ಮೈಸೂರು

ಅನಧಿಕೃತವಾಗಿ ಬಟ್ಟೆಗಳಿಗೆ ಬಣ್ಣ ಹಾಕುವ ಕಾರ್ಖಾನೆಗಳ ಮೇಲೆ ಅಧಿಕಾರಿಗಳ ಕಾರ್ಯಾಚರಣೆ : ಬೀಗ ಜಡಿದ ಅಧಿಕಾರಿಗಳು

ಮೈಸೂರು,ಜು.5”:- ಅನಧಿಕೃತವಾಗಿ ನಡೆಸುತ್ತಿರುವ ಬಟ್ಟೆಗಳಿಗೆ ಬಣ್ಣ ಹಾಕುವ ಕಾರ್ಖಾನೆಗಳ ಮೇಲೆ ಇಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು, ತಹಶೀಲ್ದಾರರು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮುಚ್ಚುವ ಕಾರ್ಯ ನಡೆಸಿದರು.

ನಗರದ ಎನ್.ಆರ್.ಮೊಹಲ್ಲಾದ ಬನ್ನಿಮಂಟದ ಮುಖ್ಯ ದ್ವಾರದ ಸಿ.ವಿ. ರಸ್ತೆಯಲ್ಲಿರುವ ಕಾರ್ಖಾನೆಗೆ ನುಗ್ಗಿದ ಅಧಿಕಾರಿಗಳು ಪರಿಶೀಲಿಸಿ ಬಳಿಕ ಬೀಗ ಜಡಿದರು.  ಈ ಸಂದರ್ಭ ಮಾತನಾಡಿದ ತಹಶೀಲ್ದಾರ್ ರಮೇಶ್ ಬಾಬು ಯಾವುದೇ ಅಧಿಕೃತ ಆದೇಶವಿಲ್ಲದೇ,ಲೈಸೆನ್ಸ್ ಇಲ್ಲದೇ ಅನಧಿಕೃತವಾಗಿ ಬಟ್ಟೆಗಳಿಗೆ ಡೈಯಿಂಗ್ ಮಾಡುತ್ತಿದ್ದಾರೆ. ಎಷ್ಟು ಅನಧಿಕೃತವಾಗಿ ನಡೆಯುತ್ತಿದೆಯೋ ಅಷ್ಟನ್ನೂ ಸೀಜ್ ಮಾಡಿ,ಲಾಕ್ ಮಾಡಿ ಎಂದು ಜಿಲ್ಲಾಧಿಕಾರಿಗಳು ನಮಗೆ ಮತ್ತು ಪರಿಸರ ನಿಯಂತ್ರಣಾಧಿಕಾರಿಗಳಿಗೆ ತಿಳಿಸಿದ್ದರಿಂದ ನಾವು ಕಾರ್ಯಾಚರಣೆ ನಡೆಸಿದ್ದೇವೆ. ನಗರದಲ್ಲಿ ಎಷ್ಟೆಷ್ಟು ಡೈಯಿಂಗ್ ಯುನಿಟ್ ನಡೆಯುತ್ತಿದೆ. ಅದನ್ನು ಸೀಜ್ ಮಾಡುತ್ತೇವೆ. ಇವರೆಲ್ಲರೂ ತಮಿಳುನಾಡು ಮೂಲದವರಾಗಿದ್ದು, ಅಲ್ಲಿ ಲೈಸೆನ್ಸ್ ಇಲ್ಲದೇ ಇಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದಾರೆ. ಅಂದಾಜು 8 ಡೈಯಿಂಗ್ ಯುನಿಟ್ ಇದೆ. ಮೊದಲೆರಡು ಸೀಜ್ ಮಾಡಿದ್ದೇವೆ. ನಾಳೆ ನಾಡಿದ್ದರಲ್ಲಿ ಎಲ್ಲವನ್ನೂ ಸೀಜ್ ಮಾಡುತ್ತೇವೆ. ಮುಂದೆ ಅನಧಿಕೃತವಾಗಿ ಗೋಡಾನ್ ತೆರೆಯಬಾರದು. ಮಾಡಲೇಬೇಕು ಎಂದಾದರೆ ಕೋರ್ಟ್ ನಿಂದ ಅನುಮತಿ ತರಬೇಕು. ಸೀಜ್ ಮಾಡಿರುವುದರಿಂದ ಜಿಲ್ಲಾಧಿಕಾರಿಗಳ ಅನುಮತಿಯಿಲ್ಲದೇ ಪ್ರವೇಶಿಸುವಂತಿಲ್ಲ ಎಂದರು.

ಪರಿಸರ ನಿಯಂತ್ರಣಾಧಿಕಾರಿ ಬಿ.ಎಂ. ಪ್ರಕಾಶ್ ಮಾತನಾಡಿ ಸ್ಥಳೀಯರಿಂದ ಬಾಡಿಗೆ ಜಾಗ ಪಡೆದು, ಸ್ಥಳೀಯ ನೀರನ್ನು ಪಡೆದು ಯುಜಿಡಿ ಮುಖಾಂತರ ಬಣ್ಣವನ್ನು ಬಿಡುತ್ತಾರೆ.ತಮಿಳುನಾಡಲ್ಲಿ ನೀರು ಚೆನ್ನಾಗಿಲ್ಲ. ಆದರೆ ಇಲ್ಲಿ ನೇರವಾಗಿ ನೀರು ಕೊಳಗಳಲ್ಲಿ ಬರಲಿದೆ. ರಾತ್ರಿ ಬಂದು ಕೆಲಸ ಮಾಡುತ್ತಾರೆ. ಸ್ಥಳೀಯರು ಕೇಳಿದರೆ ಹಾರಿಕೆಯ ಉತ್ತರ ಕೊಟ್ಟು ತಪ್ಪಿಸಿಕೊಳ್ಳುತ್ತಾರೆ. ಅಧಿಕಾರಿಗಳು ಕಂಡರೆ ಓಡಿ ಹೋಗುತ್ತಾರೆ. ಜಾಬ್ ವರ್ಕ್ ಬೇಸಸ್ ಮೇಲೆ ಮಾಡುತ್ತಾರೆ. ಈ ನೀರನ್ನು ಬಳಸುವುದರಿಂದ ಚರ್ಮರೋಗ ಬರತ್ತೆ, ಪ್ರಾಣಿ ಪಕ್ಷಿಗಳಿಗೂ ಅಪಾಯಕಾರಿ. 8ರಲ್ಲಿ 6ಜನರ ಮೇಲೆ ಐಪಿಸಿ 188ರಡಿ ಎಫ್ ಐ ಆರ್ ದಾಖಲಾಗಿದೆ. ಲ್ಯಾಂಡ್ ಓನರ್, ಯಾರು ನಡೆಸುತ್ತಿದ್ದಾರೋ ಮತ್ತು ಯಾರು ಕಳುಹಿಸುತ್ತಿದ್ದಾರೋ ಅವರ ಮೇಲೆ ಮುಂದೆ ಕ್ರಿಮಿನಲ್ ಕೇಸ್ ಗಳನ್ನು ಹಾಕಲಾಗುವುದು ಎಂದು ತಿಳಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: