ಮೈಸೂರು

ಸಿಎಂ ಸಿದ್ದರಾಮಯ್ಯ ಅನ್ಯಾಯ ತಡೆಯುವಲ್ಲಿ ವಿಫಲ : ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರ ಆಪ್ತರು ಮಾಡುತ್ತಿರುವ ಅನ್ಯಾಯ, ಅತ್ಯಾಚಾರಗಳನ್ನು ತಡೆಯುವಲ್ಲಿ ವಿಫಲವಾಗಿರುವುದರಿಂದ, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಮೈಸೂರು ರಕ್ಷಣಾ ವೇದಿಕೆ ವತಿಯಿಂದ ಬುಧವಾರ ಮೈಸೂರು ನ್ಯಾಯಾಲಯದ ಮುಂಭಾಗವಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ತಮ್ಮದು ಭ್ರಷ್ಟಾಚಾರ ಮುಕ್ತ ಸರ್ಕಾರ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಸಚಿವರು, ಅವರ ಪುತ್ರರು, ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳು, ಸಲಹೆಗಾರರು, ಸ್ನೇಹಿತರು ಹೀಗೆ ತಮ್ಮ ಸುತ್ತಮುತ್ತಲಿರುವ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ವಿವಾದಗಳಷ್ಟೇ ಅಲ್ಲ ಅನಾಹುತಗಳನ್ನೇ ಸೃಷ್ಟಿಸುತ್ತಿದ್ದರೂ ಜಾಣ ಕುರುಡನಂತೆ ವರ್ತಿಸುತ್ತಿರುವ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ರಾಜ್ಯ ಸರ್ಕಾರದಲ್ಲಿ ಮುಖ್ಯ ಹುದ್ದೆ ಅನುಭವಿಸುತ್ತಿರುವ ಹಾಗೂ ಮುಖ್ಯಮಂತ್ರಿಗಳ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ದುರ್ಜನರು ನಡೆಸುತ್ತಿರುವ ಅನಾಚಾರ, ಅತ್ಯಾಚಾರ, ಗೂಂಡಾಗಿರಿ, ದಬ್ಬಾಳಿಕೆಗಳನ್ನು ಜನ ಮರೆತಿಲ್ಲ. ಮುಖ್ಯ ಮಂತ್ರಿಗಳ ಆಪ್ತ ಕೆ.ಮರಿಗೌಡ ಮೈಸೂರಿನ ಜಿಲ್ಲಾಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸಲು ಯತ್ನಿಸಿ ಜೈಲು ಸೇರಿದ್ದರು. ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅವರ ಅಮಾನತು ಹಿಂಪಡೆಯಿತು.ಇದನ್ನು ಸಹ ಜನ ಗಮನಿಸಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸ್ ಅಧಿಕಾರಿ ಗಣಪತಿ ತನ್ನ ಆತ್ಮಹತ್ಯೆಗೆ ಸಚಿವ ಕೆ.ಜಾರ್ಜ್ ಕಾರಣ ಎಂದು ಮರಣಪೂರ್ವ ಹೇಳಿಕೆ ನೀಡಿದ್ದರೂ ಅವರಿಗೆ ಕ್ಲೀನ್ ಚಿಟ್ ನೀಡಿ ಮತ್ತೆ ಮಂತ್ರಿಯನ್ನಾಗಿಸಿದ ಭಂಡ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಮಹದೇವಪ್ಪನ ಪುತ್ರ ಅನೈತಿಕವಾಗಿ ಸರ್ಕಾರಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ಪ್ರಶ್ನಿಸಿದ ನಾಗರೀಕರ ಮೇಲೆ ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ನಡೆಸಿದ ದೌರ್ಜನ್ಯ. ಹಾಗೂ ಈಗಷ್ಟೇ ರಾಜೀನಾಮೆ ನೀಡಿರುವ ಹೆಚ್.ವೈ.ಮೇಟಿ ನಡೆಸಿದ ಅತ್ಯಾಚಾರದ ಬಗ್ಗೆ ತಿಂಗಳ ಹಿಂದೆಯೇ ಮಾಹಿತಿ ಇದ್ದಾಗಿಯೂ ಆತನ ರಕ್ಷಣೆಗೆ ಪ್ರಯತ್ನ,ಅಪಾರ ಕಪ್ಪು ಹಣ, ಆಸ್ತಿ ಮಾಡಿ ಸಿಕ್ಕಿಬಿದ್ದ ಠಕ್ಕ ಅಧಿಕಾರಿಗಳು ಸಿದ್ದರಾಮಯ್ಯ ಹಾಗು ಮಹದೇವಪ್ಪನವರ ಆಪ್ತರು ಎಂದು ನಿತ್ಯ ಜನರ ಬಾಯಿಯಲ್ಲಿ ಬರುತ್ತಿದೆ. ರಾಜ್ಯದ ಜನರು ತಮ್ಮ ಮೇಲೆ ಇಟ್ಟ ವಿಶ್ವಾಸವನ್ನು ಒಂದಿಲ್ಲೊಂದು ಕುಕೃತ್ಯಗಳ ಮೂಲಕ ಕಳೆದುಕೊಂಡಿರುವ ಅಸಮರ್ಥ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು  ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವೇದಿಕೆಯ ಅಧ್ಯಕ್ಷ ಮೈ.ಕಾ.ಪ್ರೇಮ್‍ಕುಮಾರ್, ಉಪಾಧ್ಯಕ್ಷ ಕುಮಾರ್‍ಗೌಡ, ಕಾರ್ಯದರ್ಶಿ ರಾಕೇಶ್ ಭಟ್, ವಿಕ್ರಮ್, ಪ್ರಮೋದ್‍ಗೌಡ, ಆರ್.ಚಂದ್ರು, ಚೆನ್ನಬಸವಣ್ಣ, ಸ್ವಾಮಿ, ದೀಪಕ್ ಮತ್ತಿತರರು ಪಾಲ್ಗೊಂಡಿದ್ದರು

Leave a Reply

comments

Related Articles

error: