
ಮೈಸೂರು
ಸಭ್ಯರೆಂದರೇ ಇದೇನಾ..? ಸಿದ್ದರಾಮಯ್ಯಗೆ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಪ್ರಶ್ನೆ
ಇದೇನಾ ಸಿದ್ದರಾಮಯ್ಯ ನೀವು ಕಟ್ಟಿದ ಪರಿಣಾಮಕಾರಿ ಮಂತ್ರಿಮಂಡಲ ? ಸಭ್ಯರೆಂದರೇ ಹೀಗೇನಾ ? ಎಂದು ವ್ಯಂಗ್ಯ ಕುಹಕದ ಪ್ರಶ್ನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಾಕಿದ್ದು ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್.
ಸಚಿವ ಎಚ್.ವೈ.ಮೇಟಿ ರಾಸಲೀಲೆ ಸಿಡಿ ಬಹಿರಂಗಗೊಳ್ಳುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಸಾದ್ ಪರಿಣಾಮಕಾರಿ ಮಂತ್ರಿಮಂಡಲ ರಚಿಸುವ ಹಿನ್ನೆಲೆಯಲ್ಲಿ 14 ಜನರನ್ನು ಕೈಬಿಟ್ಟು 14 ಮಂದಿ ಹೊಸಬರನ್ನು ತೆಗೆದುಕೊಂಡವರಲ್ಲ ಇವರೆಲ್ಲ ಸಭ್ಯರಾ? ಉತ್ತಮರಾ? ಎಂದು ಕಟು ವಾಗ್ದಾಳಿ ನಡೆಸಿದ್ದು, ಅನಾರೋಗ್ಯದ ಕಾರಣ ನೀಡಿ ಸಚಿವ ಸಂಪುಟದಿಂದ ತಮ್ಮನ್ನು ಮಂತ್ರಿಮಂಡಲದಿಂದ ಕೈಬಿಟ್ಟ ಬಗೆಗಿನ ಆಕ್ರೋಶವನ್ನು ಪ್ರಸಾದ್ ಮತ್ತೊಮ್ಮೆ ಹೊರಗೆಡವಿದರು.
ಸಾಕ್ಷಿ ಸಮೇತ ರುಜುವಾತಾದರೂ ಸ್ಪಷ್ಟತೆಯಿಂದ ಮಾತನಾಡಲು ನಿಮ್ಮ ಕೈಯಲ್ಲಿ ಆಗುತ್ತಿಲ್ಲ. ಈ ಹಿಂದೆ ತನ್ವೀರ್ ಸೇಠ್, ಈಗ ಮೇಟಿ. ಇಂತಹ ಸಚಿವರ ನಾಚಿಕೆಗೇಡಿನ ವರ್ತನೆಯಿಂದ ನಿಮಗೂ ಹಾಗೂ ಕಾಂಗ್ರೆಸ್ ಸರ್ಕಾರಕ್ಕೂ ತೀವ್ರ ಮುಜುಗರವುಂಟಾಗಿದೆ. ಇಂತಹವರನ್ನು ಮಂತ್ರಿ ಮಾಡಲು ಸಭ್ಯರನ್ನು ದೂರ ಮಾಡಿದಿರಲ್ಲ ಎಂದು ಆಕ್ರೋಶಭರಿತರಾಗಿ ಮಾತನಾಡಿ, ಸಚಿವರ ರಾಜೀನಾಮೆ ಪಡೆದು ಪ್ರಕರಣವನ್ನು ಮುಚ್ಚಿ ಹಾಕಬೇಡಿ, ಸಿಐಡಿಯಿಂದ ಹೆಚ್ಚಿನ ತನಿಖೆಯಾಗಿ ಸತ್ಯಾಸತ್ಯತೆಗಳು ಬಯಲಾಗಲಿ ಎಂದು ಆಗ್ರಹಿಸಿದರು.