ಮೈಸೂರು

ಮಿಲೇನಿಯಂ ವೃತ್ತದಲ್ಲಿ ಕೆಂಪನಂಜಮ್ಮಣ್ಣಿ ಪ್ರತಿಮೆ ಸ್ಥಾಪಿಸಲು ನಿರ್ಧಾರ

ಬನ್ನಿಮಂಟಪ ಬಳಿಯಿರುವ ಟಿ.ಎನ್. ನರಸಿಂಹಮೂರ್ತಿ(ಮಿಲೇನಿಯಂ) ವೃತ್ತದಲ್ಲಿ ರಾಜವಂಶಸ್ಥೆ ಕೆಂಪನಂಜಮ್ಮಣ್ಣಿ ವಾಣಿ ವಿಲಾಸ ಸನ್ನಿಧಾನ ಪ್ರತಿಮೆ ಸ್ಥಾಪಿಸಲು ಮುಡಾ ನಿರ್ಣಯ ಕೈಗೊಂಡಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಅಧ್ಯಕ್ಷ ಡಿ.ಧ್ರುವಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಕೆಂಪನಂಜಮ್ಮಣ್ಣಿ ಪ್ರತಿಮೆ ಸ್ಥಾಪಿಸಲು ನಿರ್ಧಾರ ಕೈಗೊಳ್ಳಲಾಯಿತು.

ಕೃಷ್ಣರಾಜ ಸಾಗರ ಅಣೆಕಟ್ಟೆ ನಿರ್ಮಾಣದ ವೇಳೆ ಆರ್ಥಿಕ ಬಿಕ್ಕಟ್ಟು ಎದುರಾದಾಗ ತಮ್ಮ ಸ್ವಂತ ಒಡವೆಗಳನ್ನು ಬಳಸಿಕೊಂಡು ಉದಾರತೆ ಮೆರೆದ ಮಹಾರಾಜ 10ನೇ ಚಾಮರಾಜ ಒಡೆಯರ್ ಅವರ ಧರ್ಮಪತ್ನಿ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಕೆಂಪನಂಜಮ್ಮಣ್ಣಿ ಅವರ ತ್ಯಾಗದ ನೆನಪಿಗಾಗಿ ಅವರ ಪ್ರತಿಮೆ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಆಯುಕ್ತ ಡಾ.ಎಂ. ಮಹೇಶ್ ಹೇಳಿದರು.

ಈ ಯೋಜನೆ ಜೊತೆಗೆ ಚಾಮುಂಡಿಬೆಟ್ಟದ ರಸ್ತೆಯಲ್ಲಿ ಕುರುಬಾರಹಳ್ಳಿ ವೃತ್ತದಲ್ಲಿ ರಾಯಣ್ಣ ಪ್ರತಿಮೆ ಹಾಗೂ ಗೋಪುರ ನಿರ್ಮಾಣಕ್ಕೂ ಸಭೆ ಒಪ್ಪಿಗೆ ಸೂಚಿಸಿತು.

ಖಾಸಗಿ ಮುಡಾ ಬಡಾವಣೆ ಸೇರಿದಂತೆ ಮುಡಾದಿಂದ ಇರುವ ನಾಗರಿಕ ಸೇವೆಗಳಿಗಾಗಿ ಮೀಸಲಿಟ್ಟಿರುವ 232 ನಿವೇಶನ ಹಂಚಿಕೆಗೆ ಸಂಘ-ಸಂಸ್ಥೆಗಳಿಂದ ಹೊಸದಾಗಿ ಅರ್ಜಿ ಆಹ್ವಾನಿಸಲು ಸಭೆ ನಿಶ್ಚಯಿಸಿತು. ಪಡುವಾರಹಳ್ಳಿ ಬಳಿ ಕ್ರೀಡಾಂಗಣ ನಿರ್ಮಿಸುವುದು ಹಾಗೂ ಉಳಿದ ಜಾಗವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಗ್ರಾಮದ ಜನರು ಬಯಸುವ ವ್ಯವಸ್ಥೆ ಕಲ್ಪಿಸಲು ಮೀಸಲಿರಿಸುವುದು, ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕ್ರೀಡಾಂಗಣ ನಿರ್ಮಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಗೆ ಜಾಗ ನೀಡಲೂ ಸಭೆ ಸಮ್ಮತಿ ನೀಡಿತು.

ಸಭೆಯಲ್ಲಿ ಶಾಸಕರಾದ ಜಿ.ಟಿ. ದೇವೇಗೌಡ, ಮರಿತಿಬ್ಬೇಗೌಡ, ಸಂದೇಶ್ ನಾಗರಾಜ್, ಎಂ.ಕೆ. ಸೋಮಶೇಖರ್, ರಮೇಶ್ ಬಾಬು ಬಂಡಿಸಿದ್ದೇಗೌಡ, ಕೆ.ಟಿ.ಶ್ರೀಕಂಠೇಗೌಡ, ನಗರ ಪಾಲಿಕೆ ಆಯುಕ್ತ ಜಿ.ಜಗದೀಶ್, ಮುಡಾ ಸೂಪರಿಂಟೆಂಡಿಂಗ್ ಇಂಜಿನಿಯರ್ ಎಂ.ಶಿವಕುಮಾರ್, ಕಾರ್ಯದರ್ಶಿ ಎಂ.ಕೆ. ಸವಿತಾ, ನಗರ ಯೋಜನಾ ಸದಸ್ಯ ಎಂ.ಸಿ. ಶಶಿಕುಮಾರ್ ಇದ್ದರು.

Leave a Reply

comments

Related Articles

error: