ಮೈಸೂರು

ಬುಡಕಟ್ಟು ಜನಾಂಗದವರನ್ನು ಮುಖ್ಯವಾಹಿನಿಗೆ ಕರೆತರಬೇಕು: ಪ್ರೊ. ಪ್ರಮೋದ್ ಬಿ.ಗಾಯಿ

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಗುರುವಾರದಂದು ಕುವೆಂಪುನಗರದಲ್ಲಿರುವ ವೀಣೆಶೇಷಣ್ಣ ಭವನದಲ್ಲಿ ಆಯೋಜಿಸಲಾಗಿದ್ದ ‘ಜೇನುಕುರುಬ ಮೂಲನಿವಾಸಿ ಬುಡಕಟ್ಟು ಸಮುದಾಯದ ಸಾಮಾಜಿಕ ಜೀವನ’ ಎಂಬ ವಿಷಯದ ಮೇಲೆ ಒಂದು ದಿನದ ಪ್ರಾದೇಶಿಕ ವಿಚಾರ ಸಂಕಿರಣವನ್ನು ಧಾರಾವಾಡ ಕರ್ನಾಟಕ ವಿವಿ ಕುಲಪತಿಗಳಾದ ಪ್ರೊ. ಪ್ರಮೋದ್ ಬಿ.ಗಾಯಿ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿ, ಬುಡಕಟ್ಟು ಸಮುದಾಯದ ಜನರಿಗಾಗಿ ವಿಚಾರಸಂಕಿರಣವನ್ನು ಆಯೋಜಿಸಿರುವುದು ಒಂದು ಅಪರೂಪದ ಕಾರ್ಯಕ್ರಮವಾಗಿದೆ. ಬುಡಕಟ್ಟು ಜನರೇ ಸ್ವತಃ ತಮ್ಮ ಜೀವನಶೈಲಿಯ ವಿಷಯವನ್ನು ಮಂಡಿಸುತ್ತಿರುವುದು ಶ್ಲಾಘನೀಯ. ಪ್ರೊಫೆಸರ್‍ಗಳು ಸಂಶೋಧನೆ ನಡೆಸಿ ವಿಚಾರಗಳನ್ನು ಮಂಡಿಸುತ್ತಾರೆ. ಆದರೆ, ಬುಡಕಟ್ಟು ಜನಾಂಗದವರು ಕೇವಲ ತಮ್ಮ ಸ್ವಾನುಭಾವಗಳನ್ನು ಮಂಡಿಸುತ್ತಿರುವುದು ವಿಶೇಷ ಎಂದರು.

ಈ ಜನಾಂಗ ತುಂಬಾ ಹಿಂದುಳಿದಿದೆ. ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಆದಿವಾಸಿ ಬುಡಕಟ್ಟು ಸಂಘಗಳು ಸಾಕಷ್ಟು ಪ್ರಯತ್ನಿಸುತ್ತಿದೆ. ಕೆಲ ಸರಕಾರೇತರ ಸಂಘಗಳು ಅವರ ಏಳಿಗೆಗಾಗಿ ಶ್ರಮಿಸುತ್ತಿವೆ. ಇವರೆಲ್ಲರ ಸಲಹೆಗಳನ್ನು ಸರಕಾರಕ್ಕೆ ನೀಡಬೇಕು. ಬುಡಕಟ್ಟು ಜನಾಂಗದವರು ಮುಖ್ಯವಾಹಿನಿಗೆ ಬಂದ ಮೇಲೆ ಅವರ ಮೂಲ ಆಚಾರ-ವಿಚಾರಗಳು ಬದಲಾಗಬಾರದು ಎಂದು ಹೇಳಿದರು.

ಜಿಲ್ಲಾಧಿಕಾರಿ ಡಿ.ರಂದೀಪ್ ಮಾತನಾಡಿ, ಆಡಳಿತದಲ್ಲಿರುವ ನಾವು ಬುಡಕಟ್ಟು ಜನರ ಮೂಲ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು. ಅವರ ಬೇಕು, ಬೇಡಗಳನ್ನು ನಾವೇ ಅರಿತು ಪೂರೈಸಬೇಕು. ಅವರಿಗಾಗಿ ಜಾರಿಯಾಗಿರುವ ಯೋಜನೆಗಳು ಸಮರ್ಪಕವಾಗಿ ಸದ್ಬಳಕೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಅರಣ್ಯ ಇಲಾಖೆಯ ನೂತನ ಕಾಯಿದೆ ಜಾರಿಗೆ ಬಂದ ಮೇಲೆ ಬುಡಕಟ್ಟು ಜನಾಂಗದವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಬೇಕು. ಬುಡಕಟ್ಟು ಜನಾಂಗದ ಹಿರಿಯರು ಇಂದು ವಿಚಾರಸಂಕಿರಣದಲ್ಲಿ ಮಂಡಿಸಿರುವ ವಿಷಯಗಳು ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಹಿರಿಯರ ಸಲಹೆಗಳನ್ನು ಪಟ್ಟಿ ಮಾಡಿ ನನಗೆ ನೀಡಿ. ಅವರ ಸರ್ವಾಂಗೀಣ ಅಭಿವೃದ್ಧಿಗೆ ಕೈಜೋಡಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರೊ. ಹುಸೇನ್ ಖಾನ್, ಪ್ರೊ. ಎಚ್.ಕೆ. ಭಟ್, ಪ್ರೊ. ಹಿತ್ತಲ್ಮನೆ ಮತ್ತು ರಾಜ್ಯ ಯೋಜನಾಧಿಕಾರಿ ಪ್ರತಿಭಾ ಉಪಸ್ಥಿತರಿದ್ದರು.

Leave a Reply

comments

Related Articles

error: