ಕರ್ನಾಟಕ

ಹೊಸ ತಾಲ್ಲೂಕು ಕಾರ್ಯಾರಂಭ ಪ್ರಗತಿ : ಸಚಿವ ಆರ್.ವಿ.ದೇಶಪಾಂಡೆ

ಬೆಂಗಳೂರು (ಜುಲೈ 12): ಹೊಸ ತಾಲ್ಲೂಕುಗಳಲ್ಲಿ ಕಂದಾಯ ಇಲಾಖಾ ಕಚೇರಿಗಳು ಕಾರ್ಯಾರಂಭ ಮಾಡಿದ್ದು, ಇತರೆ ಇಲಾಖಾ ಕಚೇರಿಗಳನ್ನು ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಹಂತ ಹಂತವಾಗಿ ತೆರೆಯಲು ಸರ್ಕಾರ ಅನುಮತಿ ನೀಡಿದೆ ಎಂದು ಕಂದಾಯ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನನೋಪಾಯ ಸಚಿವ ಆರ್.ವಿ. ದೇಶಪಾಂಡೆ ಅವರು ತಿಳಿಸಿದರು.

ಪರಿಷತ್ತಿನ ಸದಸ್ಯ ಟಿ.ಎ. ಶರವಣ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಬುಧವಾರ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 50 ಹೊಸ ತಾಲ್ಲೂಕುಗಳನ್ನು ಜನವರಿ 2018 ರಿಂದ ಅನ್ವಯವಾಗುವತೆ ರಚಿಸಿ ಆದೇಶಿಸಲಾಗಿದೆ. ಎಂ.ಬಿ. ಪ್ರಕಾಶ್ ಅಧ್ಯಕ್ಷತೆಯಲ್ಲಿನ ತಾಲ್ಲೂಕು ಪುನರ್ ರಚನಾ ಸಮಿತಿ ನೀಡಿರುವ ವರದಿಯಲ್ಲಿ ಪ್ರತಿ ಹೊಸ ತಾಲ್ಲೂಕಿನಲ್ಲಿ 14 ಮುಖ್ಯವಾದ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿರುತ್ತವೆ ಎಂದು ಗುರುತಿಸಿದೆ. ಪ್ರತಿ ತಾಲ್ಲೂಕಿನ ಅವಶ್ಯಕತೆಗೆ ಅನುಗುಣವಾಗಿ ಇಲಾಖೆಗಳು ಕಾರ್ಯನಿರ್ವಹಿಸುತ್ತವೆ. ಹೊಸ ತಾಲ್ಲೂಕುಗಳಲ್ಲಿ ಕೆಲವು ಕಡೆ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿಗೆ ಸ್ಥಳ ಗುರುತಿಸಲಾಗಿದೆ. ಇನ್ನು ಕೆಲವು ಕಡೆ ಸ್ಥಳ ಗುರುತಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಹೊಸ ತಾಲ್ಲೂಕುಗಳ ಕಾರ್ಯಾರಂಭ ಮತ್ತು ಆಡಳಿತಾತ್ಮಕ ಪ್ರಕ್ರಿಯೆಯನ್ನು ಪ್ರಾರಂಭಿಸಲು ಪ್ರತಿ ತಾಲ್ಲೂಕಿಗೆ 10.00 ಲಕ್ಷ ರೂ. ಗಳಂತೆ ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಹಾಗೂ ತಾಲ್ಲೂಕು ಕಚೇರಿಗೆ ಅವಶ್ಯವಿರುವ ಸಿಬ್ಬಂದಿಯನ್ನು ಸೃಜಿಸಲಾಗಿರುತ್ತದೆ. ಅಧಿಕಾರಿ/ಸಿಬ್ಬಂದಿಗಳನ್ನು ಮುಂಬಡ್ತಿ ಮೂಲಕ ಹಾಗೂ ಹೆಚ್ಚುವರಿ ಪ್ರಭಾರದಲ್ಲಿಟ್ಟು ಕಾರ್ಯನಿರ್ವಹಿಸಲು ಕ್ರಮ ವಹಿಸಲಾಗಿದೆ ಎಂದರು.

ಹೊಸ ತಾಲ್ಲೂಕು ಕೇಂದ್ರಗಳಿಗೆ ಮಿನಿ ವಿಧಾನಸೌಧ ನಿರ್ಮಾಣ ಹಾಗೂ ಇತರೆ ಮೂಲ ಸೌಲಭ್ಯ ಒದಗಿಸುವ ಬಗ್ಗೆ ಸವಿವರ ಅಂದಾಜು ಪಟ್ಟಿಯೊಂದಿಗೆ ಸೂಕ್ತ ಪ್ರಸ್ತಾವನೆ ಬಂದ ನಂತರ ಪರಿಶೀಲಿಸಿ, ಹಣ ಬಿಡುಗಡೆ ಬಗ್ಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು. (ಎನ್.ಬಿ)

Leave a Reply

comments

Related Articles

error: