ಕರ್ನಾಟಕ

ಗಿಡಬೆಳೆಸುವ ಹವ್ಯಾಸವನ್ನು ರೂಢಿಸಿಕೊಂಡಾಗ ಮಾತ್ರ ಪರಿಸರವನ್ನು ಸಂರಕ್ಷಿಸಲು ಸಾಧ್ಯ : ಡಿವೈಎಸ್‍ಪಿ ಮಲ್ಲಿಕ್

ರಾಜ್ಯ(ಮಂಡ್ಯ)ಜು.3:- ಪತ್ರಿಕಾ ದಿನಾಚರಣೆ ಅಂಗವಾಗಿ ಮಳವಳ್ಳಿ ಪಟ್ಟಣದ ಗಿಡ ನೆಡುವ ಕಾರ್ಯಕ್ರಮಕ್ಕೆ ಡಿವೈಎಸ್‍ಪಿ ಮಲ್ಲಿಕ್ ಚಾಲನೆ ನೀಡಿದರು.

ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರ ಸಂಘ ಹಾಗೂ ಪೊಲೀಸ್ ಇಲಾಖೆ, ಮಳವಳ್ಳಿ ತಾಲೂಕು ಯುವಬಳಗ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮಳವಳ್ಳಿ ಪಟ್ಟಣದ ರುದ್ರಭೂಮಿಯಲ್ಲಿ ನಡೆದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಸಿರಿಲ್ಲದೇ ಉಸಿರಿಲ್ಲ ಎಂಬುವುದನ್ನು ಪ್ರತಿಯೊಬ್ಬರೂ ಅರಿತು ಗಿಡಬೆಳೆಸುವ ಹವ್ಯಾಸವನ್ನು ರೂಢಿಸಿಕೊಂಡಾಗ ಮಾತ್ರ ಪರಿಸರವನ್ನು ಸಂರಕ್ಷಿಸಲು ಸಾಧ್ಯವಾಗುತ್ತದೆ. ರುದ್ರಭೂಮಿಯಲ್ಲಿ ಸಸಿಗಳನ್ನು ನೆಡುವುದರ ಮೂಲಕ ಪತ್ರಿಕಾ ದಿನಾಚರಣೆ ಆಚರಿಸುತ್ತಿರುವುದು ವಿಶೇಷತೆಯನ್ನು ಪಡೆದುಕೊಂಡಿದೆ ಎಂದರು.

ರುದ್ರಭೂಮಿ ಎಂದಾಕ್ಷಣ ಸೂತಕದ ಸ್ಥಳ ಎಂದು ಎಲ್ಲರೂ ಅಂದುಕೊಂಡಿರುವ ಪ್ರಸ್ತುತ ಸಂದರ್ಭದಲ್ಲಿ ಮೂಢನಂಬಿಕೆಗಳನ್ನು ಹೋಗಲಾಡಿಸಲು ರುದ್ರಭೂಮಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಮರಗಳ ಹನನದಿಂದ ಪರಿಸರ ಅಸಮತೋಲನದಿಂದಾಗಿ ಸರಿಯಾಗಿ ಮಳೆಯಾಗದೇ ಕುಡಿಯುವ ನೀರಿಗೂ ತತ್ವಾರ ಉಂಟಾಗುತ್ತಿದೆ. ಪ್ರತಿಯೊಂದು ಕಾರ್ಯಕ್ರಮದ ಹೆಸರಿನಲ್ಲಿ ಸಸಿಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕೆಂದು ಕರೆ ನೀಡಿದರು.

ಸರ್ಕಲ್ ಇನ್ಸಪೆಕ್ಟರ್ ಶ್ರೀಕಾಂತ್ , ಇನ್ಸಪೆಕ್ಟರ್ ಗಂಗಾಧರ್, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ನಾಗೇಶ್, ಮಾಜಿ ಅಧ್ಯಕ್ಷರಾದ ಪುಟ್ಟಸ್ವಾಮಿ ಆರಾಧ್ಯ, ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಭರತ್‍ರಾಜ್, ಕೆ.ಸಿ ನಾಗೇಗೌಡ, ವಿದ್ಯಾ ಪ್ಯಾರಾಮೆಡಿಕಲ್ ಪ್ರಾಂಶುಪಾಲ ಚಂದ್ರಮೋಹನ್, ಪೊಲೀಸ್‍ಪ್ರಭು, ತಿಮ್ಮೇಗೌಡ, ಸಿದ್ದಾರ್ಥ್, ವಿಶ್ವೇಶ್ವರಯ್ಯ ಸಂಘದ ಅಧ್ಯಕ್ಷ ಚಿಕ್ಕಮರೀಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: