ಮೈಸೂರು

ಮೂಲಭೂತ ಸೌಕರ್ಯಗಳ ಕೊರತೆ: ಬೆಳಕು ಸಂಸ್ಥೆಯಿಂದ ಜೆ.ಪಿ.ನಗರದಲ್ಲಿ ಸಹಿ ಸಂಗ್ರಹ ಅಭಿಯಾನ

ಮೈಸೂರಿನ ಪ್ರತಿಷ್ಠಿತ ಸುಶಿಕ್ಷಿತರ ಬಡಾವಣೆಗಳಲ್ಲಿ ಒಂದಾದ ಜೆ.ಪಿ.ನಗರ ಬಡಾವಣೆಯು ಮೈಸೂರು ಮಹಾನಗರ ಪಾಲಿಕೆಯ 12ನೇ ವಾರ್ಡ್‌ನ ವ್ಯಾಪ್ತಿಗೆ ಒಳಪಟ್ಟಿದ್ದು, ಇದು ಅಭಿವೃದ್ಧಿ ಹೊಂದದೆ ತೀರಾ ಹದಗೆಟ್ಟ ರಸ್ತೆಗಳು, ನಿರ್ವಹಣೆ ಇಲ್ಲದ ಉದ್ಯಾನ ವನಗಳು, ಪೊದೆಗಳಿಂದ ತುಂಬಿರುವ ಖಾಲಿ ನಿವೇಶನಗಳು, ಕತ್ತಲೆ ರಸ್ತೆಗಳು ಈ ವಾರ್ಡ್‌ನಲ್ಲಿ ಎಲ್ಲಂದರಲ್ಲಿ ಕಾಣುವಂತಾಗಿದೆ. ಇದರ ಬಗ್ಗೆ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಗಮನಹರಿಸದಿರುವುದು ನಗರ ಪಾಲಿಕೆಯ ಕಾರ್ಯವೈಖರಿಗೆ ಕನ್ನಡಿ ಹಿಡಿದಂತಾಗಿದೆ.

ಇದೇ ವಾರ್ಡ್‌ನಿಂದ ನಗರ ಪಾಲಿಕೆಯ ಸದಸ್ಯರಾಗಿ ಆಯ್ಕೆಯಾದ ಬಿ.ಎಲ್. ಭೈರಪ್ಪನವರು ಮಹಾಪೌರರಾಗಿ ಆಯ್ಕೆಯಾದಾಗ ಈ ವಾರ್ಡ್‌ ಜನತೆ ನಮ್ಮ ವಾರ್ಡ್‌ನ ಸದಸ್ಯರು ಮಹಾಪೌರರಾಗಿದ್ದಾರೆ. ಇನ್ನು ಮುಂದೆ ನಮ್ಮ ಬಡಾವಣೆಯ ಸಮಸ್ಯೆಗಳೆಲ್ಲಾ ನಿವಾರಣೆಯಾಗಿ ಮಾದರಿ ಬಡಾವಣೆಯಾಗುವುದು ನಿಶ್ಚಿತ ಎಂದು ಕನಸು ಕಂಡಿದ್ದರು. ಆದರೆ ಆದದ್ದೇ ಬೇರೆ. ಬಡಾವಣೆಯಲ್ಲಿ ಸಮಸ್ಯೆಯ ಮಹಾಪೂರವೇ ಇದ್ದು, ಇದನ್ನು ಮನಗಂಡು ಮೈಸೂರಿನ ಬೆಳಕು ಸಂಸ್ಥೆಯ ವತಿಯಿಂದ ಮಾಜಿ ಮಹಾಪೌರರಾದ ಬಿ.ಎಲ್ ಬೈರಪ್ಪನವರಿಗೆ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ, ಬಡಾವಣೆಯ ನಾಗರಿಕರಿಗೆ ಆಗಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಒತ್ತಾಯಿಸಿ ಗುರುವಾರ ಬೆಳಗ್ಗೆ 11 ಗಂಟೆಗೆ ಜೆ.ಪಿ. ನಗರ ಬಡಾವಣೆಯ ಡಿ.ಬ್ಲಾಕ್ ಕೊನೆಯ ಬಸ್‌ನಿಲ್ದಾಣದಿಂದ ಪ್ರಾರಂಭಿಸಿ ಸಾರ್ವಜನಿಕರ ಮನೆ ಮನೆಗೆ ತೆರಳಿ ಸಹಿ ಸಂಗ್ರಹ ಅಭಿಯಾನ ಮಾಡುವ ಮೂಲಕ ಮನವಿ ಸಲ್ಲಿಸಲಾಯಿತು.

ಜೆ.ಪಿ. ನಗರ ನಿವಾಸಿಗಳ ಬೇಡಿಕೆಗಳು:

  • ಈ ವಾರ್ಡ್‌ನಲ್ಲಿ ಹದಗೆಟ್ಟಿರುವ 40ಕ್ಕೂ ಹೆಚ್ಚು ಅಡ್ಡರಸ್ತೆಗಳಿಗೆ ಶೀಘ್ರವೇ ಡಾಂಬರೀಕರಣ ಮಾಡಿಸಬೇಕು.
  • ಬಡಾವಣೆಗೆ ಸಂಬಂಧಿಸಿದ ಉದ್ಯಾನವನಗಳಲ್ಲಿ ಬೆಳೆದುನಿಂತಿರುವ ಪೊದೆಗಳನ್ನು ತೆಗೆಸಿ ಯಾವುದೇ ಅನೈತಿಕ ಚಟುವಟಿಕೆಗಳು ನಡೆಯದಂತೆ ಸೂಕ್ತ ಭದ್ರತೆ ಒದಗಿಸಬೇಕು. ನಿವಾಸಿಗಳು ಹಾಗೂ ಮಕ್ಕಳು ಇಲ್ಲಿ ವಾಯುವಿಹಾರಕ್ಕೆ ಅನುವಾಗುವಂತೆ ಸೌಕರ್ಯ ಕಲ್ಪಿಸಬೇಕು.
  • ಇಲ್ಲಿ ಸುಮಾರು 200 ಕ್ಕೂ ಹೆಚ್ಚು ಖಾಲಿನಿವೇಶನಗಳಿದ್ದು, ಅದರಲ್ಲಿ ಗಿಡಗಂಟೆಗಳು ಬೆಳೆದು ವಿಷಜಂತುಗಳು ಹೆಚ್ಚಾಗುತ್ತಿದೆ. ಇದರಿಂದ ನಿವೇಶನದ ಅಕ್ಕ ಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು, ಅದನ್ನು ಶೀಘ್ರದಲ್ಲಿ ತೆರವುಗೊಳಿಸಿ ನಿವೇಶನದ ಮಾಲೀಕರಿಗೆ ಸೂಕ್ತ ಕಾನೂನಿನಂತೆ ಪಾಲಿಕೆಯ ವತಿಯಿಂದ ನೋಟೀಸ್ ಜಾರಿಗೊಳಿಸಬೇಕು.
  • ಹಲವಾರು ಅಡ್ಡರಸ್ತೆಗಳಲ್ಲಿ ಹಾಗೂ ಜನಸಂದಣಿ ವಿರಳವಾಗಿರುವ ಸ್ಥಳಗಳಲ್ಲಿ ಬೀದಿ ದೀಪವನ್ನು ಅಳವಡಿಸಬೇಕು. ಈ ಮೂಲಕ ಕಳ್ಳಕಾಕರ ಕೃತ್ಯಗಳನ್ನು ತಡೆಗಟ್ಟಬೇಕು.
  • ಎಕ್ಸ್ಎಲ್ ಪ್ಲಾಂಟ್‌ನಿಂದ ಬರುತ್ತಿರುವ ದುರ್ವಾಸನೆಯನ್ನು ತಡೆಗಟ್ಟಬೇಕು ಎಂದು ಮನವಿಯನ್ನು ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ಮೈಸೂರು ವಿಭಾಗದ ಸಹ ಪ್ರಭಾರಿಗಳಾದ ಫಣೀಶ್, ಬೆಳಕು ಸಂಸ್ಥೆಯ ನಗರ ಸಂಚಾಲಕ ಕೆ.ಎಂ. ನಿಶಾಂತ್, ಜೆ.ಪಿ. ನಗರದ ನಿವಾಸಿಗಳು ಹಾಗೂ ಮುಖಂಡರಾದ ದೇವರಾಜೇಗೌಡ, ನಾಗರಾಜ್ (ಟಿವಿಎಸ್), ಗುರುಬಸಪ್ಪ, ಪರಿಕ್ಷಿತ್ ಅರಸ್, ಬೆಳಕು ಸಂಸ್ಥೆಯ ಎಂ. ಅಕ್ಷಯ್, ರಿತೇಶ್, ವಸಿಷ್ಠ, ದಿಲೀಪ್, ಆದಿತ್ಯ, ರಕ್ಷಿತ್, ಧನುಶ್, ಮತ್ತಿತರು ಉಪಸ್ಥಿತರಿದ್ದರು.

Leave a Reply

comments

Related Articles

error: