
ಕ್ರೀಡೆಪ್ರಮುಖ ಸುದ್ದಿ
ದ್ರಾವಿಡ್, ಪಾಂಟಿಂಗ್, ಕ್ಲೇರ್ ಟೇಲರ್ `ಐಸಿಸಿ ಹಾಲ್ ಆಫ್ ಫೇಮ್’ ಸದಸ್ಯರು
ಡಬ್ಲಿನ್,(ಐರ್ಲೆಂಡ್),ಜು.2-ಭಾರತದ ಗೋಡೆ ಎಂದೇ ಖ್ಯಾತಿಗಳಿಸಿರುವ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ವಿಶ್ವದ ಪ್ರತಿಷ್ಠಿತ `ಐಸಿಸಿ ಹಾಲ್ ಆಫ್ ಫೇಮ್’ ಸದಸ್ಯರಾಗಿ ನೇಮಕವಾಗಿದ್ದಾರೆ.
ಇವರೊಂದಿಗೆ ಆಸ್ಟ್ರೇಲಿಯಾ ಮಾಜಿ ಕ್ಯಾಪ್ಟನ್ ರಿಕ್ಕಿ ಪಾಂಟಿಂಗ್ ಹಾಗೂ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಿವೃತ್ತ ವಿಕೆಟ್ ಕೀಪರ್ ಕ್ಲೇರ್ ಟೇಲರ್ ಅವರು ಕೂಡ ಐಸಿಸಿ ಹಾಲ್ ಆಫ್ ಫೇಮ್ ಗೆ ಸದಸ್ಯರಾಗಿದ್ದಾರೆ.
ಭಾನುವಾರ ಡಬ್ಲಿನ್ ನಲ್ಲಿ ನಡೆದ ಸಮಾರಂಭದಲ್ಲಿ ಈ ನೇಮಕ ಮಾಡಲಾಗಿದ್ದು, ಈ ಗೌರವಕ್ಕೆ ಪಾತ್ರರಾದ ಐದನೇ ಭಾರತೀಯ ಆಟಗಾರರ ಎಂಬ ಹೆಗ್ಗಳಿಕೆಗೆ ರಾಹುಲ್ ದ್ರಾವಿಡ್ ಪಾತ್ರರಾಗಿದ್ದಾರೆ.
ಭಾರತದ ಅಂಡರ್ 19 ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರಿಗೆ ಭಾನುವಾರ ಈ ಗೌರವ ಸಂದಿದೆ. ಸುನೀಲ್ ಗಾವಸ್ಕರ್, ಬಿಷನ್ ಸಿಂಗ್ ಬೇಡಿ, ಕಪಿಲ್ ದೇವ್ ಮತ್ತು ಅನಿಲ್ ಕುಂಬ್ಳೆ ಈಗಾಗಲೇ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ರಿಕ್ಕಿ ಪಾಂಟಿಂಗ್ ಆಸ್ಟ್ರೇಲಿಯಾದ 25ನೇ ಹಾಗೂ ಟೇಲರ್ಇಂಗ್ಲೆಂಡ್ನಿಂದ ನೇಮಕವಾದ ಮೂರನೇ ಆಟಗಾರ್ತಿ ಹಾಗೂ ಐಸಿಸಿ ಕ್ರಿಕೆಟ್ ಹಾಲ್ ಆಫ್ ಫೇಮ್ಗೆ ಆಯ್ಕೆಯಾದ ಏಳನೇ ಮಹಿಳಾ ಆಟಗಾರರಾಗಿದ್ದಾರೆ.
ಐಸಿಸಿ ಕ್ರಿಕೆಟ್ ಹಾಲ್ ಆಫ್ ಫೇಮ್ನ ಮಾಜಿ ಸದಸ್ಯರು ಈ ಮೂವರನ್ನು ಆಯ್ಕೆ ಮಾಡಿದ್ದಾರೆ. ಕ್ರಿಕೆಟ್ನಲ್ಲಿ ಶ್ರೇಷ್ಠರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಹಾಲ್ ಆಫ್ ಫೇಮ್ ಮೂಲಕ ಮಾಡಲಾಗುವುದು. ಇಡೀ ಜಗತ್ತು ಮೆಚ್ಚಿದ ಆಟಗಾರರನ್ನು ಇಲ್ಲಿ ಆಯ್ಕೆ ಮಾಡಲಾಗುತ್ತದೆ. ರಾಹುಲ್, ರಿಕ್ಕಿ, ಹಾಗೂ ಕ್ಲೇರ್ ಅವರು ಕ್ರಿಕೆಟ್ನಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಾಗಿದ್ದು, ಅವರನ್ನು ಹಾಲ್ ಆಫ್ ಫೇಮ್ಗೆ ಸ್ವಾಗತಿಸುತ್ತೇನೆ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಡೆವಿಡ್ ರಿಚರ್ಡ್ಸನ್ ಹೇಳಿದ್ದಾರೆ. ಈ ವಿಚಾರವನ್ನು`ದಿ ವಾಲ್ ಈಸ್ ಇನ್ ದ ಹಾಲ್! ಹಿಯರ್ ಈಸ್ ಐಸಿಸಿ ಹಾಲ್ ಆಫ್ ಫೇಮ್ ಕ್ಯಾಪ್’ ಎಂದು ಐಸಿಸಿ ಟ್ವೀಟ್ ಮಾಡಿದೆ.
`ಈ ಗೌರವಕ್ಕಾಗಿ ನಾನು ಐಸಿಸಿಗೆ ಕೃತಜ್ಞತೆ ಹೇಳುತ್ತಿದ್ದೇನೆ. ನಾನು ಕ್ರಿಕೆಟ್ ಪಯಣದಲ್ಲಿ ಆದರ್ಶ ಎಂದು ಪರಿಗಣಿಸಿದ್ದ ವ್ಯಕ್ತಿಗಳ ಸಾಲಿಗೆ ಸೇರುವುದು ಹೆಮ್ಮೆಯ ಸಂಗತಿ. ನನ್ನ ಈ ಯಶಸ್ಸಿನ ಹಾದಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಹೇಳುತ್ತೇನೆ’ ಎಂದು ಐಸಿಸಿ ಗೌರವ ಸ್ವೀಕರಿಸಿ ಪ್ರತಿಕ್ರಿಯಿಸಿದ್ದಾರೆ.
ಭಾರತ ಎ ತಂಡಕ್ಕೆ ತರಬೇತಿ ನೀಡುವ ಪೂರ್ವನಿರ್ಧರಿತ ಕಾರ್ಯದ ಹಿನ್ನಲೆಯಲ್ಲಿ ವೈಯಕ್ತಿಕವಾಗಿ ಈ ಗೌರವ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಆದರೆ ಇದು ನನ್ನ ಹೃದಯಕ್ಕೆ ಅತ್ಯಂತ ಅಪ್ಯಾಯಮಾನವಾದ ಗೌರವ ಎಂದು ಬಣ್ಣಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಅತಿಹೆಚ್ಚು ರನ್ ಗಳಿಸಿದವರ ಸಾಲಿನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ದ್ರಾವಿಡ್ 13,288 ರನ್ ಗಳಿಸಿದ್ದಾರೆ. ಭಾರತದ ಗೋಡೆ ಎಂಬ ಖ್ಯಾತಿಯ ಇವರು ಏಕದಿನ ಕ್ರಿಕೆಟ್ನಲ್ಲಿ 12 ಶತಕ ಸಹಿತ 10,899 ರನ್ ಗಳಿಸಿದ್ದರು. (ಎಂ.ಎನ್)