ಮೈಸೂರು

ಮುಡಾ ನಿವೇಶನ ಒತ್ತುವರಿ : ಕ್ರಮ ಹಾಗೂ ಪರಿಹಾರಕ್ಕೆ ಒತ್ತಾಯ

ಮೈಸೂರು, ಜು.4 : ತಮ್ಮ ಪುತ್ರ ಬಿ.ಆರ್. ತೇಜಸ್ ವಿಜಯನಗರ 2 ನೇ ಹಂತದಲ್ಲಿ ಮುಡಾದಿಂದ ಹರಾಜಿನಲ್ಲಿ ಪಡೆದಿದ್ದ ನಿವೇಶನದ ಕೆಲ ಭಾಗವನ್ನು ಪಕ್ಕದ ನಿವೇಶನದವರು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವುಗೊಳಿಸುವಂತೆ ಮುಡಾ ಅಧಿಕಾರಿಗಳಿಗೆ ತಿಳಿಸಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಲೇಖನ ಬರಹಗಾರ ಬಿ.ಜಿ. ರಂಗೇಗೌಡ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಏಪ್ರಿಲ್ 7 ರಂದು ಈ ನಿವೇಶನ ತಮಗೆ ಕ್ರಯವಾಗಿದ್ದು, ನಿವೇಶನದ ಹದ್ದುಬಸ್ತು ಬೌಂಡರಿ ನಿಗದಿಗೊಳಿಸಿಕೊಡುವಂತೆ ಮುಡಾದ ಅಧಿಕಾರಿಗಳಿಗೆ ಎಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಪಕ್ಕದ ನಿವೇಶನದಲ್ಲಿ ಪವಿತ್ರ ಎಂಬುವವರು ಪೂರ್ವಕ್ಕೆ 1 ಮೀಟರ್, ಉತ್ತರಕ್ಕೆ 1.50 ಮೀಟರ್ ಒತ್ತುವರಿ ಮಾಡಿಕೊಂಡಿದ್ದು, ಮುಡಾ ಅಧಿಕಾರಿಗಳ ಗಮನಕ್ಕೆ ತಂದರೆ ಅಷ್ಟು ಮಾತ್ರ ತಾನೇ ಹೊಂದಾಣಿಕೆ ಮಾಡಿಕೊಂಡು ಹೋಗಿ ಎನ್ನುತ್ತಾರೆ.

ತಾವು ನಿವೇಶನಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಸಾಲ ಸಹಾ ಪಡೆದಿದ್ದು, ನ್ಯಾಯಾಲಯ ಮೊರೆ ಹೋದಲ್ಲಿ ವಿಲೇವಾರಿಗೆ ಬಹಳಷ್ಟು ಸಮಯ ಹಿಡಿಯುವ ಕಾರಣ ಸಂಬಂಧಪಟ್ಟ ಮುಡಾ ಅಧಿಕಾರಿಗಳು ಹಾಗೂ ಇತರೆ ಉನ್ನತಾಧಿಕಾರಿಗಳು ಇತ್ತ ಗಮನ ಹರಿಸಿ ಒತ್ತುವರಿ ತೆರವುಗೊಳಿಸಬೇಕು, ಇಲ್ಲವೇ, ಅಷ್ಟು ಭಾಗದ ಹಣವನ್ನು ತುಂಬಿಸಿಕೊಡಬೇಕೆಂದು ಆಗ್ರಹಿಸಿದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: