ಮೈಸೂರು

ಸರ್ಕಾರದ ತಪ್ಪುಗಳನ್ನು ತಿದ್ದುವ ಸಾಮರ್ಥ್ಯ ನಾಟಕಕ್ಕಿದೆ : ಗುಬ್ಬಿಗೂಡು ರಮೇಶ್

ಸರ್ಕಾರದ ತಪ್ಪುಗಳನ್ನು ತಿದ್ದಿ ತೀಡುವ ಸಾಮರ್ಥ್ಯ ಇರುವುದು ನಾಟಕಗಳಿಗೆ ಮಾತ್ರ ಎಂದು ಸಂಸ್ಕೃತಿ ಚಿಂತಕ ಗುಬ್ಬಿಗೂಡು ರಮೇಶ್ ಹೇಳಿದರು.

ಮೈಸೂರಿನ ಮನೆಯಂಗಳದ ಕಲಾಮಂದಿರದಲ್ಲಿ ಬುಧವಾರ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹರದನಹಳ್ಳಿ ನಂಜುಂಡಸ್ವಾಮಿ ಅವರ ವಾಲ್ಮೀಕಿ ನಾಟಕ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಗುಬ್ಬಿಗೂಡು ರಮೇಶ್ ಮಾತನಾಡಿದರು.

ಬೀದಿನಾಟಕಗಳು ಇಂದು ಸರ್ಕಾರದ ತಪ್ಪುಗಳನ್ನು ತಿದ್ದುವ ಕೆಲಸಮಾಡುತ್ತವೆ. ಅಂಥಹ ಶಕ್ತಿ ಇರುವುದು ಕೇವಲ ನಾಟಕಗಳಿಗೆ ಮಾತ್ರ ಎಂದು ಹೇಳಿದರು. ನಾಟಕದ ಶಕ್ತಿ ವರ್ತಮಾನದ ಪ್ರಕ್ರಿಯೆಗೆ ಬುನಾದಿ. ಸ್ಥಾನ ಬದಲಿಸಿ ನಾಟಕ ಬದುಕುತ್ತದೆ. ಕಾವ್ಯೇಶ ರಮ್ಯಂ ನಾಟಕಂ ಎಂದು ಕರೆಸಿಕೊಂಡ ಕೃತಿಗಳು ಜನಪ್ರಿಯ ನಾಟಕಗಳಾಗಿವೆ ಎಂದರು. ಪ್ರಯೋಗಶೀಲ ನಾಟಕಗಳ ಮೂಲಕ ರಂಗಾಯಣ ಹೆಸರುವಾಸಿಯಾಗಿದೆ. ಪ್ರಜಾಪ್ರಭುತ್ವದಲ್ಲಿ ವಿದ್ಯುನ್ಮಾನ ಮಾಧ್ಯಮಗಳಿಗಿರುವಷ್ಟು ಸ್ವಾತಂತ್ರ್ಯ ಪತ್ರಿಕೆಗಳಿಗಿಲ್ಲ. 126 ಕೋಟಿ ಜನರಲ್ಲಿ ವಾಲ್ಮೀಕಿ ಹುಟ್ಟಿ ಬರಲಿಲ್ಲ. ಭರತಖಂಡವೇ ವಾಲ್ಮೀಕಿ ವಾರಸುದಾರರದ್ದಾಗಿದೆ ಎಂದು ತಿಳಿಸಿದರು.

ಈ ಕೃತಿ ಗುರುಪರಂಪರೆಯನ್ನು ಉಳಿಸಿಕೊಂಡು ಬಂದಿದೆ. ಕುವೆಂಪು ತಮ್ಮ ಗುರುವಿನ ನೆನಪಿಗಾಗಿ ರಾಮಾಯಣದರ್ಶನಂ ಕೃತಿ ರಚಿಸಿದರು. ಹರದನಹಳ್ಳಿ ನಂಜುಂಡಸ್ವಾಮಿಯವರು ಮಲೆಯೂರು ಗುರುಸ್ವಾಮಿಯವರನ್ನು ನೆನಪಿಸಿಕೊಂಡು ಬರೆದಿದ್ದಾರೆ ಇದು ಗುರುಪರಂಪರೆಯ ಕೃತಿ ಎಂದರು. ಇಂದಿನ ಪೀಳಿಗೆ ಸಿನಿಮಾಗೆ ಆಕರ್ಷಿತರಾಗುತ್ತಿದ್ದಾರೆ. ಆದರೆ  ಸಿನಿಮಾ ರೀಲ್, ನಾಟಕ ರಿಯಲ್ ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ವಿದ್ವಾಂಸ ಪ್ರೊ.ಮಲೆಯೂರು ಗುರುಸ್ವಾಮಿ ಉದ್ಘಾಟಿಸಿದರು. ಜನಚೇತನ ಸಂಸ್ಥೆಯ ಅಧ್ಯಕ್ಷ ಪ್ರಸನ್ನ ಎನ್.ಗೌಡ ಕೃತಿ ಲೋಕಾರ್ಪಣೆಗೊಳಿಸಿದರು.

ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ವಿಮರ್ಶಕ ಡಾ.ಮಧುವನ ಶಂಕರ, ಪ್ರಾಧ್ಯಾಪಕ ಬಿಳಿಗಿರಿ ರಂಗನಾಯಕ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: