ಮೈಸೂರು

ಅಧಿಕಾರಕ್ಕಾಗಿ ಪಕ್ಷ ಸೇರುತ್ತಿದ್ದಾರೆ : ಹೆಚ್. ವಿಶ್ವನಾಥ ಬೇಸರ

ಕಾಂಗ್ರೆಸ್ ಪಕ್ಷದ ಸಿದ್ಧಾಂತ ಗೊತ್ತಿಲ್ಲದವರೂ ಪಕ್ಷದಲ್ಲಿ ಇರುವುದರಿಂದ ಪಕ್ಷದ ಸಿದ್ಧಾಂತ ಮಣ್ಣು ಪಾಲಾಗುತ್ತಿದೆ ಎಂದು ಮಾಜಿ ಸಂಸದ ಹೆಚ್.ವಿಶ್ವನಾಥ ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ಪುರಭವನದಲ್ಲಿ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಬುಧವಾರ ಆಯೋಜಿಸಲಾದ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸೇವಾದಳದ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಹೆಚ್. ವಿಶ್ವನಾಥ ಪಾಲ್ಗೊಂಡು ಮಾತನಾಡಿದರು.

ಕಾಂಗ್ರೆಸ್ ಪಕ್ಷ ಹುಟ್ಟಿದ್ದು ಸೇವೆಗಾಗಿಯೇ ಹೊರತು ಅಧಿಕಾರಕ್ಕಾಗಿ ಅಲ್ಲ. ವಿಪರ್ಯಾಸವೆಂದರೆ ಇಂದು ಅಧಿಕಾರಕ್ಕಾಗಿಯೇ ಪಕ್ಷ ಸೇರಲಾಗುತ್ತಿದೆ. ಸೇವಾದಳ ಕಾಂಗ್ರೆಸ್ ನ ಮೂಲ ಮಂತ್ರವಾಗಿದ್ದು ಸಮಾಜದ ಎಲ್ಲಾ ವರ್ಗದ ಶ್ರೇಯೋಭಿವೃದ್ಧಿಯನ್ನು ಬಯಸುತ್ತದೆ ಎಂದರು.

ಸಿದ್ದರಾಮಯ್ಯನವರು ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬರಲಿದೆ ಎನ್ನುತ್ತಾರೆ. ಹಾಗೇ ಕುಮಾರಸ್ವಾಮಿ ಕುಮಾರಸ್ವಾಮಿಯವರ ಸರ್ಕಾರ ಅಧಿಕಾರಕ್ಕೆ ಬರಲಿದೆ ಎನ್ನುತ್ತಾರೆ ಎಲ್ಲರಿಗೂ ವ್ಯಕ್ತಿಗಳು ಮುಖ್ಯ ಯಾರೂ ಪಕ್ಷದ ಹೆಸರೇಳುತ್ತಿಲ್ಲ ಎಂದು ಆಕ್ಷೇಪಿಸಿದರು. ನಾವು ಪಕ್ಷಕ್ಕಿಂತ ದೊಡ್ಡವರಲ್ಲ. ಹಾಗಂತ ಭಾವಿಸಿದರೆ ಅದು ಯಾರಿಗೂ ಒಳ್ಳೆಯದಲ್ಲ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಸಂಘಟಕಿಯಾಗಿ ಎಂ.ಗೀತಾ ಅಧಿಕಾರ ಸ್ವೀಕರಿಸಿದರು.  ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಟಿ.ಎಸ್.ರವಿಶಂಕರ್, ಉಪಾಧ್ಯಕ್ಷ ಆರ್.ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: