ಮೈಸೂರು

ಮನೆಯಲ್ಲಿದ್ದ ಒಂಟಿ ಮಹಿಳೆಯ ಪ್ರಜ್ಞೆ ತಪ್ಪಿಸಿ ನಗ-ನಗದು ಲೂಟಿ

ಮೈಸೂರು,ಜು.9:- ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಯನ್ನು ಮಾತಿನಲ್ಲೇ ಮರುಳು ಮಾಡಿ ಆಕೆಯ ಪ್ರಜ್ಞೆ ತಪ್ಪಿಸಿ ಮನೆಯನ್ನು ದೋಚಿದ ಘಟನೆ ನಿನ್ನೆ ಮಧ್ಯಾಹ್ನ ವಿದ್ಯಾರಣ್ಯಪುರಂನ ಕನಕಗಿರಿಯಲ್ಲಿ ನಡೆದಿದೆ.

ಕನಕಗಿರಿ ಬಡಾವಣೆಯ ನಿವಾಸಿ ನಾಗರಾಜು ಪತ್ನಿ ಲಕ್ಷ್ಮೀ(40) ನಗದು, ಚಿನ್ನಾಭರಣ ಕಳೆದುಕೊಂಡವರಾಗಿದ್ದಾರೆ. ಲಕ್ಷ್ಮಿ ತಮ್ಮ ಮನೆಯಲ್ಲಿದ್ದಾಗ ಮಧ್ಯಾಹ್ನ 12.30ರ ಹೊತ್ತಿಗೆ ಮಹಿಳೆಯೋರ್ವಳು ಬಂದು ನನ್ನ ಮಗುವಿಗೆ ಕಿವಿ ಚುಚ್ಚಿಸಬೇಕು ದಾನ ನೀಡಿ ಎಂದು ಗೋಗರೆದಿದ್ದು, ಈಕೆಯ ಮಾತಿಗೆ ಮರುಳಾದ ಲಕ್ಷ್ಮಿ ಮೆಯೊಳಗೆ ಹೋಗುತ್ತಿರುವಾಗ ಹಿಂದಿನಿಂದ ಬಂದ ಮಹಿಳೆ ಕರ್ಚೀಪ್ ನಿಂದ ಆಕೆಯ ಮೂಗಿನ ಬಳಿ ಹಿಡಿದಿದ್ದು, ಆಕೆ ಪ್ರಜ್ಞೆ ತಪ್ಪಿದ್ದಾಳೆ. ಮಧ್ಯಾಹ್ನ ಮೂರುಗಂಟೆಯ ಹೊತ್ತಿಗೆ ಪ್ರಜ್ಞೆ ಬಂದಿದ್ದು, ಅನುಮಾನಗೊಂಡು ನೋಡಲಾಗಿ ಬೀರುವಿನ ಬಾಗಿಲು ತೆರೆದಿತ್ತು. ಮಗಳು ಮನೆಯನ್ನು ಭೋಗ್ಯಕ್ಕೆ ಹಾಕೊಕೊಳ್ಳಲು ನೀಡಿದ್ದ 5ಲಕ್ಷರೂ. ಮತ್ತು 300ಗ್ರಾಂ ಚಿನ್ನಾಭರಣಗಳು ಬೀರುವಿನಿಂದ  ಕಳುವಾಗಿವೆ. ಕೂಡಲೇ ವಿದ್ಯಾರಣ್ಯಪುರಂ ಠಾಣೆಗೆ ದೂರನ್ನು ನೀಡಿದ್ದು, ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಬಂದು ಪರಿಶೀಲನೆ ನಡೆಸಿವೆ. ರಸ್ತೆಯುದ್ದಕ್ಕೂ ಇದ್ದ ಸಿಸಿಟಿವಿ ಕ್ಯಾಮರಾಗಳನ್ನು ಪೊಲೀಸರು ವೀಕ್ಷಿಸಿದ್ದಾರೆ. ಮನೆಯಲ್ಲಿರುವ ಒಂಟಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಈ ಕೃತ್ಯ ನಡೆಸಲಾಗುತ್ತಿದ್ದು, ಅಪರಿಚಿತರನ್ನು ಅನವಶ್ಯಕ ಮಾತನಾಡಿಸಬೇಡಿ. ಮಾತನಾಡುವುದಿದ್ದರೂ ಬಾಗಿಲು ತೆರೆಯದೇ ಕಿಟಕಿಯ ಮೂಲಕವೇ ಮಾತನಾಡಿ ಕಳಿಸಿ ಎನ್ನುತ್ತಾರೆ ಪೊಲೀಸರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: