ಕರ್ನಾಟಕ

ಹಾಸನದಲ್ಲಿ ಜಿಲ್ಲಾಧಿಕಾರಿ ಜನ ಸಂಪರ್ಕ ಸಭೆ: ಸಾರ್ವಜನಿಕರ ಮೆಚ್ಚುಗೆ

ಹಾಸನ (ಜುಲೈ 3): ತಾಲ್ಲೂಕು ಆಡಳಿತಕ್ಕೆ ಚುರುಕು ನೀಡಲು ಮುಂದಾಗಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಾಲ್ಲೂಕು ಕಚೇರಿ ಭೇಟಿ, ಸಾರ್ವಜನಿಕ ಕುಂದು ಕೊರತೆ ಆಲಿಸುವ ಪ್ರಕ್ರಿಯೆ ಪ್ರಾರಂಬಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಜು.2 ರಂದು ಬೆಳಿಗ್ಗೆ 10.30 ಕ್ಕೆ ಹಾಸನ ತಾಲ್ಲೂಕು ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ಸುಮಾರು ಮೂರುವರೆ ಗಂಟೆಗಳ ಕಾಲ ವಿವಿಧ ಇಲಾಖೆಯಲ್ಲಿ ಬಾಕಿ ಇರುವ ಕಡತಗಳ ವಿಲೇವಾರಿ ಸೇರಿದಂತೆ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.

150 ಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಿ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಸಂಬಂಧ ಪಟ್ಟ ಅಧಿಕಾರಿ ಸಿಬ್ಬಂಧಿಗಳಿಂದ ವಿವರಣೆ ಕೇಳಿ ಸರಿ ಇದ್ದ ಅರ್ಜಿಗಳ ಬಗ್ಗೆ ತಕ್ಷಣ ಕ್ರಮ ವಹಿಸಲು ಸೂಚಿಸಿದರು.

ನೂರಾರು ಮಂದಿ ತಮ್ಮ ಕುಂದು ಕೊರತೆ ಅರ್ಜಿ ಸಲ್ಲಿಸಿ ಶೀಘ್ರವಾಗಿ ಇತ್ಯರ್ಥ ಪಡಿಸಿಕೊಡುವಂತೆ ಕೋರಿಕೆ ಸಲ್ಲಿಸಿದರು. ಹಲವರು ತಮ್ಮ ಜಮೀನಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸರಿಪಡಿಸಿಕೊಡುವಂತೆ ಹಕ್ಕು ಪತ್ರ ಒದಗಿಸುವಂತೆ ಮನವಿ ಸಲ್ಲಿಸಿದರು ಬಂದ ಮನವಿಗಳಲ್ಲಿ ಬಹುತೇಕವು ಭೂಮಿಗೆ ಸಂಬಂಧಿಸಿದ್ದಾಗಿದ್ದು ವಿಶೇಷವಾಗಿತ್ತು.

ವಸತಿ ಶಾಲೆ, ಹಾಸ್ಟೆಲ್, ಸೀಟು ಬೇಕು, ಸರ್ಕಾರಿ ಸಬ್ಸಿಡಿ ಒದಗಿಸಲು ಬ್ಯಾಂಕ್‍ನವರು ಸತಾಯಿಸುತ್ತಿದ್ದು ಸಹಾಯ ಮಾಡಿ, ಕಾಲೇಜು ಅವಧಿಗೆ ಬಸ್ ಸೌಲಭ್ಯ ಒದಗಿಸಿ, ವಿಧವಾ ವೇತನ ಮಂಜೂರಾತಿ ಮಾಡಿ, ಗ್ರಾಮದ ರಸ್ತೆ ದುರಸ್ಥಿ ಮಾಡಿಸಿ, ಗ್ರಾಮ ಠಾಣಾ ಜಾಗ ಹದ್ದುಬಸ್ತು ಮಾಡಿಸಿ, ಬೆಳೆ ವಿಮೆ ಕೊಡಿಸಿ ಅರ್ಚಕರ ವೃತ್ತಿಯಲ್ಲಿ ಮುಂದುವರಿ, ಅಕ್ರಮ ಮದ್ಯ ಮಾರಾಟ ತಡೆಯಿರಿ , ದರಕಾಸ್ತು ಜಮೀನು ದುರಸ್ಥ ಮಾಡಿಕೊಡಿ ಹೀಗೆ ಹತ್ತಾರು ಬಗೆಯ ಅಹವಾಲುಗಳು ಜಿಲ್ಲಾಧಿಕಾರಿಯವರ ಮುಂದೆ ಬಂದವು.

ಎಲ್ಲಾ ಅರ್ಜಿಗಳಿಗೂ ಸ್ವೀಕೃತಿ ಮಾಡಿ ತೆಗೆದುಕೊಂಡ ಕ್ರಮದ ಬಗ್ಗೆ ತಮಗೆ ವರದಿ ಸಲ್ಲಿಸುವಂತೆ ಅಧಿಕಾರಿ ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಾಕೀತು ಮಾಡಿದರು.

ನಿಗದಿತ ಸಮಯಕ್ಕಿಂತಲೂ ಹೆಚ್ಚನ ಅವದಿ ಅರ್ಜಿಗಳನ್ನು ವಿಲೇವಾರಿ ಮಾಡದೇ ಇರುವ ಅಧಿಕಾರಿ ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿಯವರು ಎಚ್ಚರಿಕೆ ನೀಡಿದರು. ಸಾರ್ವಜನಿಕರನ್ನು ಅನಗತ್ಯವಾಗಿ ಅಲೆದಾಡಿಸದಂತೆ ಅವರು ಸೂಚನೆ ನೀಡಿದರು.

ನ್ಯಾಯ ಸಮ್ಮತವಾಗಿದ್ದ ಪ್ರಕರಣಗಳನ್ನು ಕಾಲ ಮಿತಿಯೊಳಗೆ ಇತ್ಯರ್ಥ ಪಡಿಸಬೇಕು ಸರ್ಕಾರಿ ಇಲಾಖೆಗಳು ಸಾರ್ವಜನಿಕರ ಅನುಕೂಲಕ್ಕಾಗಿ ಇವೆ ಜನ ಪರವಾದ ಸೇವೆಸಲ್ಲಿಸಲು ಮನಸ್ಸಿಲ್ಲದ, ನಿರ್ಲಕ್ಷ್ಯ ತೋರುವ ಅಧಿಕಾರಿ ಸಿಬ್ಬಂದಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಸಭೆಯಲ್ಲಿ ಬೆಳೆ ವಿಮೆ ಕುರಿತು ಚರ್ಚಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ. ಜಗದೀಶ್ ಅವರು ವಿಮಾ ಕಂಪನಿ ಪ್ರತಿನಿಧಿಗಳನ್ನು ಕರೆದು ಸಭೆ ನಡೆಸಿ ರೈತರ ಹಿತಾಸಕ್ತಿಗೆ ಪೂರಕವಾಗಿ ಕಾರ್ಯ ನಿರ್ವಹಿಸಲು ಸೂಚಿಸುವುದಾಗಿ ಸೂಚಿಸಿದರು.

ಸಭೆಯ ಅಂತ್ಯದಲ್ಲಿ ಮಾತನಾಡಿದ ಉಪ ವಿಭಾಗಧಿಕಾರಿ ಸಾರ್ವಜನಿಕರಿಂದ ಸ್ವೀಕೃತವಾದ ಅರ್ಜಿಗಳನ್ನು ಇಲಾಖಾವಾರು ತುರ್ತು ಹಾಗೂ ಅತಿ ತುರ್ತು ಪ್ರಕರಣಗಳೆಂದು ವಿಭಾಗಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಯವರು ಸೂಚನೆ ನೀಡಿದ್ದಾರೆ ಮುಂದಿನ 7 ದಿನಗಳೊಳಗಾಗಿ ತೆಗೆದುಕೊಂಡ ಕ್ರಮದ ಬಗ್ಗೆ ಮನವಿದಾರರಿಗೆ ಹಿಂಬರಹ ನೀಡಲಾಗುವುದು ಎಂದರು.

ಪ್ರತಿ 2-3 ತಿಂಗಳಿಗೊಮ್ಮೆ ಎಲ್ಲಾ ತಾಲ್ಲೂಕುಗಳಲ್ಲಿ ಜಿಲ್ಲಾಧಿಕಾರಿಯವರು ಇಂತಹ ಸಭೆ ನಡೆಸದಿದ್ದರೆ ಸಾರ್ವಜನಿಕರು ತಹಶೀಲ್ದಾರರನ್ನು ಭೇಟಿ ಮಾಡಿ ಸಭೆಯಲ್ಲಿ ನೀಡಿದ ಅರ್ಜಿಗಳ ಬಗ್ಗೆ ಕೈಗೊಂಡ ಕ್ರಮಗಳ ವಿವರ ಪಡೆಯಬಹುದು ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಿಗರು ಕಂದಾಯ ಪರಿ ವೀಕ್ಷಕರು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.

ತಹಶೀಲ್ದಾರ್ ಶಿವಶಂಕರಪ್ಪ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ದೇವರಾಜೇಗೌಡ ಹಾಗೂ ವಿವಿಧ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಅರ್ಜಿ ಸ್ವೀಕಾರ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು ಎಲ್ಲವನ್ನು ಗಣಕೀಕರಣಗೊಳಿಸಿ ಸ್ವೀಕೃತಿ ನೀಡುವ ಪ್ರಕ್ರೀಯೆ ಪ್ರಶಂಸೆಗೆ ಪಾತ್ರವಾಯಿತು. (ಎನ್.ಬಿ)

Leave a Reply

comments

Related Articles

error: