ಪ್ರಮುಖ ಸುದ್ದಿಮೈಸೂರು

ಹರಿದು ಬಂತು ಸಮಸ್ಯೆಗಳ ಮಹಾಪೂರ; ತುರ್ತು ಅಗತ್ಯಗಳಿಗೆ ಮಾತ್ರ ಮಹತ್ವ ನೀಡುವಂತೆ ಚಿನ್ನಸ್ವಾಮಿ ಸಲಹೆ

ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿಲ್ಲ. ರಸ್ತೆಗಳು ಓಡಾಡದಂತಹ ಸ್ಥಿತಿಯಲ್ಲಿವೆ. ಒಳಚರಂಡಿ ವ್ಯವಸ್ಥೆ ಇಲ್ಲ. ಖಾಯಂ ಇಂಜಿನಿಯರ್ ಇಲ್ಲದೆ ಕಾಮಗಾರಿಗಳಿಗೆ ಅನುಮೋದನೆ ಸಿಗದೆ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ. ಪೌರಕಾರ್ಮಿರು, ಸಿಬ್ಬಂದಿಗಳ ಕೊರತೆಯಿದೆ. ಅನುದಾನ ಸರಿಯಾಗಿ ಬಿಡುಗಡೆಯಾಗುತ್ತಿಲ್ಲ ಎಂಬ ಸಮಸ್ಯೆಗಳ ಮಹಾಪೂರ ಹರಿದು ಬಂದಿದ್ದು ಮೈಸೂರು ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ.

ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ 4ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ.ಜಿ. ಚಿನ್ನಸ್ವಾಮಿ ಅಧ್ಯತೆಯಲ್ಲಿ ನಡೆದ ಮೈಸೂರು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಕುರಿತ ಸಮಾಲೋಚನಾ ಸಭೆಯಲ್ಲಿ ನಗರಸಭೆ, ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರುಗಳು ಸಮಸ್ಯೆಗಳನ್ನು ತೆರೆದಿಟ್ಟರು. ಕುಡಿಯಲು ಸರಿಯಾಗಿ ನೀರು ಬಾರದ ಕಾರಣಕ್ಕೆ ಸಾರ್ವಜನಿಕರು ತುಂಬಾ ಸಮಸ್ಯೆ ಎದುರಿಸುತ್ತಿದ್ದಾರೆ. ಕಾಯಂ ಇಂಜಿನಿಯರ್ ಇಲ್ಲದ ಕಾರಣಕ್ಕೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿಲ್ಲ. ಅಲ್ಲದೆ ಇದರಿಂದ ಬಿಡುಗಡೆಯಾಗಬೇಕಾದ ಅನುದಾನವೂ ಬಿಡುಗಡೆಯಾಗುತ್ತಿಲ್ಲ. ಸ್ವಚ್ಛತೆಯನ್ನು ಕಾಪಾಡಲು ಪೌರ ಕಾರ್ಮಿಕರಿಲ್ಲದೆ ಸಮಸ್ಯೆ ತಲೆದೋರಿದೆ. ನಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ. ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಹೆಚ್.ಡಿ.ಕೋಟೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ತಮ್ಮ ಅಳಲು ತೋಡಿಕೊಂಡರು.

ಇದಕ್ಕೆ ಉತ್ತರಿಸಿದ ಶಾಸಕ ಚಿಕ್ಕಮಾದು, ಡಾ.ನಂಜುಂಡಪ್ಪ ಅವರ ವರದಿಯಂತೆ ಹೆಚ್.ಡಿ.ಕೋಟೆ ತಾಲೂಕು ಅತ್ಯಂತ ಹಿಂದುಳಿದ ತಾಲೂಕಾಗಿದ್ದು ಹಲವಾರು ಸಮಸ್ಯೆಗಳು ಕಾಡುತ್ತಿವೆ. ಟೌನ್‍ನಲ್ಲಿ 23 ಸಾವಿರ ಜನಸಂಖ್ಯೆಯಿದ್ದು, ಪ್ರತಿನಿತ್ಯ ಸಾವಿರಾರು ಮಂದಿ ತಮ್ಮ ಬೇರೆ ಬೇರೆ ಕೆಲಸಗಳಿಗೆ ಆಗಮಿಸುತ್ತಾರೆ. ಮೂಲಸೌಕರ್ಯಗಳ ಕೊರತೆಯಿಂದ ಬಂದಂತಹ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಕೂಡಲೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಬೇಕು. ಖಾಲಿಯಿರುವ ಶೇ.60ರಷ್ಟು ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಹೇಳಿದರು.

ಆಯೋಗದ ಅಧ್ಯಕ್ಷ ಸಿ.ಜಿ. ಚಿನ್ನಸ್ವಾಮಿ ಮಾತನಾಡಿ, ನಗರಸಭೆ, ಪುರಸಭೆ, ಗ್ರಾಮಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಆದ್ಯತೆಗಳನ್ನು ಪೂರೈಸಿ ಅವರ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ ಪ್ರಶ್ನಾವಳಿಗಳನ್ನು ಸಿದ್ಧಪಡಿಸಿ ಕಳುಹಿಸಿಕೊಡಲಾಗಿದ್ದು 15-20 ದಿನಗಳಲ್ಲಿ ಆಡಳಿತದ ಅನುಮೋದನೆ ಪಡೆದು ನಮಗೆ ಕಳುಹಿಸಬೇಕು. ಬೇಸಿಕ್ ಗ್ರ್ಯಾಂಟ್, ಪರ್ಫಾಮೆನ್ಸ್ ಗ್ರ್ಯಾಂಟ್ ಆಧಾರದ ಮೇಲೆ ಯಾವ ಸ್ಥಳೀಯ ಸಂಸ್ಥೆಗಳು ಕ್ರಿಯಾಶೀಲವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆಯೋ ಅಂತಹ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುವುದು. ಸ್ಥಳೀಯ ಸಂಸ್ಥೆಗಳ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಇರುವ ಬ್ಯಾಂಕ್ ಖಾತೆಗಳು ನಿಷ್ಕ್ರಿಯವಾಗಿದ್ದಲ್ಲಿ ಅಂತಹ ಖಾತೆಗಳನ್ನು ಮುಚ್ಚಿಸಿ. ಯಾವ ಖಾತೆ ಅವಶ್ಯಕವಿದೆಯೋ ಅಂತಹದ್ದನ್ನು ಮಾತ್ರ ಉಳಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಆಯೋಗದ ಸದಸ್ಯರಾದ ಹೆಚ್.ಡಿ. ಅಮರ್‍ನಾಥ್, ಶ್ರೀಧರ್, ಜಿಲ್ಲಾಧಿಕಾರಿ ಡಿ.ರಂದೀಪ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: