
ಪ್ರಮುಖ ಸುದ್ದಿಮೈಸೂರು
ಮತ್ತೆ ಭುಗಿಲೆದ್ದ ಭಿನ್ನಮತ: ಬಿಜೆಪಿ ಉಪ ಮೇಯರ್, ಸದಸ್ಯರಿಂದ ಸಭಾತ್ಯಾಗ
ಮೈಸೂರು ನಗರ ಪಾಲಿಕೆಯಲ್ಲಿ ಗುರುವಾರದಂದು ನಾಲ್ಕನೇ ಹಣಕಾಸು ಆಯೋಗದ ಸಭೆ ನಡೆಯುತ್ತಿದ್ದು, ಈ ಸಭೆಯಲ್ಲಿ ಜೆಡಿಎಸ್-ಬಿಜೆಪಿ ನಡುವಿನ ಭಿನ್ನಮತ ಮತ್ತೆ ಭುಗಿಲೆದ್ದಿದೆ.
ಉಪ ಮೇಯರ್ ರತ್ನಾ ಲಕ್ಷ್ಮಣ್ಗೆ ಸಭೆಯಲ್ಲಿ ಕುಳಿತುಕೊಳ್ಳಲು ಸೀಟಿನ ವ್ಯವಸ್ಥೆ ಮಾಡಿಲ್ಲ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಸದಸ್ಯರಿಗೆ ಅಧ್ಯಕ್ಷ ಸ್ಥಾನಕ್ಕೆ ಅವಕಾಶ ನೀಡಿಲ್ಲದ ಕಾರಣ ಬಿಜೆಪಿ ಮುಖಂಡರಾದ ಗಿರೀಶ್ ಪ್ರಸಾದ್ ಮತ್ತು ಉಪ ಮೇಯರ್ ರತ್ನಾ ಲಕ್ಷ್ಮಣ್ ಸಭೆಯಿಂದ ಹೊರನಡೆದರು.
ನಮಗೆ ನ್ಯಾಯ ಸಿಗುವವರೆಗೂ ಯಾವುದೇ ಸಭೆ-ಸಮಾರಂಭಗಳಲ್ಲಿ ಭಾಗವಹಿಸುವುದಿಲ್ಲ. ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳಲಿ. ಆ ಬಳಿಕ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಗಿರೀಶ್ ಪ್ರಸಾದ್ ಹೇಳಿದರು.
ಮೈತ್ರಿ ಒಪ್ಪಂದದಂತೆ ಜೆಡಿಎಸ್ಗೆ ಎರಡು ಮತ್ತು ಬಿಜೆಪಿಗೆ ಎರಡು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಎಂದು ತೀರ್ಮಾನವಾಗಿತ್ತು. ಅದರಂತೆ ಮೊದಲ ಎರಡು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಗೆ ಬಿಜೆಪಿ ಬೆಂಬಲ ನೀಡಿತ್ತು. ನಂತರ ಪಟ್ಟಣ ಯೋಜನೆ ಮತ್ತು ಸುಧಾರಣೆಗಾಗಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ನ ಕೆಂಪಣ್ಣ ಅವರು ನಾಮಪತ್ರ ಸಲ್ಲಿಸಿದ್ದರು. ಒಪ್ಪಂದದಂತೆ ಬಿಜೆಪಿಯ ನಂದೀಶ್ ಪ್ರೀತಂ ಅವರು ಕೂಡ ನಾಮಪತ್ರ ಸಲ್ಲಿಸಿದ್ದರು. ಆದರೆ, ಕೆಂಪಣ್ಣ ಅವರು ನಾಮಪತ್ರ ಹಿಂದಕ್ಕೆ ಪಡೆಯಲಿಲ್ಲ. ಇದರಿಂದಾಗಿ ಬಿಜೆಪಿ ಸದಸ್ಯರು ಅಸಮಾಧಾನಗೊಂಡು ಪ್ರತಿಭಟನೆಯನ್ನು ನಡೆಸಿದ್ದರು.