ದೇಶಮೈಸೂರು

‘ಅಸಿಕಾನ್-2016’ ಶಸ್ತ್ರ ಚಿಕಿತ್ಸೆಗಳ ನೇರ ಪ್ರಸಾರ: ಸಂವಾದ, ಚರ್ಚೆಯೊಂದಿಗೆ ಸಂದೇಹ ಬಗೆಹರಿಸಿಕೊಂಡ ಶಸ್ತ್ರ ಚಿಕಿತ್ಸಕರು

ಮೈಸೂರು ವಿವಿಯ ಮಾನಸ ಗಂಗೋತ್ರಿಯ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಆವರಣದಲ್ಲಿ ಡಿ.18ರ ವರೆಗೆ ನಡೆಯಲಿರುವ ರಾಷ್ಟ್ರೀಯ ಶಸ್ತ್ರ ಚಿಕಿತ್ಸಕರ ಸಮ್ಮೇಳನ ಅಸಿಕಾನ್-2016 ಸಮ್ಮೇಳನದಲ್ಲಿ ದೇಶ ನಾನಾ ಭಾಗದ ಶಸ್ತ್ರ ಚಿಕಿತ್ಸಕರು ಸೇರಿದಂತೆ ಸಾರ್ಕ್ ದೇಶಗಳ ಶಸ್ತ್ರಚಿಕಿತ್ಸಕರು ಭಾಗಿಯಾಗಿದ್ದಾರೆ.

ಸಮ್ಮೇಳನದ ಮೊದಲ ದಿನ ಡಿ.14ರಂದು ಬೆಳಗ್ಗೆಯಿಂದಲೇ ಶಸ್ತ್ರ ಚಿಕಿತ್ಸೆಗಳ ನೇರಪ್ರಸಾರವನ್ನು ಏರ್ಪಡಿಸಲಾಗಿತ್ತು. ದೇಶದ ಸುಮಾರು 6 ಸೂಪರ್‍ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರು ನಡೆಸುತ್ತಿರುವ 60 ಶಸ್ತ್ರ ಚಿಕಿತ್ಸೆಗಳನ್ನು ಬೃಹತ್ ಪರದೆಗಳ ಮೇಲೆ ಶಸ್ತ್ರ ಚಿಕಿತ್ಸಕರು ಹಾಗೂ ಸ್ನಾತಕೋತ್ತರ ಪದವೀಧರ ವಿದ್ಯಾರ್ಥಿಗಳು ವೀಕ್ಷಿಸಿ ತಜ್ಞರೊಂದಿಗೆ ಸಂವಾದ ನಡೆಸಿದರು. 6 ಕೊಠಡಿಗಳ ಬೇರೆ ಬೇರೆ ಪರದೆಗಳ ಮೇಲೆ ಶಸ್ತ್ರ ಚಿಕಿತ್ಸೆಗಳ ನೇರಪ್ರಸಾರವೂ ನಡೆಯುತ್ತಿದ್ದು ನೋಡುಗರ ಮೈ ರೋಮಾಂಚನಗೊಳಿಸಿತ್ತು.

ನೂತನವಾಗಿ ವೃತ್ತಿಗಿಳಿಯುವ ವಿದ್ಯಾರ್ಥಿಗಳಿಗೆ ಇಂತಹ ಸಮ್ಮೇಳನವು ಅತಿ ಉಪಯುಕ್ತವಾಗಿದೆ. ವಿನೂತನ ಹಾಗೂ ವಿಶೇಷ ಐಡಿಯಾಗಳನ್ನು ಪರಸ್ಪರರಲ್ಲಿ ವಿನಿಯೋಗಿಸುವುದರಿಂದ ಕೌಶಲ್ಯ ಜ್ಞಾನವೂ ವೃದ್ಧಿಸುವುದು ಎಂದು ಅಸಿಕಾನ್‍ನ ಕಾರ್ಯದರ್ಶಿ ಡಾ.ಸರ್ವೇಶ್ ರಾಜೇ ಅರಸ್ ತಿಳಿಸಿ, ಸಮ್ಮೇಳನದಲ್ಲಿ ಸಾರ್ಕ್‍ ಸೇರಿದಂತೆ ಯುಕೆ ಮತ್ತು ಯುಎಸ್ ಶಸ್ತ್ರ ಚಿಕಿತ್ಸಕರು ವೀಕ್ಷಿಸಿ ಸಂದೇಹಗಳನ್ನು ಸಂವಾದಗಳ ಮೂಲಕ ಬಗೆಹರಿಸಿಕೊಂಡಿದ್ದಾರೆ. ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಯೂ ಸೇರಿದಂತೆ ಬೆಂಗಳೂರಿನ ಟುಲಿಪ್, ಕೊಯಮತ್ತೂರಿನ ಜೆಇಎಂ, ಮುಂಬೈನ ಕೋಕಿಲಬೇಹನ್ ದೀರೂಬಾಯಿ ಆಸ್ಪತ್ರೆ, ನವದೆಹಲಿ, ಹೈದ್ರಾಬಾದ್ ಆಸ್ಪತ್ರೆಗಳಿಂದ ಶಸ್ತ್ರಚಿಕಿತ್ಸೆಗಳ ನೇರ ಪ್ರಸಾರ ಮಾಡಲಾಯಿತು ಎಂದು ತಿಳಿಸಿದರು.

ವೈದ್ಯಕೀಯ ರಂಗದಲ್ಲಾಗಿರುವ ತಾಂತ್ರಿಕ ಪ್ರಗತಿಯನ್ನು ಪರಿಚಯಿಸುವ ಉದ್ದೇಶವನ್ನು ಅಸಿಕಾನ್ ಸಮ್ಮೇಳನ ಹೊಂದಿದೆ. ಕ್ಲಿಷ್ಟ ಶಸ್ತ್ರ ಚಿಕಿತ್ಸೆಗಳಾದ ಹೊಟ್ಟೆ, ಕರುಳು, ಪಿತ್ತಕೋಶ, ಎದೆ, ತಲೆ ಮತ್ತು ಕುತ್ತಿಗೆ ಹಾಗೂ ಪಾದಗಳ ಹುಣ್ಣುಗಳ ಆಪರೇಷನ್‍ ನಡೆಸಲಾಯಿತು.  ಸ್ಥನ ಕ್ಯಾನ್ಸರ್ ಅಪರೇಷನ್ ಸೇರಿದಂತೆ ಮುಂಬೈನ ಡಾ.ಯುವರಾಜ್  ಹಾಗೂ ದೆಹಲಿಯ ಡಾ.ಅರುಣ್ ಪ್ರಾಸ್ ರೋಬೋಟಿಕ್ ಬಳಸಿ ಶಸ್ತ್ರ ಚಿಕಿತ್ಸೆಯ ನೇರ ಪ್ರಸಾರವನ್ನು ಮಾಡಲಾಯಿತು.

ಐದು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ 5000 ಶಸ್ತ್ರ ಚಿಕಿತ್ಸಕರು ಪಾಲ್ಗೊಂಡಿದ್ದಾರೆ. ಇಂದು (ಡಿ.15) ಸಂಜೆ 6ಕ್ಕೆ ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆ ದೊರೆಯಲಿದೆ.

Leave a Reply

comments

Related Articles

error: