ಮೈಸೂರು

ಕೇವಲ ನಾಲ್ಕೇ ನಾಲ್ಕು ಗಂಟೆ ಮನಸ್ಸಿಟ್ಟು ಓದಿದಲ್ಲಿ ಸಾಧನೆ ಸುಲಭ : ಡಾ.ಮೇಟಿ ರುದ್ರೇಶ್

ಮೈಸೂರು,ಜು.10:-  ಕೇವಲ ನಾಲ್ಕೇ ನಾಲ್ಕು ಗಂಟೆ ಮನಸ್ಸಿಟ್ಟು ಓದಿದಲ್ಲಿ ಸಾಧನೆ ಸುಲಭ ಎಂದು ಮೇರು ಐಎಎಸ್ ಮತ್ತು ಕೆಎಎಸ್ ಸ್ಟಡಿ ಸೆಂಟರ್ ನ  ಸಂಸ್ಥಾಪಕ ಡಾ.ಮೇಟಿ ರುದ್ರೇಶ್ ತಿಳಿಸಿದರು.

ಶ್ರೀನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ನಟರಾಜ ಸಭಾಭವನದಲ್ಲಿ ಟ್ರೈನಿಂಗ್ ಡೆವಲಪ್ ಮೆಂಟ್ & ಪ್ಲೇಸ್ ಮೆಂಟ್ ಸೆಲ್ ಹಾಗೂ ಮೇರು ಐಎಎಸ್ ಮತ್ತು ಕೆಎಎಸ್ ಸ್ಟಡಿ ಸೆಂಟರ್ ಧಾರವಾಡ ಇವರ ಸಹಯೋಗದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಂದು ದಿನದ ಕಾರ್ಯಾಗಾರದಲ್ಲಿಂದು ಪಾಲ್ಗೊಂಡು ಮಾತನಾಡಿದರು. ಬಿಎಡ್ ಓದಿದವರು ಟೀಚರ್ ಆಗಬೇಕು ಅಂದುಕೊಳ್ಳುತ್ತಾರೆ. ಪೊಲೀಸರನ್ನು ನೋಡಿದರೆ ಪೊಲೀಸ್ ಆಗಬೇಕು, ಜಿಲ್ಲಾಧಿಕಾರಿಗಳನ್ನು ನೋಡಿದರೆ ಜಿಲ್ಲಾಧಿಕಾರಿ ಹೀಗೆ ಎಲ್ಲವೂ ಆಗಬೇಕು ಅನಿಸುತ್ತದೆ. ಅನಿಸುವುದು ಸಹಜ, ಸರಳ. ಆದರೆ ಸಾಧನೆ ಕಷ್ಟ. ಕುಳಿತು ಓದಿದವರಿಗೆ ಸಾಧನೆ ಕಷ್ಟವಿಲ್ಲ. ನಾಲ್ಕು ತಾಸು ಓದುವವರು ಸಾಧನೆ ಮಾಡಬಹುದು. ಸಾಧನೆಗೆ ಜಾತಿ, ವಯಸ್ಸು, ಧರ್ಮ, ಬಣ್ಣ ಇಲ್ಲ . ಓದಬೇಕೆಂದು ಇಪ್ಪತ್ನಾಲ್ಕು ತಾಸು ಓದಬಾರದು. ಅದು ಹುಚ್ಚುತನದ ಪರಮಾವಧಿಯಾಗಲಿದೆ ಎಂದರು. ಕುವೆಂಪುರವರು ತಮ್ಮ ಕಲ್ಪನೆಯಲ್ಲಿ ಒಮ್ಮೆ ಸ್ವರ್ಗಕ್ಕೆ ಹೋಗುತ್ತಾರೆ. ನಾನು ಕರ್ನಾಟಕದ ಕುವೆಂಪು ಬಂದಿದೇನೆ ಬಾಗಿಲು ತೆರೆಯಿರಿ ಎನ್ನುತ್ತಾರಂತೆ ಬಾಗಿಲು ತೆರೆದಿಲ್ಲ. ನಾನು ರಾಮಾಯಣ ದರ್ಶನಂ ಮಹಾನ್ ಕೃತಿ ಬರೆದವನು ಬಂದಿದ್ದೇನೆ ಬಾಗಿಲು ತೆರೆಯಿರಿ ಎಂದರಂತೆ. ಆಗಲೂ ತೆರೆದಿಲ್ಲ, ಕೇಂದ್ರಸಾಹಿತ್ಯ, ಸೇರಿದಂತೆ ಹಲವು ಪ್ರಶಸ್ತಿ ಪಡೆದವನು ಬಂದಿದ್ದೇನೆ ಬಾಗಿಲು ತೆರೆಯಿರಿ ಎಂದರಂತೆ ಆಗಲೂ ತೆರೆದಿಲ್ಲ. ಕೊನೆಗೆ ಸಾಕಾಗಿ ನಾನು ಹೇಮಿ ಗಂಡ ಬಂದಿದ್ದೇನೆ ಬಾಗಿಲು ತೆರೆಯಿರಿ ಎಂದರಂತೆ ಆಗ ಬಾಗಿಲು ತೆರೆದುಕೊಂಡಿತಂತೆ. ಸ್ತ್ರೀ ಹೆಸರು ಹೇಳಿದ  ತಕ್ಷಣವೇ ಬಾಗಿಲು ತೆರೆದುಕೊಂಡಿದೆ. ಅಂದರೆ ಹೆಣ್ಣು ಮಕ್ಕಳಿಗೆ ಸಾಧನೆ ಮಾಡುವುದು ಗೊತ್ತು, ಸಾಧನೆ ಮಾಡಿಸುವುದೂ ಗೊತ್ತು, ಸಾಧನೆ ಮಾಡುವುದನ್ನು ತಡೆಯುವ ಶಕ್ತಿಯೂ ಇದೆ. ಹೆಣ್ಣು ಮನಸ್ಸು ಮಾಡಿದರೆ ಏನೆಲ್ಲ ಮಾಡಬಹುದೆನ್ನುವುದನ್ನು ವಿವರಿಸಿದರು. ಕೆಲವು ಕಾಲೇಜುಗಳಲ್ಲಿ 90%ಆದವರಿಗೆ ಪ್ರವೇಶಾತಿ ಎನ್ನುತ್ತಾರೆ. ಜಾಣರನ್ನು ತಗೊಂಡು ಜಾಣರನ್ನು ಮಾಡುವುದು ದೊಡ್ಡದಲ್ಲ. 40%ಆದವರನ್ನು ತಗೊಂಡು ಒಳ್ಳೆಯ ಫಲಿತಾಂಶ ಮಾಡಲು ಅವಕಾಶ ಮಾಡಿಕೊಡುವುದು ಬಹಳ ಮುಖ್ಯ ಎಂದರಲ್ಲದೇ ತಾನು ಎಸ್ ಎಸ್ ಎಲ್ ಸಿ ಇದ್ದಾಗ ನಡೆದ ಘಟನೆಯನ್ನು ನೆನಪಿಸಿಕೊಂಡರು. ನಮ್ಮ ಕ್ಲಾಸಿನಲ್ಲಿ ಒಟ್ಟು 53ಜನ ಇದ್ವಿ. ಎಲ್ಲರೂ ಫೇಲ್, ನಾನು ರಸ್ತೆಯಲ್ಲಿ ನಡೆದುಹೋಗುತ್ತಿದ್ದಾಗ ಮೇಷ್ಟ್ರು ಸಿಕ್ಕರು. ರಿಸಲ್ಟ್ ನೋಡಿದಿಯೇನೋ ಎಂದು ಕೇಳಿದರು. ಘಟಾನುಘಟಿಗಳೇ ಫೇಲ್ ಆಗಿದ್ದಾರೆ. ಇನ್ನು ನಾನು ಹೇಗೆ ಪಾಸ್ ಆಗಲು ಸಾಧ್ಯ ಅಂದುಕೊಳ್ಳುತ್ತಿದೆ. ನೀನು ಪಾಸಾಗಿದ್ದಿಯಲ್ಲೋ ಎಂದರು. ನನ್ನ 40% ಆಗಿತ್ತು. ಏನೂ ಅರಿಯದ ನನ್ನ ಮುಗ್ಧ ಅಮ್ಮ ನನ್ನ ಮಗ ರ್ಯಾಂಕ್ ಬಂದಿದ್ದಾನೆಂದು ಸಂಭ್ರಮಿಸಿದರು ಎಂದರಲ್ಲದೇ, 40 % ಆದವರೂ ಕೂಡ ಸಾಧನೆ ಮಾಡಬಲ್ಲರು ಎಂಬುದನ್ನು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲೆ ಡಾ. ಶಾರದ ಎಂ. ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಸಂಪಾದನೆ ಮಾಡಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಓದಿನಲ್ಲಿ ಮುಂದಿರುತ್ತಿದ್ದು, ಇಂತಹ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಂಜುನಾಥ್ ಮರಿಗೌಡ್ರು, ಮಹದೇವಸ್ವಾಮಿ ಎಂ,ಎಂ, ಪಾಲ್ಗೊಂಡಿದ್ದರು.

ಸಂಯೋಜಕ ಎಮ್.ಜಿ.ಲೋಕಾಶ್, ಉಪಪ್ರಾಂಶುಪಾಲ ಪ್ರಸಾದ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: