ಪ್ರಮುಖ ಸುದ್ದಿ

ಪಠ್ಯದಲ್ಲಿ ಅನೈತಿಕ ಸಂಬಂಧವನ್ನು ಅಳವಡಿಸಿ ಮತ್ತೊಂದು ಎಡವಟ್ಟು ಮಾಡಿಕೊಂಡ ಮಂಗಳೂರು ವಿವಿ

ರಾಜ್ಯ(ಮಂಗಳೂರು)ಜು.12:-  ಸೈನಿಕರನ್ನು ಅವಹೇಳನಕಾರಿಯಾಗಿ ಬಿಂಬಿಸಿದ “ಯುದ್ಧ” ಎನ್ನುವ ಕಾದಂಬರಿಯನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಿ ವಿವಾದಕ್ಕೀಡಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಮತ್ತೆ ಪಠ್ಯದಲ್ಲಿ ಅನೈತಿಕ ಸಂಬಂಧವನ್ನು ಅಳವಡಿಸಿ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.

ಪರೀಕ್ಷಾ ಗೊಂದಲ, ದೋಷಪೂರಿತ ಫಲಿತಾಂಶ ಪ್ರಕಟ, ಅಂಕಪಟ್ಟಿ ಹಗರಣ, ಸಿ.ಸಿ. ಕ್ಯಾಮರಾ ಹಗರಣ, ನೇಮಕಾತಿ ಹಗರಣ, ಗುತ್ತಿಗೆ ಹಗರಣಗಳನ್ನು ಎದುರಿಸುತ್ತಿರುವ  ಮಂಗಳೂರು ವಿವಿಯು ತನ್ನ ಮೂರನೇ ಚತುರ್ಮಾಸದ ಬಿಕಾಂ ಪದವಿ ತರಗತಿಯ ಕನ್ನಡ ಭಾಷಾ ಬೋಧನೆಗೆ ನಿಗದಿಪಡಿಸಿದ ‘ನುಡಿ ನೂಪುರ’ ಪಠ್ಯದಲ್ಲಿ ಪಾಠವಾಗಿ ಅಳವಡಿಸಿದ ದಿ.ಮಟ್ಟಾರು ವಿಠಲ ಹೆಗ್ಡೆಯವರ “ಮಗುವಿನ ತಂದೆ” ಎನ್ನುವ ವಿಚಿತ್ರ ಹೆಸರುಳ್ಳ ಹೆಣ್ಣಿನ ಕಥೆಯಲ್ಲಿ ಅಶ್ಲೀಲ ಸಂಬಂಧದ ಬಗ್ಗೆ ತಿಳಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಮುಜುಗರಕ್ಕೀಡಾಗುವಂತೆ ಮಾಡಿದೆ.

ಅಶ್ಲೀಲತೆಯ ಪ್ರಯೋಗಗಳು, ಲೈಂಗಿಕತೆಯಿಂದ ಕೂಡಿರುವ ದೈಹಿಕ ವರ್ಣನೆಗಳು, ವಿವಾಹವೇತರ ಸಂಬಂಧಗಳನ್ನು ನೈತಿಕಗೊಳಿಸುವ ನೀಚ ಪ್ರಯತ್ನಗಳನ್ನು ಈ ಕಥೆಯಲ್ಲಿ ಬರೆಯಲಾಗಿದೆ. ಇದಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾರೀ  ವಿರೋಧ ವ್ಯಕ್ತಪಡಿಸಿದ್ದು, ಇದರಿಂದ ಎಚ್ಚೆತ್ತುಕೊಂಡ ವಿವಿಯ ಆಡಳಿತ ಮಂಡಳಿ ಕೊನೆಗೂ ಪಠ್ಯದಲ್ಲಿರುವ “ಮಗುವಿನ ತಂದೆ” ಪಾಠವನ್ನು ವಾಪಸ್ ಪಡೆದು ಪ್ರಕಟಣೆ ಹೊರಡಿಸಿದೆ.

ಪುಸ್ತಕದಲ್ಲಿ ಏನಿದೆ? “ವೈದ್ಯರೊಬ್ಬರ ಪತ್ನಿ ತನ್ನ ಶಾರೀರಿಕ ಸುಖವನ್ನು ತನ್ನ ಪತಿಯಿಂದ ಪಡೆಯದ ಕಾರಣ, ಅನ್ಯ ಯುವಕನೊಂದಿಗೆ ಅನೈತಿಕ ಸಂಬಂಧವನ್ನು ಹೊಂದುತ್ತಾಳೆ. ಬಳಿಕ ಈ ಅನೈತಿಕ ಸಂಬಂಧದಿಂದ ಮಗುವೊಂದನ್ನು ಪಡೆಯುತ್ತಾಳೆ. ಅನಂತರ ಮಗು ತನ್ನ ಗಂಡನದೇ ಅಥವಾ ಅನೈತಿಕ ಸಂಬಂಧದಿಂದ ಹುಟ್ಟಿದ್ದೇ” ಎನ್ನುವ ಗೊಂದಲವಿರುವ ಹೆಣ್ಣಿನ ಕಥೆ ಇದಾಗಿದೆ.

ಈ ಕಥೆಯಲ್ಲಿ ಯುವಕ ಮತ್ತು ವೈದ್ಯನ ಪತ್ನಿಯ ನಡುವೆ ನಡೆಯುವ ಮಿಲನ ಕ್ರಿಯೆಯನ್ನು ಅತ್ಯಂತ ಹೇಯ ರೀತಿಯಲ್ಲಿ ಬರೆಯಲಾಗಿದೆ.“ಡಾಕ್ಟರರ ಬಿಡುವಿರದ ಕಾರ್ಯ ಬಾಹುಳ್ಯದಿಂದ ರತ್ನ ತೃಪ್ತಿಗೊಳ್ಳದೇ ಇರಲು ಕಾರಣವೇನು?,“ಸುಬ್ಬನನ್ನು ಕಂಡು ರತ್ನ ಮನಸೋತ ಸಂದರ್ಭವನ್ನು ನಿರೂಪಿಸಿ? ಎನ್ನುವ ಅಸಹ್ಯ ಪ್ರಶ್ನೆಗಳನ್ನು ಈ ಕಥೆಯಲ್ಲಿ ವಿದ್ಯಾರ್ಥಿಗಳಿಗೆ ಕೇಳಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: