ಕರ್ನಾಟಕಪ್ರಮುಖ ಸುದ್ದಿ

ಕಾವೇರಿ ಕಣಿವೆ ಜಲಾಶಯಗಳಲ್ಲಿ ಅರ್ಧಕ್ಕಿಂತ ಕಡಿಮೆ ನೀರು: ಸುಪ್ರೀಂ ಕೋರ್ಟ್‍ಗೆ ವಾಸ್ತವಾಂಶ ತಿಳಿಸಲು ರಾಜ್ಯ ಸರ್ಕಾರದ ನಿರ್ಧಾರ

ಬೆಂಗಳೂರು: ಕಾವೇರಿ ಕಣಿವೆ ಪ್ರದೇಶದ ಈ ಋತುವಿನಲ್ಲಿ ಮಳೆ ಅಭಾವವಿದ್ದು ಕಾವೇರಿ ವ್ಯಾಪ್ತಿಯ ಜಲಾಶಯಗಳಲ್ಲಿ ಅಗತ್ಯ ನೀರು ಸಂಗ್ರಹವಾಗಿಲ್ಲ. ಹಾಗಾಗಿ ತಮಿಳುನಾಡಿಗೆ ನೀರು ಬಿಡುಗಡೆ ಅಸಾಧ್ಯ ಎಂದು ಸುಪ್ರೀಂ ಕೋರ್ಟ್‍ಗೆ ಮನವರಿಕೆ ಮಾಡಿಕೊಡಲು ರಾಜ್ಯ ಸರ್ಕಾರ ಮಂಗಳವಾರ ನಿರ್ಧರಿಸಿದೆ.

ಸುದ್ದಿಗಾರರಿಗೆ ಈ ವಿಷಯ ತಿಳಿಸಲು ಮಾತನಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ. ಜಯಚಂದ್ರ ಅವರು, “ವಾಸ್ತವಾಂಶವನ್ನು ಸುಪ್ರೀಂ ಕೋರ್ಟ್‍ಗೆ ತಿಳಿಸಲಾಗುವುದು. ರಾಜ್ಯದ ಜಲಾಶಯಗಳಲ್ಲಿ ಕಡಿಮೆ ನೀರು ಸಂಗ್ರಹವಿದ್ದು, ಕರ್ನಾಟಕಕ್ಕೇ ನೀರಿನ ಅಭಾವ ಕಾಡುವ ಸಾಧ್ಯತೆ ಇದೆ. ಹೀಗಾಗಿ ನೀರು ಬಿಡುಗಡೆ ಸಾಧ್ಯವಿಲ್ಲ” ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಲಾಗುವುದು ಎಂದರು.

ಅತ್ತ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರೂ ಕಾನೂನು ಹೋರಾಟದ ದಾರಿ ಹಿಡಿದಿದ್ದು, ಮಧ್ಯಂತರ ತೀರ್ಪು ನೀಡುವಂತೆ ಕೋರಿ ಅರ್ಜಿ ಸಲ್ಲಿಸಲು ಸೂಚನೆ ನೀಡಿದ್ದಾರೆ. “ಕಾವೇರಿ ಜಲ ನ್ಯಾಯಾಧಿಕರಣದ ಅಂತಿಮ ತೀರ್ಪಿನಂತೆ ನೀರು ಬಿಡುಗಡೆ ಮಾಡಲು ಕರ್ನಾಟಕ ನಿರಾಕರಿಸಿದೆ. ಹೀಗಾಗಿ ಮಧ್ಯಂತರ ತೀರ್ಪು ನೀಡಿ ನೀರು ಬಿಡುಗಡೆ ಮಾಡಲು ಕರ್ನಾಟಕಕ್ಕೆ ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.

“ನೈಋತ್ಯ ಮಾನ್ಸೂನ್ ದುರ್ಬಲಗೊಂಡಿದ್ದರಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷಗಿಂತ ಕಡಿಮೆ ಮಳೆ ಆಗಿದೆ. ಹೀಗಾಗಿ ಕಾವೇರಿ ಕಣಿವೆಯ ನಾಲ್ಕೂ ಜಲಾಶಯಗಳಾದ ಹಾರಂಗಿ, ಹೇಮಾವತಿ, ಕೃಷ್ಣರಾಜಸಾಗರ ಮತ್ತು ಕಬಿನಿಯಲ್ಲಿ ನೀರಿನ ಸಂಗ್ರಹ ಶೇಕಡಾ 50 ಕ್ಕಿಂತ ಕಡಿಮೆ ಇದೆ. ಈ ನೀರು ಕಾವೇರಿ ಜಲಾನಯನ ಪ್ರದೇಶದ ನಗರ-ಪಟ್ಟಣಗಳ ಕುಡಿಯುವ ನೀರಿನ ಅಗತ್ಯವನ್ನು ಮಾತ್ರ ಪೂರೈಸಲು ಸಾಧ್ಯವಿದೆ. ಕಾವೇರಿ ಜಲನ್ಯಾಯಾಧಿಕರಣದ ಅಂತಿಮ ತೀರ್ಪಿನ ನೀರು ಹಂಚಿಕೆ ಪ್ರಕಾರ ನೀರು ಬಿಡುಗಡೆ ಮಾಡುವಂತೆ ತಮಿಳುನಾಡು ಕೇಳುತ್ತಿದೆ. ಕರ್ನಾಟಕಕ್ಕೆ ಕುಡಿಯುವ ನೀರಿನ ಕೊರತೆ ಇರುವಾಗ ತಮಿಳುನಾಡಿನ ಕೃಷಿಗೆ ಹೇಗೆ ನೀರು ಕೊಡಲು ಸಾಧ್ಯ? ಎಂದು ಪ್ರಶ್ನಿಸಿದ ಸಚಿವ ಜಯಚಂದ್ರ, ಸಂಕಷ್ಟದ ಸಂದರ್ಭದಲ್ಲಿ ನೀರು ಬಿಡುಗಡೆ ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಾಗುವುದು ಎಂದರು.

Leave a Reply

comments

Related Articles

error: