ಪ್ರಮುಖ ಸುದ್ದಿ

ಭಾರೀ ಮಳೆಗೆ ಹಳ್ಳದಲ್ಲಿ ಕೊಚ್ಚಿ ಹೋದ ವಿದ್ಯಾರ್ಥಿನಿ

ರಾಜ್ಯ(ಶಿವಮೊಗ್ಗ)ಜು.10:-  ಭಾರೀ ಮಳೆಗೆ ವಿದ್ಯಾರ್ಥಿನಿಯೋರ್ವಳು ಹಳ್ಳದಲ್ಲಿ ಕೊಚ್ಚಿ ಹೋದ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಯೋಗೇಂದ್ರ ಗೌಡ ಹಾಗೂ ಅನಿತಾ ದಂಪತಿಯ ಪುತ್ರಿ ಆಶಿಕಾ (14) ಕೊಚ್ಚಿಹೋದ ವಿದ್ಯಾರ್ಥಿನಿಯಾಗಿದ್ದು, ಈಕೆ ಗುಡ್ಡೇಕೆರೆ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಮಳೆಯಿಂದ ಸೋಮವಾರ ಶಾಲೆಗೆ ರಜೆ ಇರುವ ಸುದ್ದಿ ತಿಳಿಯದ ಆಶಿಕಾ ಶಾಲೆಗೆ ತೆರಳಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ದೊಡ್ಲುಮನೆ ಪ್ರದೇಶ ಬಳಿ ಇರುವ ಕಾಲು ಸೇತುವೆ ದಾಟುತ್ತಿದ್ದಾಗ ಆಕಸ್ಮಿಕವಾಗಿ ಹಳ್ಳಕ್ಕೆ ಬಿದ್ದು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾಳೆ ಎನ್ನಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ತಾಲೂಕು ಅಧಿಕಾರಿಗಳು ಕಾರ್ಯಾಚರಣೆಗೆ ಸಿದ್ಧತೆ ನಡೆಸಿಕೊಟ್ಟಿದ್ದಾರೆ. ತಹಶೀಲ್ದಾರ್ ಆನಂದಪ್ಪ ನಾಯಕ್ ಮಾತನಾಡಿ ,  ಆಶಿಕಾ ಮೃತದೇಹ ಪತ್ತೆಗಾಗಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಮುಳುಗು ತಜ್ಞರು ನಿರಂತರ ಶೋಧ ಕಾರ್ಯ ನಡೆಸಿದ್ದರು. ಆದರೆ ಕತ್ತಲು ಆವರಿಸಿದ್ದರಿಂದ ಶೋಧ ಕಾರ್ಯಾಚರಣೆ ನಿಲ್ಲಿಸಲಾಗಿದೆ. ನಾಳೆ ಬೆಳೆಗ್ಗೆಯಿಂದಲೇ ಪುನಃ ಕಾರ್ಯಾಚರಣೆ ಆರಂಭಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ಶಾಲಾ-ಕಾಲೇಜುಗಳಿಗೆ ರಜೆ

ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಆದರೆ ಇಂದು ಎಡೆಬಿಡದೆ ಮಳೆ ಮುಂದುವರಿದಿದ್ದರಿಂದ ಮಂಗಳವಾರ(ಜು.10) ರಜೆ ಘೋಷಣೆ ಮುಂದುವರಿಯಲಿದೆ ಎಂದು ತಹಶೀಲ್ದಾರ್ ಆನಂದಪ್ಪ ನಾಯಕ್ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: