ಕರ್ನಾಟಕ

ಕಂದಾಯ ಗ್ರಾಮ ರಚನೆ – 672 ಪ್ರಕರಣಗಳಲ್ಲಿ ಅಂತಿಮ ಅಧಿಸೂಚನೆ: ಸಚಿವ ದೇಶಪಾಂಡೆ

ಬೆಂಗಳೂರು (ಜುಲೈ 12): ರಾಜ್ಯಾದ್ಯಂತ ಗೊಲ್ಲರಹಟ್ಟಿಗಳು ಸೇರಿದಂತೆ ದಾಖಲೆರಹಿತ ಜನವಸತಿ ಪ್ರದೇಶಗಳಾದ ವಡ್ಡರಹಟ್ಟಿ, ಕುರುಬರಹಟ್ಟಿ, ಮಜರೆ, ಹಾಡಿ, ದೊಡ್ಡಿ, ಪಾಳ್ಯ, ಕ್ಯಾಂಪ್ ಕಾಲೋನಿ ಇತ್ಯಾಧಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಮಾರ್ಚ್ 2016 ರಲ್ಲಿ ಸರ್ಕಾರಿ ಆದೇಶ ಹೊರಡಿಸಲಾಗಿದೆ ಎಂದು ಕಂದಾಯ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನನೋಪಾಯ ಸಚಿವ ಆರ್.ವಿ.ದೇಶಪಾಂಡೆ ಅವರು ಬುಧವಾರ ತಿಳಿಸಿದರು.

ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀಮತಿ ಜಯಮ್ಮ ಅವರು ಕೇಳಿದ ಕಂದಾಯ ಗ್ರಾಮಗಳ ರಚನೆ ಕುರಿತು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿ ಮಾತನಾಡಿ ಸದರಿ ಆದೇಶದಂತೆ ವಿವಿಧ ಜಿಲ್ಲಾಧಿಕಾರಿಗಳಿಂದ ಒಟ್ಟು 2323 ಪ್ರಾಥಮಿಕ ಅಧಿಸೂಚನೆ ಪ್ರಸ್ತಾವನೆಗಳು ಸ್ವೀಕೃತವಾಗಿವೆ. ಇದುವರೆಗೆ ಒಟ್ಟು 1369 ಪ್ರಕರಣಗಳಲ್ಲಿ ಪ್ರಾಥಮಿಕ ಅಧಿಸೂಚನೆ ಮತ್ತು 672 ಪ್ರಕರಣಗಳಲ್ಲಿ ಅಂತಿಮ ಅಧಿಸೂಚನೆಗಳನ್ನು ಹೊರಡಿಸಲಾಗಿದೆ.

ಅರ್ಹವಿರುವ ದಾಖಲೆರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆಗಳು ಸ್ವೀಕೃತವಾಗುತ್ತಿವೆ ಎಂದರು.

ದಾಖಲೆ ರಹಿತ ಜನವಸತಿಗಳಲ್ಲಿನ ನಿವಾಸಿಗಳಿಗೆ ಹಕ್ಕು ದಾಖಲೆಗಳನ್ನು ನೀಡುವ ಸಂಬಂಧ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 94 ಕ್ಕೆ ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961 ರ ಕಲಂ 38 ಕ್ಕೆ ತಿದ್ದುಪಡಿಗಳನ್ನು ತಂದು ನಿಯಮಗಳನ್ನು ರೂಪಿಸಲಾಗಿದೆ. ಅದರಂತೆ ಅಂತಿಮ ಅಧಿಸೂಚನೆ ಹೊರಡಿಸಿರುವ ದಾಖಲೆ ರಹಿತ ಜನವಸತಿಗಳಲ್ಲಿನ ನಿವಾಸಿಗಳಿಗೆ ಹಕ್ಕುದಾಖಲೆಗಳನ್ನು ನೀಡಲು ನಿಯಮಾನುಸಾರ ಕ್ರಮ ವಹಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು, ಕಾರ್ಯವು ಪ್ರಗತಿಯಲ್ಲಿದೆ. ಇದುವರೆಗೆ 672 ಪ್ರಕರಣಗಳಲ್ಲಿ ಅಂತಿಮ ಅಧಿಸೂಚನೆಗಳನ್ನು ಹೊರಡಿಸಲಾಗಿದೆ ಎಂದರು.(ಎನ್.ಬಿ)

Leave a Reply

comments

Related Articles

error: