ಮೈಸೂರು

ಜೆಎಸ್‍ಎಸ್ ಅರ್ಬನ್ ಹಾತ್‍ ನಲ್ಲಿ ಗುಜರಾತ್ ಕರಕುಶಲ ಉತ್ಸವ : ನಾಳೆ ನಡೆಯಲಿದೆ ಗಾರ್ಭಾ ನೃತ್ಯ

ಮೈಸೂರು,ಜು.10:- ಹೆಬ್ಬಾಳು ಕೈಗಾರಿಕಾ ಪ್ರದೇಶ ಸುಂದರ ಪರಿಸರದಲ್ಲಿ ಕಾರ್ಯಾಚರಿಸುತ್ತಿರುವ ಜೆಎಸ್‍ಎಸ್ ಅರ್ಬನ್ ಹಾತ್‍ ನಲ್ಲಿ ಜುಲೈ 6ರಿಂದ ಗುಜರಾತ್ ಕರಕುಶಲ ಉತ್ಸವ 2018ದಲ್ಲಿ ಗುಜರಾತಿನ ಸಾಂಸ್ಕೃತಿಕ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ. ವಿಶೇಷ ಕರಕುಶಲ ವಸ್ತುಗಳ ನೈಜ ಪ್ರಾತ್ಯಕ್ಷಿಕೆಯೂ ನಡೆಯುತ್ತಿದೆ. ಕ್ರಿಯಾಶೀಲ ಕರಕುಶಲಕರ್ಮಿಗಳಿಂದ ನೇರವಾಗಿ ಗ್ರಾಹಕರ ಕೈಗೇ ಸಿಗುವ ಉತ್ಪನ್ನಗಳು ಅತ್ಯುತ್ಕೃಷ್ಟ ಗುಣಮಟ್ಟ ಹೊಂದಿವೆ.

ಗುಜರಾತ್ ರಾಜ್ಯದ ಪ್ರಾತಿನಿಧಿಕ ಪಟೋಲ ಸೀರೆ, ಬಾಂಧಿನಿ, ಬ್ಲಾಕ್ ಪ್ರಿಂಟ್, ಕಛ್‍ನ ಕಸೂತಿ, ಎಂಬ್ರಾಯ್ಡರಿ, ಕಛ್‍ನ ಮಿರರ್ ವರ್ಕ್, ಕಛ್‍ನ ಆಭರಣಗಳು, ಕೈಮಗ್ಗದ ಉತ್ಪನ್ನಗಳು, ಬೀಡ್ ವರ್ಕ್, ಮಡಕೆಗಳು, ಚನ್ಯಚೋಲಿ, ಚರ್ಮದ ಉತ್ಪನ್ನಗಳು, ಬೆಡ್‍ಷೀಟ್‍ಗಳು, ಕುಷನ್ ಕವರ್‍ಗಳು ಸೇರಿದಂತೆ ಕಸೂತಿ ಮತ್ತು ಕರಕುಶಲ ವಸ್ತುಗಳ ಬೃಹತ್ ಸಂಗ್ರಹವೇ ಮೈದಳೆದಿದೆ. ಗುಜರಾತ್‍ನ ಸಂಸ್ಕೃತಿಯನ್ನು ಅರಮನೆನ ಗರಿಯಾದ ಮೈಸೂರಿಗರಿಗೆ ನೀಡುವಲ್ಲಿ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ಅರ್ಬನ್ ಹಾತ್‍ನ ವಿಶಾಲ ಅಂಗಣದ 60 ಮಳಿಗೆಗಳಲ್ಲಿ ಕರಕುಶಲ ವಸ್ತುಗಳ ಸೊಬಗನ್ನು ಕಣ್ತುಂಬಿಸಿಕೊಳ್ಳಬಹುದು. ಇಚ್ಛೆಪಟ್ಟರೆ ಖರೀದಿಸಬಹುದು. ಅದಕ್ಕಿಂತ ಮಿಗಿಲಾಗಿ ಒಂದೇ ಸೂರಿನಡಿ ವೈವಿಧ್ಯಮಯ ಪರಿಕರಗಳು ಸಿಗುವುದು ವಿಶೇಷ.

ಮಣ್ಣಿನ ಪರಿಕರಗಳು

ಗುಜರಾತ್‍ನ ವೈಶಿಷ್ಟ್ಯಗಳಲ್ಲಿ ಒಂದಾದ ಕುಶಲಕರ್ಮಿಗಳ ಕೈಚಳಕದಲ್ಲಿ ಮಣ್ಣಿನಲ್ಲೂ ಹಲವಾರು ವಸ್ತುಗಳು ಮೈದಳೆದಿವೆ. ದೈನಂದಿನ ಬಳಕೆ ವಸ್ತುಗಳನ್ನು ಇರಿಸುವಂಥ ಮಣ್ಣಿನಿಂದ ತಯಾರಿಸಿದ ಪರಿಕರಗಳು ಗಮನ ಸೆಳೆಯುತ್ತವೆ. ಸಂಗೀತ ಉಪಕರಣಗಳ ಮಾದರಿಯಲ್ಲಿ ಇರುವ ಇವುಗಳ ಸೊಬಗನ್ನು ನೋಡುವುದೇ ಕಣ್ಣಿಗೆ ಹಬ್ಬ. ಎಲ್ಲ ಪರಿಕರಗಳನ್ನೂ ನೀರಿನಲ್ಲಿ ಸ್ವಚ್ಛಗೊಳಿಸಬಹುದಾಗಿದ್ದು, ಗುಣಮಟ್ಟದ ವಿಚಾರದಲ್ಲಿ ಅಂಜಿಕೆಯೇ ಮೂಡದು.

ಐಸ್‍ಕ್ರೀಂಗಾಗಿ ಮಣ್ಣಿನ ಬೌಲ್‍ಗಳು, ದೀಪದ ಕುಂಡಿಕೆಗಳು, ಗಣಪತಿಯ ಸಣ್ಣ ಮೂರ್ತಿಗಳು, ಮಣ್ಣು ಮತ್ತು ಮರ ಬಳಸಿ ಮಾಡಿರುವ ಕೀ ಹೋಲ್ಡರ್‍ಗಳು ಗಮನ ಸೆಳೆಯುತ್ತವೆ. ಕನಿಷ್ಠ 30 ರೂಪಾಯಿಗಳಿಂದ 300 ರೂಪಾಯಿ ಮೌಲ್ಯದ ಮಣ್ಣಿನ ಪರಿಕರಗಳು ಉತ್ಸವದ ಒಂದೇ ಮಳಿಗೆಯಲ್ಲಿವೆ.  ಇಂಡೋ ವೆಸ್ಟರ್ನ್ ಗೌನ್‍ಗಳು, ಕುರ್ತಾಗಳು, ಕುರ್ತಿಸ್‍ಗಳು ಲಭ್ಯವಿವೆ. ಡೆನಿಮ್ ಜೀನ್ಸ್‍ನ ಕುರ್ತಾಗಳೂ ಆಕರ್ಷಣೀಯವಾಗಿವೆ.

ತೋರಣಗಳ ಆಕರ್ಷಣೆ

ಗುಜರಾತ್‍ನ ಕುಶಲಕರ್ಮಿಗಳು ತಯಾರಿಸಿದ ತೋರಣಗಳು ಆಕರ್ಷಿಸುತ್ತಿದ್ದು, ಬಟ್ಟೆ, ಸ್ಪಂಜ್, ಮುತ್ತು, ಮಣಿಗಳಿಂದ ತಯಾರಿಸಿರುವ ವೈಶಿಷ್ಟ್ಯಪೂರ್ಣ, ಬಗೆ ಬಗೆಯ ವಿನ್ಯಾಸದ ತೋರಣಗಳು ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಜತೆಗೆ, ಕೀ ಚೈನ್‍ಗಳು ಕೂಡ ಬಗೆ ಬಗೆ ವಿನ್ಯಾಸದಲ್ಲಿ ಸಿಗುತ್ತಿವೆ. 400 ರೂಪಾಯಿಗಳಿಂದ ಆರಂಭಗೊಂಡು 3 ಸಾವಿರ ರೂಪಾಯಿ ವರೆಗಿನ ಮೌಲ್ಯದ ಆಕರ್ಷಕ ತೋರಣಗಳು ಲಭ್ಯವಿವೆ. ಅಲ್ಲದೆ, ಪೂಜೆಯ ತಟ್ಟೆಯ ಅಡಿಗೆ ಇಡುವಂಥ ರುಮಾಲುಗಳೂ ಇವೆ. ಮಳೆಗಾಲದ ಚಳಿಗೆ ಮೈಯನ್ನು ಬೆಚ್ಚಗಿಡುವ, ಗುಜರಾತ್‍ನ ಕುಶಲಕರ್ಮಿಗಳ ಕರಕೌಶಲದಿಂದ ಮೂಡಿಬಂದಿರುವ ಶಾಲ್‍ಗಳು, ಜಾಕೆಟ್‍ಗಳು ಕಂಬಳಿಗಳ ಬೃಹತ್ ದಾಸ್ತಾನು ಇದೆ.

ಕಛ್‍ನ ಪ್ರಸಿದ್ಧ ಸೀರೆಗಳು, ಆಗ್ರ್ಯಾನಿಕ ಕಾಲಾ ಕಾಟನ್ ಸೀರೆಗಳು, ಖಾದಿ ಕಾಟನ್ ವಸ್ತ್ರಗಳು ಬಾಬು ಬಾಯಿ ಅವರ ಮಳಿಗೆಯಲ್ಲಿವೆ. ಕನಿಷ್ಠ 400 ರೂಪಾಯಿ ಮೌಲ್ಯದ ದಿರಿಸುಗಳಿಂದ ಹಿಡಿದು 8000 ಸಾವಿರ ರೂಪಾಯಿ ವರೆಗಿನ ಮೌಲ್ಯದ ಬಟ್ಟೆಗಳ ಸಂಗ್ರಹವಿದೆ. ಮಿರರ್‍ಗಳನ್ನು ಅಳವಡಿಸಿರುವ ಕುರ್ತಾಗಳು, ಕೈಯಿಂದಲೇ ಮಾಡಿರುವ ಕುರ್ತಾಗಳು, ಪರ್ಸ್‍ಗಳು, ವ್ಯಾನಿಟಿ ಬ್ಯಾಗ್‍ಗಳು, ಆ್ಯಂಕ್ಲೆಟ್‍ಗಳು, ಮಿರರ್ ಆ್ಯಂಕ್ಲೆಟ್‍ಗಳು, ನೆಕ್ಲೆಸ್‍ಗಳೂ ಇವೆ. ಮರದಿಂದಲೇ ತಯಾರಿಸಿರುವ ಆಭರಣಗಳೂ ಇವೆ. ಗ್ರಾಹಕರಿಗೆ ದುಬಾರಿಯೆಂದೇ ಅನಿಸಿದ, ಅತಿ ಕಡಿಮೆ ಬೆಲೆಗೆ ಉತ್ಕøಷ್ಟ ಗುಣಮಟ್ಟದ ವಸ್ತುಗಳು ಅರ್ಬನ್ ಹಾತ್‍ನ ಗುಜರಾತ್ ಕರಕುಶಲ ಉತ್ಸವದಲ್ಲಿ ಲಭ್ಯವಿವೆ.

ಬಂಜಾರ ಆಭರಣಗಳು

ಹಳೆಯದ ಕಾಲದ ಆಭರಣಗಳು ಎಂದರೆ ಇಂದಿನ ಫ್ಯಾಷನ್ ಪ್ರಿಯರಿಗೆ ಅಚ್ಚುಮೆಚ್ಚು. ಅವುಗಳು ಸಿಗುವುದೇ ಅಪರೂಪ. ಅಲ್ಲದೆ, ಅವುಗಳು ಸಿಗುವುದೂ ಅಪರೂಪ ಎಂಬ ಆರೋಪವೂ ಇದೆ. ಆದರೆ ಈ ಮೇಳದಲ್ಲಿ ಅಂಥ ಹಲವಾರು ಮಳಿಗೆಗಳಿದ್ದು, ಒಂದಕ್ಕೊಂದು ವೈಶಿಷ್ಟ್ಯಪೂರ್ಣವಾದ ಆಭರಣಗಳನ್ನು ಪ್ರದರ್ಶಿಸುತ್ತಿವೆ. ಬಂಜಾರ ಶೈಲಿಯ ಆಭರಣಗಳು, ಬೀಡ್ ವರ್ಕ್ ಆಭರಣಗಳು, ಬ್ರಾಸ್ಲೆಟ್‍ಗಳು, ನೆಕ್ಲೆಸ್‍ಗಳು ಇವೆ. ಲಂಬಾಣಿ ಆಭರಣಗಳು, ಉಡುಪುಗಳಿಗೆ ಹಾಕುವ ಅಲಂಕಾರಿಕ ಪರಿಕರಗಳು, ತುರ್ಕಿಸ್ಥಾನ್, ಅಘ್ಘಾನಿಸ್ತಾನದ ಆಭರಣಗಳು, ಮುತ್ತುಗಳಿಂದ ತಯಾರಿಸಿರುವ ಬೀಸಣಿಕೆಗಳೂ ಮೇಳಕ್ಕೆ ಮೆರುಗು ನೀಡಿವೆ. ತೆಂಗಿನ ಚಿಪ್ಪು, ನಾರಿನಿಂದ ತಯಾರಿಸಿರುವ ಅಲಂಕಾರಿಕ ವಸ್ತುಗಳೂ ಮೇಳದಲ್ಲಿ ಸ್ಥಾನ ಪಡೆದಿವೆ.

ಮಣ್ಣಿನ ಪಾತ್ರೆಗಳಲ್ಲಿ ವರ್ಲಿ ಕಲೆ

ಕಲೆಗೆ ಎಲ್ಲೆಲ್ಲೂ ನೆಲೆಯಿದೆ ಎಂಬ ಮಾತಿನಂತೆ ಗುಜರಾತ್‍ನ ಕುಶಲಕರ್ಮಿಗಳು ಮಣ್ಣಿ ಪಾತ್ರೆಗಳ ಮೇಲೂ ಕಲೆಯನ್ನು ಜೀವಂತಗೊಳಿಸಿದ್ದಾರೆ. ಮಣ್ಣಿನ ಕಪ್‍ಗಳು, ಮಗ್‍ಗಳು, ಜಗ್‍ಗಳು, ಕೆಟಲ್‍ಗಳಲ್ಲಿ ವರ್ಲಿಕಲೆಯನ್ನು ಮೂಡಿಸಿದ್ದಾರೆ. ರೇಖಾ ಗಿರೀಶ್ ಗುಪ್ತಾ ಅವರು ಮಣ್ಣಿನಿಂದಲೇ ಪರಿಕರಗಳನ್ನು ವಿಶಿಷ್ಟವಾಗಿ ತಯಾರಿಸುತ್ತಿದ್ದಾರೆ. ಶ್ರೇಷ್ಠ ಕಲೆಯನ್ನು ನಶಿಸಲು ಬಿಡಬಾರದು ಎಂಬುದು ಅವರ ಕಳಕಳಿ. ಅವರ ಬಳಿ 400 ರೂಪಾಯಿಗಳಿಂದ 1 ಸಾವಿರ ರೂಪಾಯಿ ಮೌಲ್ಯದ ವರೆಗಿನ ಮಣ್ಣಿನ ಪರಿಕರಗಳು ಲಭ್ಯವಿವೆ. ಅಲ್ಲದೆ, ಮರದಿಂದಲೇ ತಯಾರಿಸಿರುವ ಗಡಿಯಾರವೂ ಇದೆ.

ಸಂಬಾರ ಪದಾರ್ಥಗಳಿಂದಲೂ ಆಭರಣ

ಗುಜರಾತ್‍ನ ಕರಕುಶಲ ಕರ್ಮಿಗಳ ಕೈಯಲ್ಲಿ ಸಂಬಾರ ಪದಾರ್ಥಗಳೂ ಆಭರಣಗಳಾಗಿ ಮೈದಳೆಯುತ್ತವೆ. ಸ್ಪೈಸ್ ಆರ್ಟ್ ಜ್ಯೂವೆಲ್ಲರಿ ಎಂಬ ಹೆಸರಿನಿಂದ ಕರೆಸಿಕೊಳ್ಳುವ ಈ ಕಲೆ ಗಮನ ಸೆಳೆಯುತ್ತದೆ.

ಬಿದಿರಿನ ಪರಿಕರಗಳು

ಬಿದಿರು ಮನುಷ್ಯ ಜೀವನಕ್ಕೆ ಹಾಸುಹೊಕ್ಕಾಗಿರುವ ಪ್ರಕೃತಿಯ ಕೊಡುಗೆ. ಬಿದಿರಿನಿಂದ ಯಾವೆಲ್ಲ ವಸ್ತುಗಳನ್ನು ತಯಾರಿಸಲು ಸಾಧ್ಯವಿದೆ ಎಂಬುದರ ಅರಿವಾಗಬೇಕಾದರೆ ಮೇಳಕ್ಕೆ ಭೇಟಿ ನೀಡಲೇ ಬೇಕು. ಪೆನ್‍ಸ್ಟ್ಯಾಂಡ್, ಹೂದಾನಿಗಳು, ಬೀಸಣಿಕೆಗಳು, ಲ್ಯಾಂಪ್ ಹೋಲ್ಡರ್‍ಗಳು, ಫೈಲ್‍ಗಳನ್ನೂ ಕುಶಲಕರ್ಮಿಗಳು ತಯಾರಿಸಿದ್ದಾರೆ.

ಸಾವಯವ ಆಹಾರ

ಮೇಳದಲ್ಲಿ ಕೇವಲ ದೇಹಸೌಂದರ್ಯವನ್ನು ವೃದ್ಧಿಸುವ, ಮನೆಯ ಅಂದವನ್ನು ಹೆಚ್ಚಿಸುವ ಪರಿಕರಗಳೇ ಇರುತ್ತಿದ್ದವು. ಆದರೆ ಈ ಬಾರಿ ಶಿವ್‍ಲಾಲ್ ಪೂಜಾರ ಅವರ ಮಳಿಗೆಯಲ್ಲಿ ಹಲವಾರು ವೈಶಿಷ್ಟ್ಯಪೂರ್ಣ ವಸ್ತುಗಳು ಸಿಗುತ್ತವೆ. ಪ್ರಾಕೃತಿಕ ಮೂಲಗಳಿಂದ, ಸಸ್ಯಜನ್ಯ ವಸ್ತುಗಳಿಂದ ತಯಾರಿಸಿರುವ ಹಲವಾರು ಔಷಧೀಯ ಗುಣ ಹೊಂದಿರುವ ವಸ್ತುಗಳು ಲಭ್ಯ ಇವೆ. ಅಗಸೆ ಬೀಜ, ವಿವಿಧ ಬಗೆಯ ಪಾನೀಯಗಳು, ಹರ್ಬಲ್ ಸ್ಪ್ರೇ, ಹೇರ್ ಪ್ಯಾಕ್‍ಗಳು, ಸ್ಟೀವಿಯ, ನೈಸರ್ಗಿಕ ನೋವು ನಿವಾರಕಗಳು, ಸಂಜೀವಿನಿ ಚೂರ್ಣ, ಸೊಳ್ಳೆ ನಿವಾರಕಗಳು ಸೇರಿದಂತೆ ಹಲವಾರು ಬಗೆಯ ಔಷಧೀಯ ಗಿಡಮೂಲಿಕೆಗಳು ಸಿಗುತ್ತಿವೆ.

ತರಹೇವಾರಿ ಖಾದ್ಯ

ಉತ್ಸವದ 60 ಮಳಿಗೆಗಳನ್ನು ನೋಡುತ್ತಾ ಹಸಿವಾದರೆ ಸೊಗಸಾದ ಖಾದ್ಯಗಳೂ ಲಭ್ಯವಿವೆ. ಗೋಪಾಲ್ ಶರ್ಮಾ ಅವರ ವೈಷ್ಣೋದೇವಿ ಕೆಟರರ್ಸ್ ಮಳಿಗೆಯಲ್ಲಿ ಬಗೆಬಗೆಯ, ಬಿಸಿ ಬಿಸಿ ಖಾದ್ಯಗಳು ಮೇಳದ ಅವಧಿಯಲ್ಲಿ ಸಿಗುತ್ತವೆ. ಪಲಾವ್, ಟೀ, ಪೂರಿ ಸಬ್ಜಿ, ದೋಕ್ಲಾ, ಸಮೋಸಾ ಕೂಡ ಲಭ್ಯ ಇದೆ.  ಜುಲೈ 15ರವರೆಗೆ ಉತ್ಸವ ನಡೆಯಲಿದೆ.

 

ಜುಲೈ   11 ರಂದು ಸಂಜೆ 6.30  ಕ್ಕೆ ಅರ್ಬನ್ ಹಾತ್‍ನ ಆವರಣದಲ್ಲಿ ಸಂಭ್ರಮದ ಗರ್ಭಾ ನೃತ್ಯ ನಡೆಯಲಿದೆ.  (ಜಿ.ಕೆ,ಎಸ್.ಎಚ್)

Leave a Reply

comments

Related Articles

error: