ಪ್ರಮುಖ ಸುದ್ದಿ

ವಿಧಾನಸಭೆಯ ಉಪ ಸಭಾಧ್ಯಕ್ಷರ ಚುನಾವಣೆ : ಜೆಡಿಎಸ್‌ನಲ್ಲಿ ಪೈಪೋಟಿ

ರಾಜ್ಯ(ಬೆಂಗಳೂರು),ಜು. 5:- ಕರ್ನಾಟಕ ವಿಧಾನಸಭೆಯ ಉಪ ಸಭಾಧ್ಯಕ್ಷರ ಚುನಾವಣೆ ಬರುವ ಶುಕ್ರವಾರ ನಡೆಯಲಿದ್ದು, ಉಪಸಭಾಧ್ಯಕ್ಷರಾಗಲು ಜೆಡಿಎಸ್‌ನಲ್ಲಿ ಪೈಪೋಟಿ ನಡೆದಿದೆ.

ಜೆಡಿಎಸ್‌ನ ಹಿರಿಯ ಸದಸ್ಯ ಎ.ಟಿ.ರಾಮಸ್ವಾಮಿ ಇಲ್ಲವೇ ಹೆಚ್.ಕೆ. ಕುಮಾರಸ್ವಾಮಿ, ಬಿ.ಸತ್ಯನಾರಾಯಣ, ಇವರಲ್ಲಿ ಒಬ್ಬರು ಉಪಸಭಾಧ್ಯಕ್ಷರಾಗುವ ಸಾಧ್ಯತೆಗಳಿದ್ದು, ಉಪಸಭಾಧ್ಯಕ್ಷರ ಆಯ್ಕೆ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಸಂಜೆ ಪಕ್ಷದ ಶಾಸಕರು ಹಾಗೂ ಮುಖಂಡರ ಜತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ. ದೋಸ್ತಿ ಪಕ್ಷಗಳಲ್ಲಿ ಆದ ಒಪ್ಪಂದದಂತೆ ವಿಧಾನಸಭೆಯ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಕ್ಷಕ್ಕೂ, ಉಪಾಧ್ಯಕ್ಷ ಸ್ಥಾನ ಜೆಡಿಎಸ್ ಪಕ್ಷಕ್ಕೂ ಹಂಚಿಕೆಯಾಗಿದೆ. ಅದರಂತೆ ಜೆಡಿಎಸ್‌ನಲ್ಲಿ ಉಪಸಭಾಧ್ಯಕ್ಷರಾಗಲು ಪೈಪೋಟಿಯೇ ಇದ್ದು, ಹಿರಿಯ ಸದಸ್ಯರಾದ ಶಿವಲಿಂಗೇಗೌಡ, ಎ.ಟಿ. ರಾಮಸ್ವಾಮಿ, ಹೆಚ್.ಕೆ. ಕುಮಾರಸ್ವಾಮಿ, ಬಿ.ಸತ್ಯನಾರಾಯಣ, ಇವರುಗಳು ಉಪಸಭಾಧ್ಯಕ್ಷರ ಸ್ಥಾನದ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ. ಬರುವ ಶುಕ್ರವಾರ ನಡೆಯಲಿರುವ ವಿಧಾನಸಭೆಯ ಉಪಾಧ್ಯಕ್ಷರ ಸಭೆಗೆ ಇಂದು ಮಧ್ಯಾಹ್ನ 12 ಗಂಟೆಯೊಳಗೆ ಪ್ರಸ್ತಾವವನ್ನು ವಿಧಾನಸಭೆಯ ಕಾರ್ಯದರ್ಶಿ ಅವರಿಗೆ ನೀಡಬೇಕಿದೆ.

ಶುಕ್ರವಾರ ನಡೆಯಲಿರುವ ವಿಧಾನಸಭೆಯ ಉಪಸಭಾಧ್ಯಕ್ಷರ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ಬಿಜೆಪಿ ನಿರ್ಧರಿಸಿದ್ದು, ಉಪಸಭಾಧ್ಯಕ್ಷರ ಆಯ್ಕೆ ಅವಿರೋಧವಾಗುವ ಸಾಧ್ಯತೆಗಳೇ ಹೆಚ್ಚು ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: