ಮೈಸೂರು

ಇಂಧನಗಳ ರಕ್ಷಣೆಗೆ ಹೆಚ್ಚು ಒತ್ತು ನೀಡಿ: ಡಾ. ರಾಜಶೇಖರ್ ಪಿ. ಮಂಡಿ

ಇಂಧನಗಳ ರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು. ಅವುಗಳ ಅತಿಯಾದ ಬಳಕೆಯಿಂದ ಪರಿಸರ ಮಾಲಿನ್ಯವೂ ಹೆಚ್ಚುತ್ತದೆ ಎಂದು ಬೆಂಗಳೂರಿನ ರೇವಾ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್‍ನ ನಿರ್ದೇಶಕ ಡಾ. ರಾಜಶೇಖರ್ ಪಿ.ಮಂಡಿ ಹೇಳಿದರು.

ನಗರದ ಇಂಜಿನಿಯರುಗಳ ಸಂಸ್ಥೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಇಂಧನ ಸಂರಕ್ಷಣಾ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಕಲ್ಲಿದ್ದಲಿನಿಂದಲೇ ಶೇ.60ರಷ್ಟು ವಿದ್ಯುತ್ ಉತ್ಪಾದನೆ ಆಗುತ್ತಿದೆ. ಇದರಿಂದ ಇಂಗಾಲದ ಡೈ ಆಕ್ಸೈಡ್ ಉತ್ಪಾದನೆಯ ಪ್ರಮಾಣವೂ ಅಧಿಕವಾಗಿದೆ. ವಿದ್ಯುತ್ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಲು ತಗುಲುವ ವೆಚ್ಚಕ್ಕಿಂತ ವಿದ್ಯುತ್ ಉಳಿಸಲು ವೆಚ್ಚವಾಗುವ ಮೊತ್ತ ಕಡಿಮೆ. ಈ ನಿಟ್ಟಿನಲ್ಲಿ ವಿದ್ಯುತ್ ಸೇರಿದಂತೆ ಎಲ್ಲ ಇಂಧನಗಳನ್ನು ಸಂರಕ್ಷಿಸಬೇಕು. ಇಲ್ಲದೇ, ಇದ್ದರೆ ಓಝೋನ್ ಪದರಕ್ಕೆ ಧಕ್ಕೆಯಾಗಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದು ಅವರು ಎಚ್ಚರಿಕೆ ನೀಡಿದರು.

ಇಂಧನವನ್ನು ಬಳಸದೇ ಇರುವುದೇ ಸಂರಕ್ಷಣೆ ಅಲ್ಲ. ಗುಣಮಟ್ಟದ ಇಂಧನವನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದೂ ಸಂರಕ್ಷಣೆಯ ಭಾಗವಾಗಿದೆ. ಗುಣಮಟ್ಟದ ಉಪಕರಣಗಳನ್ನು ಬಳಸುವುದರಿಂದ ಇಂಧನ ವ್ಯಯ ಆಗುವುದನ್ನು ತಡೆಗಟ್ಟಬಹುದು. ಈ ಬಗ್ಗೆ ಜನರಲ್ಲಿ ತಿಳುವಳಿಕೆಯ ಕೊರತೆ ಇದೆ. ಇಂಧನಗಳು ವ್ಯರ್ಥ ಆಗದಂತೆ ನೋಡಿಕೊಳ್ಳಲು ಗುಣಮಟ್ಟದ ಕಂಪನಿಗಳ ಉಪಕರಣಗಳನ್ನು ಬಳಕೆ ಮಾಡುವುದೇ ಪರಿಹಾರ ಎಂದರು.

ಇಂಜಿನಿಯರುಗಳ ಸಂಸ್ಥೆಯ ಮಾಜಿ ಅಧ್ಯಕ್ಷ ಸಿ.ಎನ್. ಬಾಬು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭವೃದ್ಧಿ ಸಂಸ್ಥೆಯ ಯೋಜನಾ ಇಂಜಿನಿಯರ್ ಡಿ.ಕೆ. ದಿನೇಶ್ ಕುಮಾರ್, ಇಂಜಿನಿಯರುಗಳ ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ.ವಿ. ರವೀಂದ್ರನಾಥ್, ಕಾರ್ಯಕ್ರಮ ಸಂಯೋಜಕ ಬಿ.ಎಸ್. ರಮೇಶ್ ಇದ್ದರು.

Leave a Reply

comments

Related Articles

error: