ್.ಮುನಿಯಪ್ಪ, ಡಿ.ಕೆ.ಸುರೇಶ್, ಪ್ರತಾಪ್ ಸಿಂಹ, ವೀರಪ್ಪ ಮೊಯ್ಲಿ, ಮುದ್ದಹನುಮೇಗೌಡ, ಚಂದ್ರಪ್ಪ, ಪ್ರಕಾಶ್ ಹುಕ್ಕೇರಿ, ಸಚಿವರಾದ ಸಿ.ಎಸ್.ಪುಟ್ಟರಾಜು, ಎನ್. ಮಹೇಶ್, ಡಿ.ಸಿ. ತಮ್ಮಣ್ಣ, ಎಚ್.ಡಿ.ರೇವಣ್ಣ, ರಾಜ್ಯಸಭಾ ಸದಸ್ಯರಾದ ಕೆ.ಸಿ.ರಾಮಮೂರ್ತಿ, ಡಾ. ಸೈಯದ್ ನಸೀರ್ ಹುಸೇನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ರಾಜ್ಯದ ಹಿತಕ್ಕೆ ಬದ್ಧ: ಮಾಜಿ ಸಿ.ಎಂ ಯಡಿಯೂರಪ್ಪ

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ವಿಧಾನಸಭೆ ವಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರೂ ಆದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, “ರಾಜ್ಯದ ನೆಲ, ಜಲ, ಭಾಷೆ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಮಾಡುವುದಿಲ್ಲ. ಕಾವೇರಿ ವಿಚಾರದಲ್ಲಿ ಎಲ್ಲರೂ ಚರ್ಚಿಸಿ ಒಮ್ಮತದ ತೀರ್ಮಾನಕ್ಕೆ ಬಂದಿದ್ದೇವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ಸಂಬಂಧ ಸುಪ್ರೀಂ ಕೋರ್ಟಿನ ಸಂವಿಧಾನ ಪೀಠದಲ್ಲಿ ಮೇಲ್ಮನವಿ ಸಲ್ಲಿಕೆ, ಲೋಕಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಿಜೆಪಿ ಸಿದ್ಧವಿದೆ. ರಾಜ್ಯದ ರೈತರ ಹಿತರಕ್ಷಣೆಗಾಗಿ ರಾಜ್ಯ ಸರಕಾರದ ತೀರ್ಮಾನಕ್ಕೆ ಬದ್ಧ” ಎಂದು ಘೋಷಣೆ ಮಾಡಿದರು. (ಎನ್.ಬಿ)

Leave a Reply

comments

Related Articles

error: