ದೇಶಪ್ರಮುಖ ಸುದ್ದಿ

ಎಸ್‍ಬಿಐ ಖಾತೆದಾರರಿಗೆ ಇಲ್ಲ ಸೈಬರ್ ಕಳ್ಳರ ಭಯ: ಆ್ಯಪ್ ಮೂಲಕ ಆನ್/ಆಫ್ ಮಾಡಬಹುದು ಡೆಬಿಟ್ ಕಾರ್ಡ್

ನವದೆಹಲಿ: ಸ್ಟೇಟ್‍ ಬ್ಯಾಂಕ್ ಆಫ್ ಇಂಡಿಯಾ ತನ್ನ ಖಾತೆದಾರರಿಗೆ ಒಂದು ಸಿಹಿ ಸುದ್ದಿ ನೀಡಿದೆ. ಅದು ತನ್ನ ಖಾತೆದಾರರ ಡೆಬಿಟ್ ಕಾರ್ಡ್‍ಗಳನ್ನು ಆ್ಯಪ್ ಬಳಸಿ ಆನ್‍ಲೈನ್ ಮೂಲಕವೇ ಆನ್‍/ಆಫ್‍ ಮಾಡಬಹುದಾದ ಅವಕಾಶ.

ಹಳೇ ನೋಟು ನಿಷೇಧದ ನಂತರ ಜನತೆ ಆನ್‍ಲೈನ್‍ ವ್ಯವಹಾರ ಮಾಡುವುದು ಅನಿವಾರ್ಯ ಮತ್ತು ತ್ವರಿತವಾಗಿ ಬ್ಯಾಂಕಿಂಗ್ ವ್ಯವಹಾರಗಳನ್ನು ಮುಗಿಸುವುದೂ ಸಾಧ್ಯವಿದೆ. ಆದರೆ ಆನ್‍ಲೈನ್‍ ಕಳ್ಳರು ಬ್ಯಾಂಕ್ ಖಾತೆದಾರರ ಹಣಕ್ಕೆ ಕನ್ನ ಹಾಕುವ ಭಯ ಇದ್ದೇ ಇದೆ.

ಪ್ರತಿಯೊಂದಕ್ಕೂ ಅನ್‍ಲೈನ್‍ ವ್ಯವಹಾರದ ಮೇಲೆಯೇ ಅವಲಂಬನೆ ಇದ್ದಾಗ ಹೀಗೆ ಆನ್‍ಲೈನ್‍ ಕಳ್ಳರು ಕನ್ನ ಹಾಕಿದರೆ ದೇವರೇ ಗತಿ. ಹೀಗಾಗಿ ಎಸ್‍ಬಿಐ ಜಾರಿಗೊಳಿಸಿರುವ ಈ ಹೊಸ ಯೋಜನೆಯಿಂದ ಖಾತೆದಾರರಿಗೆ ಖುಷಿಯಾಗುವುದು ಗ್ಯಾರಂಟಿ.

ಉದಾಹರಣೆಗೆ ನೀವು ಶಾಪಿಂಗ್ ಮಾಡುವಾಗ ಆನ್‍ಲೈನ್‍ ವ್ಯವಹಾರವನ್ನು ಚಾಲು ಮಾಡಿ ಶಾಪಿಂಗ್ ಮುಗಿದ ತಕ್ಷಣ ಅಮಾನತು ಮಾಡಬಹುದಾಗಿದೆ. ಶಾಪಿಂಗ್ ಮತ್ತು ಇತರ ಆನ್‍ಲೈನ್‍ ವ್ಯವಹಾರಗಳಲ್ಲಿ ಖಾತೆದಾರರು ಅಗತ್ಯವಿದ್ದಾಗ ಆನ್‍ ಮಾಡಿಕೊಂಡು ವ್ಯವಹಾರ ಮುಗಿದ ತಕ್ಷಣ ಅಮಾನತು ಮಾಡಬಹುದಾಗಿದೆ. ಹೀಗಾದಾಗ ಬೇರೆಯವರು ನಿಮ್ಮ ಕಾರ್ಡ್‍ ಮತ್ತು ಖಾತೆಯನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ.

ಆ್ಯಂಡ್ರಾಯ್ಡ್, ವಿಂಡೋಸ್, ಬ್ಲ್ಯಾಕ್‍ಬೆರಿ ಫೋನ್‍ಗಳಲ್ಲಿ ಬಳಸಬಹುದಾದ ಕ್ವಿಕ್‍ ಆ್ಯಪ್ ಅನ್ನು ಈಗಾಗಲೇ 70 ಲಕ್ಷಕ್ಕೂ ಅಧಿಕ ಎಸ್‍ಬಿಐ ಖಾತೆದಾರರು ಬಳಸುತ್ತಿದ್ದಾರೆ ಎಂದು ತಿಳಿದುಬಂದಿದೆ. ದೇಸಿ ವ್ಯವಹಾರಗಳು ಮಾತ್ರವಲ್ಲದೆ ಅಂತಾರಾಷ್ಟ್ರೀಯ ವ್ಯವಹಾರಗಳ ಮೇಲೂ ಈ ಆ್ಯಪ್ ಬಳಸಿ ನಿಯಂತ್ರಣ ಸಾಧಿಸಬಹುದು. ಇದರಿಂದ ಅಂತಾರಾಷ್ಟ್ರೀಯ ಸೈಬರ್ ಕಳ್ಳರೂ ನಿಮ್ಮ ಖಾತೆಗಳಿಗೆ ಕನ್ನ ಹಾಕಲು ಸಾಧ್ಯವಿಲ್ಲ ಎನ್ನುತ್ತವೆ ವರದಿಗಳು.

ನೋಟು ರದ್ದು ಮಾಡಿದ ಬಳಿಕ ಜನತೆ ನಗದು ಕೊರತೆ ಅನುಭವಿಸುತ್ತಿದ್ದು, ಸಾಧ್ಯವಾದಷ್ಟು ಆನ್‍ಲೈನ್‍ ವ್ಯವಹಾರದ ಕಡೆ ಮುಖ ತಿರುಗಿಸುವುದು ಅನಿವಾರ್ಯವಾಗಿದೆ. ಆದರೆ ಸೈಬರ್ ಕಳ್ಳತನದ ಭಯ ಖಾತೆದಾರರನ್ನು ಕಾಡುತ್ತಿತ್ತು. ಇದೀಗ ಎಸ್‍ಬಿಐ ಹೊಸ ತಾಂತ್ರಿಕ ಅವಕಾಶವನ್ನು ನೀಡಿರುವುದರಿಂದ ಖಾತೆದಾರರು ನೆಮ್ಮದಿಯಿಂದ ಆನ್‍ಲೈನ್ ವ್ಯವಹಾರ ನಡೆಸಬಹುದಾಗಿದೆ.

Leave a Reply

comments

Related Articles

error: