ಪ್ರಮುಖ ಸುದ್ದಿ

ಡಾ. ಎನ್.ಟಿ.ಆರ್. ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿಗೆ ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಹಾಗೂ ಚಿತ್ರನಟಿ ಅರುಂಧತಿ ನಾಗ್ ಆಯ್ಕೆ

ರಾಜ್ಯ(ಬೆಂಗಳೂರು)ಜು.4:- ಪ್ರಸಕ್ತ ಸಾಲಿನ ಡಾ. ಎನ್.ಟಿ.ಆರ್. ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿಗೆ ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಹಾಗೂ ಚಿತ್ರನಟಿ ಅರುಂಧತಿ ನಾಗ್ ಅವರನ್ನು ಆಯ್ಕೆಮಾಡಲಾಗಿದೆ.

ಜು. 6ರ ಸಂಜೆ 6.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕೇಂದ್ರ ಸಚಿವ ಸದಾನಂದಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಡಾ. ಎನ್.ಟಿ.ಆರ್. ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿಯನ್ನು ಹಂಸಲೇಖ ಅವರಿಗೆ ಮೇಯರ್ ಸಂಪತ್ ರಾಜ್ ಪ್ರದಾನಿಸಲಿದ್ದಾರೆ. ಅರುಂಧತಿ ನಾಗ್ ಅವರಿಗೆ ಪಿ.ಇ.ಎಸ್ ವಿವಿ ಕುಲಪತಿ ಎಂ.ಎಸ್. ದೊರೆಸ್ವಾಮಿ ಪ್ರದಾನಿಸಲಿದ್ದಾರೆ ಎಂದು ಕರ್ನಾಟಕ ತೆಲುಗು ಆಕಾಡೆಮಿ ಅಧ್ಯಕ್ಷ ಆರ್.ವಿ. ಹರೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾಮಾಜಿಕ, ಸಾಂಸ್ಕೃತಿಕ, ತೆಲುಗು ಭಾಷೆ ಕಾರ್ಯಕ್ರಮಗಳನ್ನು ಹಾಗೂ ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ ಅವರ ಕೃತಿಗಳನ್ನು ತೆಲುಗಿಗೆ, ತೆಲುಗಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ನಾರಾಯಣರೆಡ್ಡಿ ಅವರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಲಾಗಿದೆ. ಉಭಯ ರಾಜ್ಯಗಳ ಭಾಷೆ ಅಭಿವೃದ್ಧಿ, ಸೌಹಾರ್ದ ಸಂಬಂಧ ಮುಂದುವರೆಸಲು ಆಕಾಡೆಮಿ ಶ್ರಮಿಸುತ್ತಿರುವುದಾಗಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಶಾಸಕರಾದ ಮುನಿರತ್ನ, ಗೋಪಾಲಯ್ಯ, ನಿವೃತ್ತ ಹೆಚ್ಚುವರಿ ಜಿಲ್ಲಾಧಿಕಾರಿ ರಾಮಾಂಜನೇಯುಲು ಪಾಲ್ಗೊಳ್ಳಲಿದ್ದಾರೆ ಎಂದರು.

ಕಾರ್ಯಕ್ರಮದ ಅಂಗವಾಗಿ ಜೂನಿಯರ್ ಘಂಟಸಾಲಾ, ಶಿವಪ್ರಸಾದ್ ಮತ್ತು ತಂಡದವರಿಂದ ಕನ್ನಡ ಮತ್ತು ತೆಲುಗು ಭಾಷೆ ಚಲನಚಿತ್ರಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಆಕಾಡೆಮಿಯ ಉಮಾಪತಿ ನಾಯ್ಡು ಶ್ರೀನಿವಾಸಯ್ಯ ಮತ್ತಿತರರು ಉಪಸ್ಥಿತರಿದ್ದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: