ಕರ್ನಾಟಕ

ರಾಜ್ಯ ಬಜೆಟ್: ಇಸ್ರೇಲ್ ಮಾದರಿ ಕೃಷಿಗೆ 150 ಕೋಟಿ ರೂ ಅನುದಾನ

ಬೆಂಗಳೂರು (ಜುಲೈ 5): ಕೋಲಾರ, ಚಿತ್ರದುರ್ಗ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ತಲಾ 5 ಸಾವಿರ ಹೆಕ್ಟೇರ್ ಖುಷ್ಕಿ ಜಮೀನಿನಲ್ಲಿ ಇಸ್ರೇಲ್ ಮಾದರಿ ಕೃಷಿ ಮಾಡಲು 150 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ತಾವು ಮಂಡಿಸಿದ ಚೊಚ್ಚಲ ಬಜೆಟ್‍ನಲ್ಲಿ ತಿಳಿಸಿದರು.

ಇಸ್ರೇಲ್‍ಗೆ ಭೇಟಿ ನೀಡಿ ಅಲ್ಲಿನ ಕೃಷಿ ಪದ್ಧತಿಯನ್ನು ಅಧ್ಯಯನ ನಡೆಸಿದ್ದು, ಅದೇ ವ್ಯವಸ್ಥೆಯನ್ನು ಇಲ್ಲಿ ಜಾರಿಗೊಳಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಕೈಗೊಳ್ಳಲಾಗಿದೆ. ಈ ಮೂಲಕ ಕೃಷಿಕರ ಬದುಕನ್ನು ಹಸನುಗೊಳಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಲಹಾ ಸಮಿತಿಯನ್ನು ರಚನೆ ಮಾಡಲು ಯೋಚನೆ ಮಾಡಿದ್ದು, ಪ್ರತಿ ಜಿಲ್ಲೆಯಿಂದ ಇಬ್ಬರು ಪ್ರಗತಿಪರ ರೈತರನ್ನು ಒಳಗೊಂಡಿರುವ ಈ ಸಲಹಾ ಸಮಿತಿ ಜತೆ ನಾನು ಪ್ರತಿ 2 ತಿಂಗಳಿಗೊಮ್ಮೆ ಚರ್ಚೆ ನಡೆಸಿ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದರು.

ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಶೂನ್ಯ ಬಂಡವಾಳ , ಸಹಜ ಕೃಷಿ ಅಳವಡಿಸಿಕೊಳ್ಳಲು ಪ್ರಯತ್ನ ಮಾಡಬೇಕಾಗಿದೆ. ಇದು ನೆರೆಯ ಆಂಧ್ರಪ್ರದೇಶದಲ್ಲಿ ಯಶಸ್ವಿಯಾಗಿದೆ. ಈ ಕಾರ್ಯಕ್ರಮದ ಇದಕ್ಕೆ ತಾಂತ್ರಿಕ ಸಹಾಯ ನೀಡಲು ಹಲವರು ಮುಂದೆ ಬಂದಿದ್ದಾರೆ. ಈ ಯೋಜನೆಗಾಗಿ 50 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ಮೀಸಲಿಡಲಾಗಿದೆ ಎಂದು ಅವರು ಹೇಳಿದರು. (ಎನ್.ಬಿ)

Leave a Reply

comments

Related Articles

error: