ಮೈಸೂರು

ಪಾಲಿಕೆಯಲ್ಲಿ 4ನೇ ರಾಜ್ಯ ಹಣಕಾಸು ಆಯೋಗದ ಸಮಾಲೋಚನಾ ಸಭೆ

4ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ.ಜಿ. ಚಿನ್ನಸ್ವಾಮಿ ಅಧ್ಯಕ್ಷತೆಯಲ್ಲಿ ನಗರಪಾಲಿಕೆಯ ಸಭಾಂಗಣದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ನಗರಕ್ಕೆ ಸಂಬಂಧಿಸಿದ ಸಮಸ್ಯೆಗಳು, ಅನುದಾನ ಬಿಡುಗಡೆಯಲ್ಲಿ ತಾರತಮ್ಯ, ಕುಡಿಯುವ ನೀರಿನ ಸಮಸ್ಯೆ, ತೆರಿಗೆ ಸಂಗ್ರಹ, ಸೇರಿದಂತೆ ವಿವಿಧ ಸಮಸ್ಯೆಗಳನ್ನು ಚರ್ಚಿಸಲಾಯಿತು.

ಈ ವೇಳೆ ಮಾತನಾಡಿದ ಮಾಜಿ ಮೇಯರ್ ಸಂದೇಶ್ ಸ್ವಾಮಿ, ರಾಜ್ಯದ ಪ್ರಮುಖ ನಗರಗಳಲ್ಲಿ ಮೈಸೂರು ಕೂಡ ಒಂದು. ಬೆಂಗಳೂರನ್ನು ಹೊರತುಪಡಿಸಿದರೆ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಮೈಸೂರು 2ನೇ ಸ್ಥಾನದಲ್ಲಿದೆ. ಅಲ್ಲದೆ ಸ್ವಚ್ಛತೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದು ಪ್ರವಾಸೋದ್ಯಮದಲ್ಲೂ ಮುಂಚೂಣಿಯಲ್ಲಿದೆ. ಆದರೆ, ಸರ್ಕಾರ ಅನುದಾನ ಬಿಡುಗಡೆಯಲ್ಲಿ ಮಾತ್ರ ತಾರತಮ್ಯ ಮಾಡುತ್ತಿದೆ. ಯಾವ ಮಾನದಂಡಗಳ ಆಧಾರದ ಮೇಲೆ ಅನುದಾನ ಬಿಡುಗಡೆ ಮಾಡುತ್ತಿದೆಯೋ ತಿಳಿದಿಲ್ಲ. ಇದರಿಂದ ನಗರಕ್ಕೆ ಪ್ರೋತ್ಸಾಹ ಕಡಿಮೆಯಾಗಿ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಆರೋಪಿಸಿದರು.

ನಗರದ ಸ್ವಚ್ಛತೆ ಸೇರಿದಂತೆ ಎಲ್ಲ ಕೆಲಸವನ್ನು ತೆರಿಗೆ ಹಣದಿಂದಲೇ ಮಾಡಬೇಕಿದ್ದು, ಪೌರ ಕಾರ್ಮಿಕರ ಸಂಬಳವನ್ನೂ ಇದೇ ಹಣದಿಂದಲೇ ನೀಡುತ್ತಿದ್ದೇವೆ. ಇದರಿಂದ ಸಂಗ್ರಹವಾದ ಹಣದಲ್ಲಿ ಅರ್ಧಕ್ಕಿಂತ ಹೆಚ್ಚು ಹಣ ಖರ್ಚಾಗುತ್ತಿದೆ. ಜತೆಗೆ ಶೇ.60 ರಷ್ಟು ತೆರಿಗೆ ಸಂಗ್ರಹವಾಗುತ್ತಿಲ್ಲ. 100 ಕೋಟಿ ರೂ. ನೀರಿನ ಬಿಲ್ ಬಾಕಿ ಇದೆ. ಇದೆಲ್ಲದರಿಂದ ನಗರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಆಗುತ್ತಿಲ್ಲ. ಪಾಲಿಕೆಗೆ ಪ್ರಧಾನಿ, ಮುಖ್ಯಮಂತ್ರಿಯಂತರ ಗಣ್ಯರು ಭೇಟಿ ನೀಡಿದರೆ ವಿಶೇಷ ಅನುದಾನ ನೀಡುತ್ತಾರೆ. ಆದರೆ, ನಗರಕ್ಕೆ ಮಾತ್ರ ನೀಡುತ್ತಿಲ್ಲ. ಹಣಕಾಸು ಆಯೋಗದಿಂದ ಬಿಡುಗಡೆಯಾದ ಹಣ ಸರಿಯಾದ ಸಮಯಕ್ಕೆ, ಪೂರ್ಣ ಪ್ರಮಾಣದಲ್ಲಿ ಬಿಡುಗಡೆಯಾಗುತ್ತಿಲ್ಲ. ಇಂತಹ ತಾರತಮ್ಯ ಯಾಕೆ? ಎಂದು ಪ್ರಶ್ನಿಸಿದರು.

ಈ ವೇಳೆ ಮಾತನಾಡಿದ ಮಾಜಿ ಮೇಯರ್ ಹೆಚ್.ಎನ್.ಶ್ರೀಕಂಠಯ್ಯ, ಹಣಕಾಸು ಆಯೋಗದ ಅನುದಾನ ಬಿಡುಗಡೆಗೂ ಮೊದಲು ಶಾಶ್ವತ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಬೇಕಾದ ಕ್ಷೇತ್ರಗಳನ್ನು ಗುರುತಿಸಬೇಕು. ಆಗ ಹಣದ ಸದ್ವಿನಿಯೋಗವಾಗುತ್ತದೆ. ರಾಜ್ಯದಲ್ಲಿ ಸಂಪನ್ಮೂಲ ಕ್ರೂಢೀಕರಣದಲ್ಲಿ ಮಂಗಳೂರಿನ ನಂತರದ ಸ್ಥಾನದಲ್ಲಿ ಮೈಸೂರಿದ್ದರೂ ಹಲವಾರು ಶಾಶ್ವತ ಅಭಿವೃದ್ಧಿ ಯೋಜನೆಗಳು ಬಾಕಿ ಇವೆ. ನಗರದಲ್ಲಿ ಸುಮಾರು 34 ಸಾವಿರ ಮಂದಿ ಬಾಡಿಗೆ ಮನೆಯಲ್ಲಿ ವಾಸವಿದ್ದು ಅವರಿಗೆ ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಿಕೊಡಬೇಕು. ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ನಗರವನ್ನು ಇಕೋ ಫ್ರೆಂಡ್ಲಿ ನಗರವಾಗಿಸಲು ನೆರವಾಗಬೇಕು. ಪ್ರತಿನಿತ್ಯ ಸುಮಾರು 400 ಟನ್ ಘನತ್ಯಾಜ್ಯ ಸಂಗ್ರಹವಾಗುತ್ತಿದ್ದು ನಿರ್ವಹಣೆ ಕಷ್ಟವಾಗುತ್ತಿದೆ. ಹಾಗಾಗಿ ನೂತನವಾಗಿ ಮತ್ತೊಂದು ಕಸ ವಿಲೇವಾರಿ ಘಟಕ ಆರಂಭಿಸಲು ಜಾಗದ ಅವಶ್ಯಕತೆಯಿದ್ದು ನಗರದಿಂದ 15-20 ಕಿ.ಮೀ. ದೂರದಲ್ಲಿ ಖರೀದಿ ಮಾಡಿ ತ್ಯಾಜ್ಯ ನಿರ್ವಹಣೆ ಮಾಡಲು ಅನುದಾನ ಬಿಡುಗಡೆ ಮಾಡಬೇಕು ಎಂದು ತಿಳಿಸಿದರು.

ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಮಾತನಾಡಿ, ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆಯಿಲ್ಲ. ಆದರೆ, ಡಿ ದರ್ಜೆ ನೌಕಕರು, ಪೌರ ಕಾರ್ಮಿಕರ ಕೊರತೆಯಿದೆ. ಇದರಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಸ್ತಾಂತರವಾಗಿರುವ ಬಡಾವಣೆಗಳನ್ನೂ ಪಾಲಿಕೆಯೇ ನೋಡಿಕೊಳ್ಳುತ್ತಿರುವುದರಿಂದ ನಿರ್ವಹಣೆ ತುಂಬಾ ಕಷ್ಟವಾಗುತ್ತಿದೆ. ಹಾಗಾಗಿ, ಹೆಚ್ಚುವರಿ ಪೌರ ಕಾರ್ಮಿಕರನ್ನು ನೇಮಿಸಿ ಅವರಿಗೆ ಸರ್ಕಾರದಿಂದಲೇ ವೇತನ ನೀಡಿದರೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಆಯೋಗದ ಅಧ್ಯಕ್ಷ ಸಿ.ಜಿ. ಚಿನ್ನಸ್ವಾಮಿ, ಹಣಕಾಸು ಶಿಫಾರಸಿನ ಬಗ್ಗೆ ವಾಸ್ತವಾಂಶ ತಿಳಿಯಲು, ಅಹವಾಲು ಸ್ವೀಕರಿಸಲು, ಹಣಕಾಸು ವಿಕೇಂದ್ರೀಕರಣಕ್ಕಾಗಿ ಖರ್ಚು ವೆಚ್ಚದ ಆಧಾರದ ಮೇಲೆ ಅನುದಾನ ಬಿಡುಗಡೆ ಮಾಡುತ್ತಿದ್ದು, ಈಗಾಗಲೇ ಪ್ರಶ್ನಾವಳಿಗಳನ್ನು ಕಳುಹಿಸಲಾಗಿದೆ. 15 ದಿನಗಳ ಒಳಗೆ ಆಡಳಿತ ಅನುಮೋದನೆ ಪಡೆದು ನಮಗೆ ಕಳುಹಿಸಿದರೆ ನಾವು ವರದಿ ಆಧಾರದ ಮೇಲೆ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ ಎಂದು ಹೇಳಿದರು.

ಸಭೆಯಲ್ಲಿ ಆಯೋಗದ ಸದಸ್ಯರಾದ ಹೆಚ್.ಡಿ. ಅಮರ್‌ನಾಥ್, ಶಶಿಧರ್, ಪಾಲಿಕೆ ಆಯುಕ್ತ ಜಗದೀಶ್, ಮಾಜಿ ಮೇಯರ್‌ಗಳಾದ ಪುರುಷೋತ್ತಮ್, ಆರ್.ಲಿಂಗಪ್ಪ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Leave a Reply

comments

Related Articles

error: