ಮೈಸೂರು

ಉಚಿತವಾಗಿ ಮೇವು ವಿತರಿಸಿ: ಗ್ರಾಮಸ್ಥರಿಂದ ಮನವಿ

ಮೈಸೂರು ತಾಲೂಕಿನ ಜಯಪುರ ಹಾಗೂ ಬೀರಿಹುಂಡಿ ಹೋಬಳಿಯಲ್ಲಿ ತೆರೆಯಲಾಗಿರುವ ಮೇವು ವಿತರಣಾ ಕೇಂದ್ರಕ್ಕೆ ಶಾಸಕ ಜಿ.ಟಿ. ದೇವೇಗೌಡ ಅವರು ಗುರುವಾರದಂದು ಚಾಲನೆ ನೀಡಿದರು.

ಜಯಪುರ ಕಾರ್ಯಕ್ರಮದಲ್ಲಿ ಹಾಜರಿದ್ದ ರೈತರು ರಾಸುಗಳಿಗೆ ಹುಲ್ಲನ್ನು ಮೇವು ಬ್ಯಾಂಕ್‍ನಲ್ಲಿ ಪ್ರತಿ ಕೆ.ಜಿ.ಗೆ 3 ರೂ. ನೀಡಿ ಖರೀದಿಸಬೇಕಿರುತ್ತದೆ. ಭೀಕರ ಬರಗಾಲವನ್ನು ಎದುರಿಸುತ್ತಿದ್ದು, ಮೇವನ್ನು ಹಣ ನೀಡಿ ಖರೀದಿಸುವುದು ಕಷ್ಟವಾಗಿದ್ದು, ಉಚಿತವಾಗಿ ಮೇವು ವಿತರಿಸಬೇಕೆಂದು ಮನವಿ ಮಾಡಿದರು.

ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಬರ ಪರಿಸ್ಥಿತಿಯ ವಸ್ತುಸ್ಥಿತಿಯ ಬಗ್ಗೆ ಚರ್ಚಿಸಲು ಡಿ.16ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣಕ್ಕೆ ಸಚಿವ ಸಂಪುಟದ ಸಚಿವರ ಉಪ ಸಮಿತಿ ಆಗಮಿಸಲಿದೆ. ಅವರೊಂದಿಗೆ ಚರ್ಚಿಸಿ ಮನವಿ ಸಲ್ಲಿಸಲಾಗುವುದು ಎಂದರು.
ಮೇವು ವಿತರಣೆ ಪಶು ಸಂಗೋಪನೆ ಇಲಾಖೆ ಅವರು ನಡೆಸಿರುವ ರಾಸುಗಳ ಸಮೀಕ್ಷೆಯ ಆಧಾರದ ಮೇಲೆ ನಡೆಯಲಿದೆ. ಪಶು ಸಂಗೋಪನಾ ಇಲಾಖೆಯವರು ಸಮೀಕ್ಷೆಯ ಅವಶ್ಯಕತೆ ಇದ್ದಲ್ಲಿ ಇನ್ನೊಮ್ಮೆ ಮನೆ ಮನೆಗೆ ತೆರಳಿ ಸಮೀಕ್ಷೆ ಮಾಡಬೇಕು. ಸಮೀಕ್ಷೆಯಲ್ಲಿ ತಮ್ಮ ರಾಸುಗಳನ್ನು ಸೇರ್ಪಡೆ ಮಾಡಿಲ್ಲ ಎಂಬ ದೂರುಗಳು ಕೇಳಿ ಬರಬಾರದು ಎಂದು ಸೂಚನೆ ನೀಡಿದರು.

ಕಂದಾಯ ಇಲಾಖೆ ಅವರು ಉತ್ತಮ ಗುಣಮಟ್ಟದ ಒಣಗಿರುವ ಹುಲ್ಲನ್ನು ಖರೀದಿ ಮಾಡುವುದು. ಹುಲ್ಲನ್ನು ವಿತರಿಸುವ ಸಂದರ್ಭದಲ್ಲಿ ಒಂದು ಹಸುವಿಗೆ 25 ಕೆ.ಜಿ. ಹುಲ್ಲು ನೀಡಲು ತಿಳಿಸಲಾಗಿದೆ. ಕೆಲವು ಗ್ರಾಮಸ್ಥರ ಬಳಿ ಹೆಚ್ಚು ರಾಸುಗಳು ಇರುತ್ತದೆ, ಕೆಲವರ ಬಳಿ ಒಂದೇ ಹಸು ಇರುತ್ತದೆ. ಕಂದಾಯ ಇಲಾಖೆಯವರು ತೊಂದರೆಯಾಗದಂತೆ ಸಮನ್ವಯತೆಯಿಂದ ಮೇವು ವಿತರಿಸಬೇಕು. ಮೇವು ಖರೀದಿಸುವ ಸಂದರ್ಭದಲ್ಲಿ ರೈತರು ಸಹ ಕಂದಾಯ ಇಲಾಖೆಯೊಂದಿಗೆ ಸಹಕರಿಸುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಡಿ.ರಂದೀಪ್ ಅವರು ಮಾತನಾಡಿ, ಮೇವು ಬ್ಯಾಂಕಿನಲ್ಲಿ ಉಚಿತವಾಗಿ ಮೇವು ವಿತರಿಸಲು ಸಾಧ್ಯವಿಲ್ಲ. ಸರ್ಕಾರಕ್ಕೆ ಗೋಶಾಲೆ ತೆರೆಯುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಗೋಶಾಲೆ ತೆರೆದ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ರಾಸುಗಳನ್ನು ಗೋಶಾಲೆಗೆ ಕರೆತಂದು ಗೋಶಾಲೆಯಲ್ಲಿ ಕಟ್ಟಿಹಾಕಿ ಉಚಿತವಾಗಿ ಮೇವು ಪಡೆದುಕೊಳ್ಳಬಹುದು. ಬರಗಾಲವಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಿಂದ ಹೊರರಾಜ್ಯಗಳಿಗೆ ಮೇವು ಮಾರಾಟ ಹಾಗೂ ಸಾಗಾಣಿಕೆ ಮಾಡದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ಪ್ರಸಾದ್ ಮೂರ್ತಿ ಅವರು ಮಾತನಾಡಿ, ಮೈಸೂರು ತಾಲೂಕಿನಲ್ಲಿ 4, ನಂಜನಗೂಡು 4, ಪಿರಿಯಾಪಟ್ಟಣ 2, ಹುಣಸೂರು 2, ಹೆಚ್.ಡಿ.ಕೋಟೆ 2, ಟಿ.ನರಸಿಪುರ 1, ಕೆ.ಆರ್.ನಗರ 1 ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ 16 ಮೇವು ಬ್ಯಾಂಕ್ ತೆರೆಯಲು ಉದ್ದೇಶಿಸಲಾಗಿದೆ ಎಂದರು.

ಮೈಸೂರು ತಾಲೂಕು ತಹಸೀಲ್ದಾರ್ ರಮೇಶ್ ಬಾಬು, ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರೇಮ ಕುಮಾರಿ ಮಹದೇವಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ಮಹದೇವು, ಕಂದಾಯ ನಿರೀಕ್ಷಕ ಕೆಂಚಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: